ರಾಜ್ಯದಲ್ಲಿ ಮುಂದುವರೆದ ಮಳೆಯ ಆರ್ಭಟ : ಮಹಾಮಳೆಗೆ ಐದು ಮಂದಿ ಬಲಿ

ಕರ್ನಾಟಕದ ಹಲವೆಡೆ ಭಾರೀ ಮಳೆಯಾಗಿದ್ದು, ಶುಕ್ರವಾರ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಒಟ್ಟು ಎಂಟು ಜನರು ಬಲಿಯಾಗಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

Update: 2024-07-20 07:31 GMT
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ.

ಕರ್ನಾಟಕದ ಹಲವೆಡೆ ಭಾರೀ ಮಳೆಯಾಗಿದ್ದು, ಶುಕ್ರವಾರ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಒಟ್ಟು ಐದು  ಜನರು ಬಲಿಯಾಗಿದ್ದಾರೆ.  ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಹಲವಾರು ನದಿಗಳು ಉಕ್ಕಿ ಹರಿಯುತ್ತಿದ್ದು, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಚಾಮರಾಜನಗರದಲ್ಲಿ ಪ್ರವಾಹದ ಭೀತಿ ಆವರಿಸಿದೆ.

ಹಾವೇರಿ, ಸವಣೂರು ತಾಲೂಕಿನ ಮಾದಾಪುರದಲ್ಲಿ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಚೆನ್ನಮ್ಮ ಹರಕುಣಿ (30) ಮತ್ತು ಅವರ ಅವಳಿ ಹೆಣ್ಣು ಮಕ್ಕಳಾದ ಅಮೂಲ್ಯ ಮತ್ತು 2 ವರ್ಷದ ಅನನ್ಯಾ ಮೃತಪಟ್ಟಿದ್ದು, ಚೆನ್ನಮ್ಮ ಅವರ ತಾಯಿ ಚಿಂತಾಜನಕರಾಗಿದ್ದಾರೆ.

ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ತಂಬಾಕು ಸಂಸ್ಕರಣಾ ಘಟಕದ ಗೋಡೆ ಕುಸಿದು 22 ವರ್ಷದ ಗೃಹಿಣಿ ಹೇಮಾವತಿ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಆಕೆಯ ಎರಡು ವರ್ಷದ ಮಗು ಪವಾಡ ಸದೃಶ ರೀತಿಯಲ್ಲಿ ಪಾರಾಗಿದೆ.

ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಕುಸಿದ ಗುಡ್ಡದ ಕೆಳಗೆ ಮೃತದೇಹ ಪತ್ತೆಯಾಗಿದ್ದು, ಮೂರು ತೈಲ ಟ್ಯಾಂಕರ್‌ಗಳು ಅವಶೇಷಗಳಡಿಯಲ್ಲಿ ಹೂತು ಹೋಗಿವೆ ಎಂದು ಹೇಳಲಾಗಿದೆ. ಮಳೆಯ ಆರ್ಭಟಕ್ಕೆ ಪ್ರಾಣ ಕಳೆದುಕೊಂಡ ಇತರ ಮೂವರ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗಿದೆ.

ಕಾವೇರಿ, ಕಬಿನಿ, ತುಂಗಭದ್ರಾ, ಕೃಷ್ಣಾ, ನೇತ್ರಾವತಿ, ಕುಮಾರಧಾರ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ. ನೈಋತ್ಯ ಮುಂಗಾರು ಈ ಬಾರಿ ಎರಡು ವಾರ ತಡವಾಗಿ ರಾಜ್ಯಕ್ಕೆ ಆಗಮಿಸಿದ್ದು, ೩೦ದಿನಗಳ ವರೆಗೆ ಮೀರಿದೆ.  500ಕ್ಕೂ ಹೆಚ್ಚು ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೈಸೂರಿನ ಕೆಆರ್‌ಎಸ್ ಅಣೆಕಟ್ಟು ತನ್ನ ಸಾಮರ್ಥ್ಯದ ಸಮೀಪಕ್ಕೆ ಬಂದಿದೆ.

ಶಿವಮೊಗ್ಗದಲ್ಲಿ ಮೀನು ಹಿಡಿಯಲು ಹೋದವನು ನಾಪತ್ತೆ

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೋರ್ವ ನದಿಯಲ್ಲಿ ಕಣ್ಮರೆಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಡಗೊಪ್ಪ-ಯಲವಾಟ ಗ್ರಾಮದಲ್ಲಿ ನಡೆದಿದೆ. ಉದ್ರಿ ವಡ್ಡಿಗೇರೆ ಗ್ರಾಮದ ಯಲ್ಲಪ್ಪ(45) ನಾಪತ್ತೆಯಾಗಿರುವ ವ್ಯಕ್ತಿ. ಇಂದು ತನ್ನ ಸಹೋದರನೊಂದಿಗೆ ಮೀನು ಹಿಡಿಯಲು ನದಿಗೆ ತೆರಳಿದ್ದ ಮೃತ ವ್ಯಕ್ತಿ. ಮೀನು ಹಿಡಿಯುವ ವೇಳೆ ನದಿಯ ನೀರಿನ ಸುಳಿಗೆ ಸಿಲುಕಿ ಮುಳುಗಿದ್ದಾನೆ. ಆದರೆ ಇದುವರೆಗೆ ಮೃತವ್ಯಕ್ತಿ ಪತ್ತೆಯಾಗಿಲ್ಲ.ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಮೃತದೇಹ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದಡಕ್ಕೆ ಅಪ್ಪಳಿಸುತ್ತಿರುವ ಬೃಹತ್ ಗಾತ್ರದ ಅಲೆಗಳು

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯ ಜತೆಗೆ ಸಮುದ್ರದ ಅಲೆಗಳು ಅಬ್ಬರಿಸುತ್ತಿದೆ. ಕಡಲತೀರದಲ್ಲಿ ದಡಕ್ಕೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಉಡುಪಿ ತಾಲೂಕಿನ ಮಲ್ಪೆ ಸಮೀಪದ ಗುಜ್ಜರಬೆಟ್ಟುವಿನಲ್ಲಿ ರಕ್ಕಸ ಗಾತ್ರದ ಅಲೆಗೆ ತಡೆಗೋಡೆ, ತೆಂಗಿನ ಮರ ಸಮುದ್ರ ಪಾಲಾಗಿದೆ. ಈಗಾಗಲೇ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ನೀರಿನಲ್ಲಿ ಕೊಚ್ಚಿ ಹೋದ ಜಾನುವಾರುಗಳು 

 ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು  ಉಕ್ಕಿ  ಉರಿಯುತ್ತಿದ್ದ ನೀರಿನಲ್ಲಿ ಹಳ್ಳ ದಾಟಲು ಹೋದ ಎಮ್ಮೆಯೊಂದು ನೀರುಪಾಲಾಗಿದೆ. ಕಳಸ ತಾಲೂಕಿನ ಮಾವಿನ ಹೊಲ ಬಳಿ ಘಟನೆ ನಡೆದಿದೆ. ಜನರ ಕಣ್ಣೆದುರೇ ರಭಸವಾದ ಹಳ್ಳದಲ್ಲಿ ಜಾನುವಾರು ಕೊಚ್ಚಿ ಹೋಗಿದೆ. ಈವರೆಗೂ ಕಳಸ ತಾಲೂಕಿನಲ್ಲೇ ಮೂರು ಹಸುಗಳು ಬಲಿಯಾಗಿವೆ.

ಭೂಕುಸಿತದ ಆತಂಕ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೂಕುಸಿತ ಸಂಭವಿಸಿದ ನಂತರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಪರಿಣಾಮವಾಗಿ ಇದೀಗ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕೂಡ ಭೂಕುಸಿತದ ಆತಂಕ ಎದುರಾಗಿದ್ದು ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ.

Tags:    

Similar News