Rain Damages | ವರ್ಷಧಾರೆಗೆ ʼಮಹಾನಗರʼ ಅಯೋಮಯ; ನದಿಗಳಾದ ರಸ್ತೆಗಳು; ಧರೆಗುರುಳಿದ ಮರಗಳು

ಬೆಂಗಳೂರಿನಲ್ಲಿ ಭಾನುವಾರದಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ವರುಣಾರ್ಭಟಕ್ಕೆ ಮಹಾನಗರದ ಗಲ್ಲಿ ಗಲ್ಲಿಯಲ್ಲೂ ನೀರು ತುಂಬಿದೆ. ಹಲವೆಡೆ ಮರಗಳು ಧರೆಗುರುಳಿವೆ.;

Update: 2024-10-16 07:27 GMT
ಮಳೆಯಿಂದ ಕೆಳ ಸೇತುವೆ ಜಲಾವೃತವಾಗಿರುವುದು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಿನವಿಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಯೆಲ್ಲೊ ಹಾಗೂ ಆರೆಂಟ್ ಅಲರ್ಟ್ ಘೋಷಿಸಿದ್ದು, ಇನ್ನೆರಡು ದಿನ ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಮಳೆಯಿಂದ ಬೆಂಗಳೂರು ಸೇರಿದಂತೆ ಹಲವೆಡೆ ಶಾಲಾ ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಉದ್ಯೋಗ ಮತ್ತಿತರ ಕೆಲಸಗಳಿಗೆ ಹೋಗುವ ಜನರು ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪರಿತಪಿಸುವಂತಾಗಿದೆ.

ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಭಾನುವಾರದಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ವರುಣಾರ್ಭಟಕ್ಕೆ ಮಗಾನಗರದ ಗಲ್ಲಿ ಗಲ್ಲಿಯಲ್ಲೂ ನೀರು ತುಂಬಿದೆ. ಮಂಗಳವಾರ ಒಂದೇ ದಿನ ಬರೋಬ್ಬರಿ 59.8 ಮಿ.ಮೀ ಮಳೆಯಾಗಿದೆ. ಮುಸಲಧಾರೆಗೆ ಜನಜೀವನ ಅಸ್ತವಾದರೆ, ಸಂಚಾರ ದಟ್ಟಣೆ ವಿಪರೀತವಾಗಿದೆ. ಅಲ್ಲಲ್ಲಿ ಭಾರೀ ಮರಗಳು ಧರೆಗುರುಳಿವೆ.

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಜಲಪಾತ

ಐಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಮಂಗಳವಾರ ಸುರಿದ ಮಳೆಗೆ ರಸ್ತೆಯೇ ನದಿಯಾಗಿತ್ತು. ಸಂಪೂರ್ಣ ಜಲಾವೃತವಾಗಿದ್ದ ರಸ್ತೆಯಲ್ಲಿ ವಾಹನ ಸವಾರರರು ಪರದಾಡಿದರು. ಮಾನ್ಯತಾ ಟೆಕ್‌ ಪಾರ್ಕ್‌ ರಸ್ತೆ ಜಲಾವೃತವಾಗಿದ್ದ ದೃಶ್ಯಗಳು ಸಾಕಷ್ಟು ವೈರಲ್ ಆಗಿದ್ದವು. ಹೂಡಿಕೆದಾರರ ಸ್ವರ್ಗ ಬೆಂಗಳೂರಿಗೆ ಇಂದೆಂಥಾ ಪಾಡು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೂಡ ಸರ್ಕಾರದ ವಿರುದ್ಧ ಟೀಕಿಸಿದ್ದರು.

ಇನ್ನು ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆ, ವಡ್ಡರಪಾಳ್ಯ-ಸಾಯಿ ಬಡಾವಣೆಯ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಹರಿಹಾಯ್ದರು.

ರಾಜರಾಜೇಶ್ವರಿನಗರ ಕೆರೆಗೋಡಿ ರಸ್ತೆ, ಸರ್ಜಾಪುರ ರಸ್ತೆ, ಏರ್ಪೋರ್ಟ್ ರಸ್ತೆಯಲ್ಲಿ ಗುಂಡಿಗಳು ಹಾಗೂ ಮಳೆಯಿಂದಾಗಿ ಸವಾರರು ಹೈರಾಣಾದರು. ವರ್ತೂರು, ಹೆಬ್ಬಾಳ, ಕಾಡು ಬಿಸವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿವೆ.


ಮಳೆಯಿಂದ ಧರೆಗುರುಳಿದ ಮರಗಳು

ಧಾರಾಕಾರ ಮಳೆಯಿಂದ ಬೆಂಗಳೂರಿನ ವಿವಿಧೆಡೆ 130 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ನಗರದ ಗೊರಗುಂಟೆಪಾಳ್ಯ ಸಮೀಪದ ರಾಜಕುಮಾರ್ ರಸ್ತೆಯಲ್ಲಿ ಬೃಹತ್ ಮರ ಉರುಳಿ ಬಿದ್ದು, ಟೆಂಪೊ ಹಾಗೂ ಕಾರು ಜಖಂಗೊಂಡಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರರು ಪರದಾಡಿದರು. ವಿದ್ಯಾರಣ್ಯಪುರ, ಎಚ್‌ಎಂಟಿ ಬಡಾವಣೆಯಲ್ಲಿ ಮರಗಳು ನೆಲಕ್ಕುರುಳಿದ್ದವು. ನಂತರ ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವು ಮಾಡಿದರು.

ಮಾನ್ಯತಾ ಟೆಕ್ಪಾರ್ಕ್ ಸಮೀಪದ ರಸ್ತೆ ಬದಿಯಲ್ಲಿ ಕಟ್ಟಡ ಕಾಮಗಾರಿಗಾಗಿ 30 ಅಡಿಯಷ್ಟು ಅಳ ಅಗೆಯಲಾಗಿದ್ದು, ಇದರಿಂದ ರಸ್ತೆ ಪಕ್ಕದ ಭೂಮಿ ಕುಸಿದಿದೆ. ಅಲ್ಲದೇ ನೋಡನೋಡುತ್ತಿದ್ದಂತೆ ಕಾಂಪೌಂಡ್ ಕೂಡಾ ಕುಸಿದು ಬಿದ್ದಿದೆ. ಲಾಲ್‌ಬಾಗ್ ಪಶ್ಚಿಮ ದ್ವಾರ ಸಮೀಪದ ಆರ್‌.ವಿ ಟೀಚರ್ಸ್‌ ಕಾಲೇಜು ವೃತ್ತದಲ್ಲಿ ಬೃಹತ್ ಗಾತ್ರ ಮರ ರಸ್ತೆಗೆ ಬಿದ್ದಿದ್ದು, ಸಂಚಾರ ದಟ್ಟಣೆ ವಿಪರೀತವಾಗಿತ್ತು. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ. ನಂತರ ಬಿಬಿಎಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರವನ್ನು ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಂಡಿಕೇಟ್‌ ಬ್ಯಾಂಕ್‌ ಕಾಲೊನಿ ಹಾಗೂ ಬನಶಂಕರಿಯಲ್ಲೂ ಮರಗಳು ಧರೆಗುರುಳಿದೆ.


ನಿಯಂತ್ರಣ ಕೊಠಡಿ ಆರಂಭಿಸಿ ಬಿಬಿಎಂಪಿ

ಮಳೆ ಅನಾಹುತ ಹಾಗೂ ಸಮಸ್ಯೆಗಳ ನಿರ್ವಹಣೆಗೆ ಬಿಬಿಎಂಪಿ ನಿಯಂತ್ರಣ ಕೊಠಡಿ ಹಾಗೂ ಸಹಾಯವಾಣಿ (1533) ಆರಂಭಿಸಿದೆ. ನಗರದ ವಿವಿಧ ಭಾಗಗಳಿಂದ ಬರುವ ದೂರು ಆಧರಿಸಿ, ಸಮಸ್ಯೆ ಇತ್ಯರ್ಥ ಮಾಡಲಾಗುತ್ತಿದೆ. ಮಂಗಳವಾರ ತಡರಾತ್ರಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಖುದ್ದು ಆಗಮಿಸಿ ಅಧಿಕಾರಿಗಳಿಂದ ಮಳೆ ಹಾನಿ ಕುರಿತು ಮಾಹಿತಿ ಪಡೆದು. ಜೊತೆಗೆ ಸಹಾಯವಾಣಿಗೆ ಬಂದ ಕರೆಗಳನ್ನು ಸ್ವೀಕರಿಸಿ, ಜನರ ಸಮಸ್ಯೆ ಆಲಿಸಿದರು.


ಮೆಟ್ರೋ ಹಳಿಗೆ ಬಿದ್ದ ಮರದ ಕೊಂಬೆ

ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಇಂದಿರಾ ನಗರ ನಡುವೆ ಮೆಟ್ರೋ ಹಳಿ ಮೇಲೆ ಬಿದ್ದಿದ್ದ ಮರದ ಕೊಂಬೆಗಳನ್ನು ಸಿಬ್ಬಂದಿ ತೆರವು ಮಾಡಿದರು. ಬುಧವಾರ ಬೆಳಿಗ್ಗೆ 6ರ ಸುಮಾರಿಗೆ ಮರದ ಕೊಂಬೆ ಬಿದ್ದ ಪರಿಣಾಮ ಕೆಲ ಹೊತ್ತು ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸುಮಾರು ಎರಡು ತಾಸುಗಳ ಕಾಲ ಮರದ ಕೊಂಬೆಯನ್ನು ಬಿಎಂಆರ್‌ಸಿಎಲ್ ಸಿಬ್ಬಂದಿ ತೆರವು ಮಾಡಿದರು. ಆ ಬಳಿಕ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಹಾಗೂ ಎಂ.ಜಿ.ರಸ್ತೆ-ಚೆಲ್ಲಘಟ್ಟ ನಡುವೆ ಮೆಟ್ರೋ ರೈಲು ಪ್ರಯಾಣ ಪುನರಾರಂಭಿಸಲಾಯಿತು.


ಎಲ್ಲೆಲ್ಲಿ ಯೆಲ್ಲೋ, ಆರೆಂಜ್‌ ಅಲರ್ಟ್?

ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರು ಹಾಗೂ ಕರಾವಳಿ ಕರ್ನಾಟದಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಬೆಂಗಳೂರಿನಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಮುಂದಿನ ಮೂರು-ನಾಲ್ಕು ದಿನ ಇದೇ ಪರಿಸ್ಥಿತಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ.

ಕ್ರಿಕೆಟ್‌ ಪಂದ್ಯಕ್ಕೂ ಅಡ್ಡಿ ಸಾಧ್ಯತೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಭಾರತ-ನ್ಯೂಜಿಲೆಂಡ್‌ ನಡುವೆ ಮೊದಲ ಟೆಸ್ಟ್‌ ಆರಂಭವಾಗಲಿದ್ದು, ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಗಳವಾರ ಮಳೆಯಿಂದಾಗಿ ಅಭ್ಯಾಸ ಪಂದ್ಯ ರದ್ದು ಮಾಡಲಾಗಿತ್ತು.

ಇನ್ನು ಮಳೆಯಿಂದಾಗಿ ಹಲವೆಡೆ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಸೆಂಟ್ರಲ್‌ ಚೆನ್ನೈ ಹಾಗೂ ಮೈಸೂರು ಕಾವೇರಿ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದು ಮಾಡಿರುವುದಾಗಿ ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ರೀತಿ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸೇವೆಯನ್ನು ರದ್ದು ಮಾಡಲಾಗಿದೆ.


ಮಳೆಹಾನಿ ಪ್ರದೇಶಗಳಿಗೆ ಆಯುಕ್ತರ ಭೇಟಿ

ಮಂಗಳವಾರ ನಿರಂತರ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರುಭೇಟಿ ನೀಡಿ ಪರಿಶೀಲಿಸಿದರು. ಬುಧವಾರ ಬೆಳಿಗ್ಗೆ ಯಲಹಂಕ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ನಲ್ಲಿ ನಿಂತಿದ್ದ ನೀರು ತೆರವಿಗೆ ಸೂಚಿಸಿದರು.

Tags:    

Similar News