ಮೂರನೇ ದಿನವೂ ಮುಂದುವರಿದ ಮಳೆ: ರಸ್ತೆಗಳು ಜಲಾವೃತ, ಮೂವರು ಸಾವು; ಜನಜೀವನ ಅಸ್ತವ್ಯಸ್ತ
ನಗರದ ಬಹುತೇಕ ರಸ್ತೆಗಳ ಮೇಲೆ ಭಾರಿ ಪ್ರಮಾಣದ ಮಳೆ ನೀರು ನಿಂತುಕೊಂಡಿದ್ದು, ಕೆರೆಗಳಂತಾಗಿವೆ. ಹೀಗಾಗಿ ವಾಹನ ಸಂಚಾರಕ್ಕೆ ಸಂಪೂರ್ಣ ಅಡಚಣೆ ಉಂಟಾಯಿತು. ಮಳೆ ನಿಂತಿದ್ದರೂ, ರಸ್ತೆಗಳ ಮೇಲಿನ ನೀರು ಇಳಿಯುತ್ತಿಲ್ಲ.;
ಮುಂಗಾರುಪೂರ್ವ ಮಳೆಯ ಅಬ್ಬರಕ್ಕೆ ಸಿಲಿಕಾನ್ ಬೆಂಗಳೂರು ನಗರ ತತ್ತರಿಸಿದೆ. ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯ ಪರಿಣಾಮ ಮೂವರು ದುರ್ಮರಣ ಹೊಂದಿದ್ದಾರೆ.
ಮಳೆ ಸಂಬಂಧಿಸಿದ ಅನಾಹುತಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಬಿಟಿಎಂ ಲೇಔಟ್‌ನ ಎನ್.ಎಸ್.ಪಾಳ್ಯದಲ್ಲಿರುವ ಮಧುವನ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್ ಜಲಾವೃತಗೊಂಡಿದ್ದು, ನೀರು ಹೊರಹಾಕಲು ಯತ್ನಿಸುತ್ತಿದ್ದ 55 ವರ್ಷದ ಮನೋಹರ ಕಾಮತ್ ಮತ್ತು 9 ವರ್ಷದ ಬಾಲಕ ದಿನೇಶ್ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ.
ಕೆರೆಗಳಂತಾದ ರಸ್ತೆಗಳು
ನಗರದ ಬಹುತೇಕ ರಸ್ತೆಗಳ ಮೇಲೆ ಭಾರಿ ಪ್ರಮಾಣದ ಮಳೆ ನೀರು ನಿಂತುಕೊಂಡಿದ್ದು, ಕೆರೆಗಳಂತಾಗಿವೆ. ಹೀಗಾಗಿ ವಾಹನ ಸಂಚಾರಕ್ಕೆ ಸಂಪೂರ್ಣ ಅಡಚಣೆ ಉಂಟಾಯಿತು. ಮಳೆ ನಿಂತಿದ್ದರೂ, ರಸ್ತೆಗಳ ಮೇಲಿನ ನೀರು ಇಳಿಯುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ತೀವ್ರ ಪರದಾಡುತ್ತಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಶೇಷವಾಗಿ ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಆಂಬ್ಯುಲೆನ್ಸ್‌ಗಳು ಸಹ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಪರದಾಡುವ ದೃಶ್ಯ ಕಂಡುಬಂದಿದೆ.
ಎಲ್ಲೆಲ್ಲಿ ಮಳೆ
ಮೆಜೆಸ್ಟಿಕ್ ಸುತ್ತಮುತ್ತಲೂ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ, ಜಯನಗರ, ಜೆಪಿ ನಗರದಲ್ಲಿ ವಿಜಯನಗರ, ಚಂದ್ರಲೇಔಟ್, ನಾಗರಬಾವಿ, ರಾಜಾಜಿನಗರ, ಆರ್.ಟಿ. ನಗರ, ಹೆಬ್ಬಾಳ, ಕೋರಮಂಗಲ, ಆರ್.ಆರ್. ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ರಾತ್ರಿ ಸುರಿದ ಮಳೆಯು ರಾಜಧಾನಿ ಜನರ ನಿದ್ದೆಗೆಡಿಸಿದೆ.
ನಂದಗೋಕುಲ ಬಡಾವಣೆ ತತ್ತರ
ನಾಗವಾರದ ಧಣಿಸಂಧ್ರದ ನಂದಗೋಕುಲ ಬಡಾವಣೆಯಲ್ಲಿ ಮಳೆ ಅಬ್ಬರಕ್ಕೆ ಮನೆಯೊಳಗೆ ಸುಮಾರು 4-5 ಅಡಿ ನೀರು ನಿಂತಿದ್ದು, ಬಡಾವಣೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾಜಕಾಲುವೆ ತುಂಬಿ ಹರಿದು ಬಡಾವಣೆಗೆ ನುಗ್ಗಿದೆ. ಇದರಿಂದ ಕೋಪಗೊಂಡ ನಿವಾಸಿಗಳು ಪಾಲಿಕೆ ಅಧಿಕಾರಿಗಳು ಮತ್ತು ಶಾಸಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋರಮಂಗಲದಲ್ಲಿ ಪ್ರವಾಹ ಸನ್ನಿವೇಶ
ಕೋರಮಂಗಲದ ಐಷಾರಾಮಿ ಪ್ರದೇಶಗಳೂ ಭಾರಿ ಮಳೆಗೆ ಕೆರೆಯಂತಾಗಿದೆ. ಸುಮಾರು ಮೂರು ಅಡಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೋರಮಂಗಲದ ನಾಲ್ಕನೇ ಬ್ಲಾಕ್ ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಿಂದ ಹೊರಬರಲು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ನಗರದ ಕೆಲವು ಭಾಗಗಳಲ್ಲಿ ನಿರಂತರ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ನಗರದ ಕದ್ರಿ ಪ್ರದೇಶದಲ್ಲಿ ಮರವೊಂದು ಬುಡಮೇಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಸ್ತೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಕರಾವಳಿ ಕರ್ನಾಟಕ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸಿದೆ.
ಬೆಂಗಳೂರಿನಲ್ಲಿ ಮಳೆ ಅನಾಹುತ ಸಂಭವಿಸಿರುವ ಪ್ರದೇಶಗಳಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದ ನಿಯೋಗ ಭೇಟಿ ನೀಡಿ, ಇಂದು ಪರಿಶೀಲನೆ ನಡೆಸಿತು. ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ರಸ್ತೆಯಲ್ಲಿ ಹೆಚ್ಚು ನೀರು ಹರಿಯುತ್ತಿದ್ದು, ಇಲ್ಲಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ಮಳೆ ಹಾನಿಗೆ ಕಾರಣಗಳು, ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿದರು. ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಬಿಜೆಪಿ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಸತೀಶ್ ರೆಡ್ಡಿ, ಸಿ. ಕೆ. ರಾಮಮೂರ್ತಿ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಂಗಡಿಗಳಿಗೆ ಕೆಸರು ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಡಿ ಮಳೆಗೆ ಜಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ಜಿಲ್ಲೆಯ ಅಪ್ಸರಾ ಐಸ್‌ಕ್ರೀಮ್ ಮಳಿಗೆಗೆ ಭಾರೀ ಮಳೆ ನೀರು ಮತ್ತು ಕೆಸರು ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲಕ್ಷಾಂತರ ರೂ. ಫ್ರಿಡ್ಜ್, ಕೂಲರ್‌ಗಳಿಗೆ ಹಾನಿಯಾಗಿದೆ. ರಸ್ತೆ ಒತ್ತುವರಿ ಹಾಗೂ ಬಿಲ್ಡಿಂಗ್ ಪಾರ್ಕಿಂಗ್ ಒತ್ತುವರಿಯಿಂದ 14 ಫೀಟ್ ಇದ್ದ ಚರಂಡಿ ಈಗ ನಾಲ್ಕು ಅಡಿಗೆ ಇಳಿದಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಏಕಾಏಕಿ ಗಾಳಿ ಮಳೆ ಜೊತೆ ಕೆಸರು ಮಿಶ್ರಿತ ನೀರು ಬಂದ ಕಾರಣ ತಗ್ಗು ಪ್ರದೇಶದ ಅಂಗಡಿಗಳು ಮನೆಗಳು ಜಲಾಮಯವಾಗಿದೆ.
ಕೊಡಗು ಜಿಲ್ಲೆಯ ಹಲವೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಬಿರುಸಿನ ಮಳೆ
ಕೊಡಗು ಜಿಲ್ಲೆಯ ಹಲವೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಬಿರುಸಿನ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಗೆ 'ರೆಡ್ ಅಲರ್ಟ್' ಘೋಷಿಸಿದೆ.
ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ತೀವ್ರಗೊಂಡಿದೆ. ವಿರಾಜಪೇಟೆ, ಸುಂಟಿಕೊಪ್ಪ ಭಾಗಗಳಲ್ಲಿಯೂ ಸಾಧಾರಣ ಮಳೆಯಾಗುತ್ತಿದ್ದರೆ, ಸೋಮವಾರಪೇಟೆ ತಾಲ್ಲೂಕಿನ ಹಲವೆಡೆ ಮಳೆಯಾಗುತ್ತಿದೆ ಎಂದು ವರದಿಯಾಗಿದೆ. ಮಡಿಕೇರಿಯಲ್ಲಿ ನಸುಕಿನಿಂದಲೂ ದಟ್ಟ ಮೋಡಗಳು ಮತ್ತು ಹಿಮ ಕವಿದಿತ್ತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮಳೆಯು ಧಾರಾಕಾರವಾಗಿ ಸುರಿಯುತ್ತಲೇ ಇದೆ.
ಭಾರತೀಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಗೆ 'ರೆಡ್ ಅಲರ್ಟ್' ಘೋಷಿಸಿರುವುದರಿಂದ, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ತಡರಾತ್ರಿಯಿಂದ ಭಾರಿ ಮಳೆಯಾಗಿದೆ. ಇದಲ್ಲದೆ, ಐಎಂಡಿ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಮೇ 21 ರಂದು ರೆಡ್ ಅಲರ್ಟ್ ಮತ್ತು ಮೇ 22 ಮತ್ತು 23 ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಉಸ್ತುವಾರಿ ಡಾ. ಕೆ. ಆನಂದ್ ಅವರು ಮೀನುಗಾರರು ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ಹೋಗದಂತೆ ಸೂಚಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ತಗ್ಗು ಪ್ರದೇಶಗಳು, ನದಿ ದಂಡೆಗಳು ಮತ್ತು ಸಮುದ್ರಕ್ಕೆ ಬಿಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಜಿಲ್ಲೆಯಾದ್ಯಂತ ಕಳೆದ ಮಧ್ಯರಾತ್ರಿಯಿಂದಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲು ಪರದಾಡುವಂತಾಗಿದೆ.
ಜಿಲ್ಲೆಯಾದ್ಯಂತ ಕುದುರೆಮುಖ, ಕಳಸ, ಶೃಂಗೇರಿ, ಕೆರೆಕಟ್ಟೆ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಆಲ್ದೂರು, ಎನ್.ಆರ್.ಪುರ, ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ, ಬಾಬಾಬಡುನ್‌ಗಿರಿ, ಅತ್ತಿಗುಂಡಿ, ಕೆಮ್ಮಣ್ಣುಗುಂಡಿ, ಕಡೂರು, ತರೀಕೆರೆ, ಲಿಂಗದಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಮಳೆಯ ತೀವ್ರತೆಗೆ ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಐಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಮ್
ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಐಟಿ ಕಚೇರಿಗಳಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿದೆ. ಹಲವಾರು ಕಡೆ ರಸ್ತೆಗಳಲ್ಲಿ ನೀರು ತುಂಬಿರುವ ಕಾರಣ ಕೆಲಸಕ್ಕೆ ಹೋಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.