Bengaluru Rains| ಕೊಂಚ ಬಿಡುವು ಕೊಟ್ಟ ಮಳೆ; ಸಹಜ ಸ್ಥಿತಿಗೆ ಸಿಲಿಕಾನ್ ಸಿಟಿ
ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಮಂಗಳವಾರ ಮತ್ತು ಬುಧವಾರ ಮತ್ತು ಯಲಹಂಕ ವಲಯದಲ್ಲಿ ಮಂಗಳವಾರ ಅತಿ ಹೆಚ್ಚು ಮಳೆಯಾಗಿದೆ. ಚೌಡೇಶ್ವರಿ ನಗರದಲ್ಲಿ 73.5 ಮಿ.ಮೀ ಹಾಗೂ ಜಕ್ಕೂರು ಭಾಗದಲ್ಲಿ 65.5 ಮಿ.ಮೀ ಮಳೆಯಾಗಿದೆ.;
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು,ಗುರುವಾರ ಮಳೆ ಕೊಂಚ ಕಡಿಮೆಯಾಗಿದ್ದು, ನಗರ ಸಹಜ ಸ್ಥಿತಿಗೆ ಮರಳುತ್ತಿದೆ.
ಪ್ರಮುಖವಾಗಿ ಬೆಂಗಳೂರಿನ ಐಟಿ ಹಬ್ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮಳೆ ಅನಾಹುತ ಸೃಷ್ಟಿಸಿ 300 ಎಕರೆ ಕ್ಯಾಂಪಸ್ ನೀರು ನುಗಿತ್ತು. ರಸ್ತೆ ತುಂಬಾ ನೀರು ತುಂಬಿಕೊಂಡು ವಾಹನಗಳು ಅದರಲ್ಲಿ ಸಿಲುಕಿ ಸಂಚಾರಕ್ಕೆ ಸವಾರರು ಪರದಾಡುವಂತಾಗಿತ್ತು. ಭಾರೀ ಮಳೆಗೆ ಮಾನ್ಯತಾ ಟೆಕ್ ಪಾರ್ಕ್ ಪ್ರವಾಹಪೀಡಿತ ಪ್ರದೇಶದಂತಾಗಿದ್ದು, ಭೂ ಕುಸಿತವೂ ಸಂಭವಿಸಿತ್ತು. ಇದೀಗ ಗುರುವಾರ ಮಳೆ ಕೊಂಚ ಬಿಡುವು ನೀಡಿದ್ದು, ಕ್ಯಾಂಪಸ್ ನಿಧಾನವಾಗಿ ಸಹಜ ಸ್ಥಿತಿ ಮರಳುತ್ತಿದೆ. ಟೆಕ್ ಪಾರ್ಕ್ ಆಡಳಿತ ಮಂಡಳಿಯು ಕ್ಯಾಂಪಸ್‌ನಿಂದ ಮಳೆನೀರನ್ನು ಹೊರಹಾಕಿದೆ ಮತ್ತು ನೀರಿನಿಂದ ತುಂಬಿದ ರಸ್ತೆಗಳನ್ನು ಈಗ ತೆರವುಗೊಳಿಸಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ಅನ್ನು ನಿರ್ವಹಿಸುವ ಎಂಬಸಿ ಗ್ರೂಪ್ ಟೆಕ್ ಪಾರ್ಕ್, ಸಮಗ್ರ ಪ್ರವಾಹ ಅಪಾಯ ನಿರ್ವಹಣೆಯನ್ನು ಮಾಡಿದೆ. ತಜ್ಞರ ಮೌಲ್ಯಮಾಪನಗಳ ಆಧಾರದ ಮೇಲೆ ಸಮಗ್ರ ಪ್ರವಾಹ ಅಪಾಯ ನಿರ್ವಹಣೆ ಕ್ರಮಗಳನ್ನು ಸಂಯೋಜಿಸಿದ್ದೇವೆ. ಈ ಪ್ರಯತ್ನಗಳು ಅಂತಹ ಘಟನೆಗಳನ್ನು ನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ಗಮನಾರ್ಹವಾಗಿ ಬಲಪಡಿಸಿದೆ. ಜಲಾವೃತವಾದ 2 ರಿಂದ 4 ಗಂಟೆಗಳಲ್ಲಿ ಪ್ರವಾಹದ ನೀರನ್ನು ತೆರವುಗೊಳಿಸಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಮಧ್ಯೆ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಕಚೇರಿಗಳನ್ನು ಹೊಂದಿರುವ ಅನೇಕ ಕಂಪನಿಗಳು ಕೆಲಸಕ್ಕೆ ಪ್ರಯಾಣಿಸುವಾಗ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಈಗಾಗಲೇ ಐಟಿ ಕಂಪನಿಗಳಿಗೆ ಮಂಗಳವಾರ ಸಲಹೆ ನೀಡಿದೆ. ಕೆಲವು ಕಂಪನಿಗಳು ಉದ್ಯೋಗಿಗಳು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವ ದಿನವನ್ನು ವಿಸ್ತರಿಸಿದೆ.
52 ಪ್ರದೇಶಗಳಲ್ಲಿ ಪ್ರವಾಹ ದಾಖಲು
ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಮಂಗಳವಾರ ಮತ್ತು ಬುಧವಾರ ಮತ್ತು ಯಲಹಂಕ ವಲಯದಲ್ಲಿ ಮಂಗಳವಾರ ಅತಿ ಹೆಚ್ಚು ಮಳೆಯಾಗಿದೆ. ಚೌಡೇಶ್ವರಿ ನಗರದಲ್ಲಿ 73.5 ಮಿ.ಮೀ ಹಾಗೂ ಜಕ್ಕೂರು ಭಾಗದಲ್ಲಿ 65.5 ಮಿ.ಮೀ ಮಳೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವಿಪತ್ತು ನಿರ್ವಹಣಾ ತಂಡವು 102 ಮನೆಗಳಲ್ಲಿನ ಪ್ರವಾಹ ಸಮಸ್ಯೆಗಳನ್ನು ಪರಿಹರಿಸಿದೆ ಎಂದು ಹೇಳಿದೆ. ಬಿಬಿಎಂಪಿ ಪ್ರಕಾರ 142 ಮನೆಗಳಿಗೆ ನೀರು ನುಗ್ಗಿದ್ದು, 39 ಮರಗಳು ಬಿದ್ದಿವೆ. ಬಿದ್ದಿರುವ ಈ ಪೈಕಿ 26 ಮರಗಳನ್ನು ಬಿಬಿಎಂಪಿ ವಿಲೇವಾರಿ ಮಾಡಿದ್ದು, ನಗರದಾದ್ಯಂತ 52 ಪ್ರದೇಶಗಳಲ್ಲಿ ಪ್ರವಾಹ ದಾಖಲಾಗಿದೆ.
ಭಾರೀ ಮಳೆ ನಿರೀಕ್ಷೆ
ರಾಜ್ಯದಲ್ಲಿ ಅಕ್ಟೋಬರ್ 22ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಆ ನಂತರ ಮಳೆಯ ತೀವ್ರತೆ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಗುರುವಾರದಿಂದ ಅಕ್ಟೋಬರ್ 22ರವರೆಗೆ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರ್ಗಿ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಆರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹೇಳಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಅಕ್ಟೋಬರ್ 23ರವರಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.