ರಾಯಚೂರು: ರಣಬಿಸಿಲಿನ ಹೊಡೆತಕ್ಕೆ ಐವರ ಸಾವು

Update: 2024-05-05 05:51 GMT

ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗುತ್ತಿದ್ದರೂ ಬಿಸಿಲಿನ ತಾಪಮಾನ ಇನ್ನೂ ಕಡಿಮೆಯಾಗಿಲ್ಲ. ರಾಯಚೂರು ಜಿಲ್ಲೆಯಲ್ಲಿ ತೀವ್ರ ಬಿಸಲಿನ ಶಾಖದಿಂದ 24 ಗಂಟೆಯಲ್ಲಿ ಐವರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ ಗರಿಷ್ಠ 45 ಡಿ.ಸೆ. ತಾಪಮಾನ ದಾಖಲಾಗಿತ್ತು. ತೀವ್ರ ತಾಪಮಾನದಿಂದ ಉಂಟಾದ ನಿರ್ಜಲೀಕರಣ ಕಾರಣದಿಂದಾಗಿ ಐವರು ನಿಧನರಾಗಿದ್ದಾರೆ. ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದಲ್ಲಿ ವೀರೇಶ ಕನಕಪ್ಪ (70), ಗಂಗಮ್ಮ ಹನುಮಂತ (57), ಪ್ರದೀಪ ತಿಮ್ಮಣ್ಣ ಪೂಜಾರಿ (19) ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ದುರ್ಗಮ್ಮಹನುಮಂತಪ್ಪ ಉಪ್ಪಾರ (69) ಅವರು ಮಗಳನ್ನು ಭೇಟಿಯಾಗಲು ಶುಕ್ರವಾರ ಸುಂಕಾಪುರಕ್ಕೆ ಹೋದಾಗ ಕೊನೆಯುಸಿರೆಳೆದಿದ್ದಾರೆ.

ರಾಯಚೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ಬಂದ ಹನುಮಂತ (45) ಸ್ವಲ್ಪ ಹೊತ್ತಿನಲ್ಲೇ ಜೀವ ಬಿಟ್ಟಿದ್ದಾರೆ.

ಸಿಂಧನೂರು ತಾಲ್ಲೂಕಿನಲ್ಲಿ ಮೃತಪಟ್ಟವರ ಸಾವಿಗೆ ಪ್ರಖರ ಬಿಸಿಲೊಂದೇ ಕಾರಣ ಅಲ್ಲ. ಮೂವರು ಅನಾರೋಗ್ಯದಿಂದಲೂ ಬಳಲುತ್ತಿದ್ದರು ಎಂಬ ಮಾಹಿತಿ ಬಂದಿದೆ. ಇಬ್ಬರು ನಿರ್ಜಲೀಕರಣದಿಂದ ಕೊನೆಯುಸಿರೆಳೆದಿರುವ ಸಾಧ್ಯತೆ ಇದೆ. ವೈದ್ಯಕೀಯ ತಂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ' ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಶ ಬಾಬು ತಿಳಿಸಿದ್ದಾರೆ.

ಮಸ್ಕಿಯಲ್ಲಿ ಶುಕ್ರವಾರ ನಡೆದುಕೊಂಡು ಹೋಗುತ್ತಿದ್ದ ಬಿಎಂಟಿಸಿ ಬಸ್ ನಿರ್ವಾಹಕ ಬಿಸಿಲಿನ ತಾಪದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು.

ಜಿಲ್ಲೆಯ ಶಕ್ತಿನಗರ ವ್ಯಾಪ್ತಿಯ ಹೈದರಾಬಾದ್-ರಾಯಚೂರು ಹೆದ್ದಾರಿಯಲ್ಲಿ ಶುಕ್ರವಾರ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮೊದಲು ಹೊಗೆ ಕಾಣಸಿಕೊಂಡಿದೆ. ಕಾರು ನಿಧಾನ ಮಾಡಿದ ಚಾಲಕನಿಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಅವರು ರಸ್ತೆ ಬದಿಗೆ ಕಾರು ನಿಲ್ಲಿಸಿ ಹೊರಕ್ಕೆ ಬಂದಿದ್ದಾರೆ. ನಂತರ ಆ ಕಾರು ಚಾಲಕ ಅಗ್ನಿಶಾಮಕಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯ ನಡೆಸಿದರು. ಕಾರಿನ ಎಂಜಿನ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಕಾರಿಗೆ ಬಹಳಷ್ಟು ಹಾನಿ ಆಗಿದೆ.

ಜಿಲ್ಲೆಯಲ್ಲಿ ಒಂದು ವಾರ 45 ಡಿಗ್ರಿ ಸೆಲ್ಸಿಯಸ್ ತಾಪಾಮಾನ ದಾಖಲಾಗಿದ್ದು, ಮೇ 8ರವರೆಗೂ ಬಿಸಿಲಿನ ತಾಪ ಹಾಗೂ ಬಿಸಿಗಾಳಿ ಮುಂದುವರಿಯಲಿದೆ' ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹವಾಮಾನ ಘಟಕದ ಶಾಂತಪ್ಪ ದುತ್ತರಗಾಂವಿ ತಿಳಿಸಿದ್ದಾರೆ.

Tags:    

Similar News