Caste Census | ಜಾತಿಗಣತಿ ವರದಿ ತಿರಸ್ಕರಿಸಲು ಲಿಂಗಾಯತ ಸಚಿವರಿಂದ ನಿರ್ಣಯ
ಜಾತಿಗಣತಿ ವರದಿ ಜಾರಿಗೆ ಒಕ್ಕಲಿಗ ಸಮುದಾಯ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಲಿಂಗಾಯತ ಸಮುದಾಯಗಳು ಕೂಡ ಒಕ್ಕಲಿಗರ ಸಮುದಾಯದ ಹೋರಾಟ ಬೆಂಬಲಿಸಿವೆ. ಈ ಮಧ್ಯೆ ಲಿಂಗಾಯತ ಸಚಿವರು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು, ವರದಿ ತಿರಸ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.;
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಿರಸ್ಕರಿಸಲು ಲಿಂಗಾಯತ ಸಚಿವರು ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆದಿದ್ದು, ವರದಿಯನ್ನು ತಿರಸ್ಕರಿಸಬೇಕು. ಇಲ್ಲವೇ ಸಾರ್ವಜನಿಕ ಚರ್ಚೆಗೆ ಇಡಬೇಕು ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾತಿಗಣತಿ ವರದಿ ಜಾರಿಗೆ ಒಕ್ಕಲಿಗ ಸಮುದಾಯ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಲಿಂಗಾಯತ ಸಮುದಾಯಗಳು ಕೂಡ ಒಕ್ಕಲಿಗರ ಸಮುದಾಯದ ಹೋರಾಟ ಬೆಂಬಲಿಸಿವೆ. ಜೊತೆಗೆ ವರದಿಯನ್ನು ತಿರಸ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ನಡೆದ ಈ ಸಭೆಯಲ್ಲಿ ಜಾತಿ ಗಣತಿ ವರದಿ ತಿರಸ್ಕರಿಸಬೇಕು. ಒಂದು ವೇಳೆ ಸರ್ಕಾರ ವರದಿ ಜಾರಿ ಮಾಡುವುದೇ ಆದರೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲು ಸಚಿವರು ತೀರ್ಮಾನಿಸಿದ್ದಾರೆ.
ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ ವರದಿ ಅನುಷ್ಠಾನ ಸಂಬಂಧ ಏ.11 ರಂದು ಸಚಿವ ಸಂಪುಟ ಸಭೆ ನಡೆದಿತ್ತು. ಆದರೆ, ಈ ಸಭೆಯಲ್ಲಿ ಜಾತಿ ಗಣತಿ ವರದಿ ಜಾರಿಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ವರದಿ ಚರ್ಚೆಗಾಗಿಯೇ ಇಂದು (ಗುರುವಾರ) ವಿಶೇಷ ಸಂಪುಟ ಸಭೆ ನಡೆಯಿತು. ಆದರೆ, ಇಂದೂ ಕೂಡ ಯಾವುದೇ ರಚನಾತ್ಮಕ ಚರ್ಚೆ ನಡೆಯದೇ ಮುಂದಿನ ಸಂಪುಟ ಸಭೆಗೆ ಚರ್ಚೆಯನ್ನು ಮುಂದೂಡಲಾಗಿದೆ.