Rain Updates | ಬೆಂಗಳೂರಿನಲ್ಲಿ ಮತ್ತೆ ಅಬ್ಬರಿಸಿದ ಮಳೆ; ಧರೆಗುರುಳಿದ ಮರ, ಕಟ್ಟಡ

ಜಲಾವೃತ ಪ್ರದೇಶಗಳಾದ ಟಾಟಾ ನಗರ ಹಾಗೂ ಭದ್ರಪ್ಪ ಲೇಔಟ್ ನಲ್ಲಿ ಖುದ್ದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರೇ ಎಂಜಿನಿಯರುಗಳೊಂದಿಗೆ ಟ್ರ್ಯಾಕ್ಟರ್ ಏರಿ ಹಾನಿ ಪರಿಶೀಲಿಸಿದರು

Update: 2024-10-22 13:33 GMT

ಬೆಂಗಳೂರಿನಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿಯಿತು. ಮಧ್ಯಾಹ್ನದಿಂದ ನಗರದ ವಿವಿಧೆಡೆ ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಗಳು ಜಲಾವೃತಗೊಂಡವು.

ಮಲ್ಲೇಶ್ವರಂನ ಕೆಲ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಅಲ್ಲದೇ ಬೃಹತ್ ಗಾತ್ರ ಮರವೊಂದು ಆಟೊ ಹಾಗೂ ಬೈಕ್‌ಗಳ ಮೇಲೆ ಬಿದ್ದಿದ್ದು, ವಾಹನಗಳು ಜಖಂ ಆಗಿವೆ.

ರಾಜಾಜಿನಗರ, ಮಂಜುನಾಥ ನಗರ, ಭಾಷ್ಯಂ ಸರ್ಕಲ್, ವಿಜಯನಗರ ಸೇರಿದಂತೆ ಹಲವೆಡೆ ಕೆಲ ತಾಸುಗಳವರೆಗೆ ಬಿರುಸು ಮಳೆ ಸುರಿಯಿತು. ಇದರಿಂದ ರಾಜಾಜಿನಗರ ಮುಖ್ಯರಸ್ತೆಯ ಒಂದು ಭಾಗ ಸಂಪೂರ್ಣ ಜಲಾವೃತವಾಯಿತು.

ಎಂ.ಜಿ.ರಸ್ತೆ, ಶಾಂತಿನಗರ, ಮಡಿವಾಳ ರಸ್ತೆ, ಲಾಲ್ ಬಾಗ್, ಕೆ.ಆರ್. ಮಾರುಕಟ್ಟೆ, ಟೌನ್‌ ಹಾಲ್‌ನಲ್ಲಿಯೂ ವಿಪರೀತ ಮಳೆಯಾಗಿದೆ.

ಇನ್ನು ಸೋಮವಾರ ರಾತ್ರಿಯಿಂದಲೇ ಧಾರಾಕಾರ ಮಳೆಗೆ ನಲುಗಿದ್ದ ಟಾಟಾ ನಗ, ಭದ್ರಪ್ಪ ಲೇಔಟ್ ನಲ್ಲಿ ಇಂದು ಕೂಡ ಮಳೆಯಾಗಿದೆ.

ಯಲಹಂಕದ ಕೋಗಿಲು ಕ್ರಾಸ್ ಸಮೀಪದ ಮಾರುತಿ ನಗರ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿನ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡಿದರು.

ಜಲಾವೃತ ಪ್ರದೇಶಗಳಾದ ಟಾಟಾ ನಗರ ಹಾಗೂ ಭದ್ರಪ್ಪ ಲೇಔಟ್ ನಲ್ಲಿ ಖುದ್ದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರೇ ಎಂಜಿನಿಯರುಗಳೊಂದಿಗೆ ಟ್ರ್ಯಾಕ್ಟರ್ ಏರಿ ಹಾನಿ ಪರಿಶೀಲಿಸಿದರು.

ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ

ಈ ಮಧ್ಯೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ಮಳೆ ಹಾನಿ ಪ್ರದೇಶಗಳಲ್ಲಿ ಅನಾಹುತ ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಅವರು, ತಗ್ಗುಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪಾರ್ಟ್ ಮೆಂಟ್ಗಳಲ್ಲಿ ಜಲದಿಗ್ಭಂಧನಕ್ಕೆ ಒಳಗಾಗಿರುವ ಜನರಿಗೆ ಬಿಬಿಎಂಪಿ ವತಿಯಿಂದ ಆಹಾರ ಹಾಗೂ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Tags:    

Similar News