ಮುಂಗಾರುಪೂರ್ವ ತಯಾರಿ | ಬಿಬಿಎಂಪಿ ನಿರ್ಲಕ್ಷ್ಯ ಮತ್ತೆ ತೊಳೆದು ತೋರಿಸಿದ ಬೆಂಗಳೂರು ಮಳೆ
ಕೆಲವೇ ಗಂಟೆಗಳ ಸಾಧಾರಣ ಮಳೆಗೇ ನಗರದ ಉದ್ದಗಲಕ್ಕೆ ರಸ್ತೆಗಳು ನದಿಗಳಾಗಿವೆ, ರಾಜಾಕಾಲುವೆಯಂಚಿನ ಮನೆಗಳಿಗೆ ನೀರು ನುಗ್ಗಿದೆ. ಅಂಡರ್ ಪಾಸ್‌ಗಳು ಕೊಳಚೆ ನೀರಿನ ಕೊಳಗಳಾಗಿವೆ. ಮುಂಗಾರಿನ ಮೊದಲ ದಿನವೇ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ.;
ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲೇ ಬೆಂಗಳೂರಿನಲ್ಲಿ ಶನಿವಾರ (ಜೂ.1) ಮಧ್ಯಾಹ್ನದಿಂದ ತಡರಾತ್ರಿಯವರೆಗೆ ಹಲವೆಡೆ ಸಾಧಾರಣ ಮಳೆಯಾಗಿದ್ದು, ಮಳೆ, ಪ್ರವಾಹ ನಿರ್ವಹಣೆಯ ಮುಂಜಾಗ್ರತಾ ಕ್ರಮಗಳ ಕುರಿತು ಈವರೆಗೆ ಬಿಬಿಎಂಪಿಯ ಹೇಳಿಕೆಗಳು ಎಷ್ಟು ಪೊಳ್ಳು ಎಂಬುದನ್ನು ಕೆಲವೇ ತಾಸುಗಳ ಮಳೆ ತೊಳೆದು ತೋರಿಸಿದೆ.
ಬಹುತೇಕ ಕಡೆ ರಸ್ತೆ ನೀರು ಚರಂಡಿ ಸರಾಗವಾಗಿ ಹರಿದುಹೋಗುವಂತೆ ಕಸಕಡ್ಡಿ ತೆಗೆದು ಕಿಡಿಗಳನ್ನು ಸ್ವಚ್ಧಗೊಳಿಸದೇ ಇರುವುದರಿಂದಾಗಿ ಸುರಿದ ಮಳೆ ನೀರೆಲ್ಲಾ ರಸ್ತೆಗಳ ಮೇಲೆಯೇ ನಿಂತು ರಸ್ತೆಗಳೇ ನದಿಗಳಂತಾಗಿದ್ದವು. ಇನ್ನು ತಗ್ಗು ಪ್ರದೇಶ, ರಾಜಾಕಾಲುವೆ, ಉಪ ಕಾಲುವೆಗಳ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಹಾಗೇ ಸಾಮಾನ್ಯ ಮುಂಗಾರಿನ ಗಾಳಿಗೇ ಸುಮಾರು ನೂರು ಮರಗಳು ರಸ್ತೆಗುರುಳಿದ್ದು, ಸಂಚಾರಕ್ಕೆ ಭಾರೀ ಅಡ್ಡಿಯಾಗಿತ್ತು.
ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಬೀದಿಗಿಳಿದು ಮಳೆ ನೀರಲ್ಲೇ ನಿಂತು ರಸ್ತೆ ತಡೆದು ಬಿಬಿಎಂಪಿ ವಿರುದ್ಧ ಜನ ಪ್ರತಿಭಟನೆ ನಡೆಸಿದರು. ಸರ್ಜಾಪುರ, ರಾಜಪಾಳ್ಯ, ಮಾರತ್ತಹಳ್ಳಿ, ಯಲಹಂಕಾ ಸುತ್ತಮುತ್ತ ರಸ್ತೆಗಳು ಕೆರೆಯಂತಾಗಿದ್ದು, ಬಿಬಿಎಂಪಿ ವಿರುದ್ಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದರು.
ಇನ್ನು ಹೆಬ್ಬಾಳದ ಬಿಇಎಲ್ ಸರ್ಕಲ್ ನ ಸುರಂಗ ಮಾರ್ಗದಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಒಂದೆಡೆ ಜಲಾವೃತ್ತಗೊಂಡ ರಸ್ತೆಗಳಿಂದ ಸವಾರರು ಪಾರಾಗಲು ಸಾಹಸಪಟ್ಟರೆ ಮತ್ತೊಂದೆಡೆ ರಸ್ತೆಗುಂಡಿಗಳು ವಾಹನ ಸವಾರರಿಗೆ ಮತ್ತೊಂದಷ್ಟು ಸವಾಲೆಸೆಯ ತೊಡಗಿವೆ.
ಆಲಿಕಲ್ಲು ಮಳೆ
ಕೋಣನಕುಂಟೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆಲಿಕಲ್ಲು ಸಹಿತ ಮಳೆಯಾಗಿದೆ. ಸ್ಥಳೀಯರು ಮಳೆ ನೀರಿನಲ್ಲಿ ಆಲಿಕಲ್ಲುಗಳನ್ನು ಹೆಕ್ಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯಾವ ಭಾಗದಲ್ಲಿ ಎಷ್ಟು ಪ್ರಮಾಣದ ಮಳೆ
ಕಳೆದ 24 ತಾಸಿನಲ್ಲಿ ನಗರದ ವಿವಿಧ ಭಾಗದಲ್ಲಿ ಸುರಿದ ಮಳೆಯ ಪ್ರಮಾಣ ಈ ಕೆಳಗಿನಂತಿದೆ;
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 7.8 ಸೆಂ.ಮೀ
ಹೊರಮಾವು – 7 ಸೆಂ.ಮೀ
ವಿದ್ಯಾಪೀಠ – 6.3 ಸೆಂ.ಮೀ
ಹಂಪಿನಗರ – 6.2 ಸೆಂ.ಮೀ
ಕೊಡಿಗೆಹಳ್ಳಿ – 6 ಸೆಂ.ಮೀ
ಹೇರೋಹಳ್ಳಿ – 5.9 ಸೆಂಮೀ
ದೊಡ್ಡನೆಕುಂದಿ – 5.8 ಸೆಂಮೀ
ಜಕ್ಕೂರು – 5.6 ಸೆಂ.ಮೀ
ನಾಗೇನಹಳ್ಳಿ – 5.3 ಸೆಂ.ಮೀ
ಯಲಹಂಕಾ – 5.3 ಸೆಂ.ಮೀ
RR ನಗರ – 5.2 ಸೆಂ.ಮೀ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ
ಇನ್ನು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಯಾದಗಿರಿ, ಬೆಳಗಾವಿ, ಧಾರವಾಡ, ಗದಗದಲ್ಲಿ ಸಾಧಾರಣ ಮಳೆಯಾಗಲಿದೆ. ವಿಜಯನಗರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.