Caste Census | ಮೇ 2 ರಂದು ಇನ್ನೊಮ್ಮೆ ವಿಶೇಷ ಸಚಿವ ಸಂಪುಟ ಸಭೆ; ವಿಸ್ತೃತ ಚರ್ಚೆಗೆ ವಿವರವಾದ ದತ್ತಾಂಶ ಒದಗಿಸಲು ಅಧಿಕಾರಿಗಳಿಗೆ ಸೂಚನೆ
ಜಾತಿಗಣತಿ ವರದಿಗೆ ಸಂಬಂಧಿಸಿದ ಕೆಲ ದತ್ತಾಂಶಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಇನ್ನಷ್ಟು ವಿಸ್ತೃತ ಅಂಕಿ ಅಂಶಗಳನ್ನು ಪಡೆದು, ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟು, ಮುಂದಿನ ಸಂಪುಟ ಸಭೆಗೆ ಚರ್ಚೆ ಮುಂದೂಡಿದರು.;
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕುರಿತ ವಿಸ್ತೃತ ಚರ್ಚೆಗಾಗಿ ನಿಗದಿಪಡಿಸಿದ್ದ ವಿಶೇಷ ಸಚಿವ ಸಂಪುಟದಲ್ಲಿ ವರದಿ ಜಾರಿ ಸಂಬಂಧ ಯಾವುದೇ ರಚನಾತ್ಮಕ ಚರ್ಚೆ ನಡೆಯದೇ ಮೇ 2ರಂದು ನಡೆಯುವ ಮುಂದಿನ ಸಚಿವ ಸಂಪುಟ ಸಭೆಗೆ ಮುಂದೂಡಲಾಗಿದೆ.
ಗುರುವಾರ ಸಂಜೆ 4ಕ್ಕೆ ಆರಂಭವಾದ ಸಂಪುಟ ಸಭೆಯಲ್ಲಿ ಸಚಿವರು ವರದಿಯ ಮೇಲೆ ತಮ್ಮ ಅಭಿಪ್ರಾಯ ಮಂಡಿಸಿದರು. ಈ ವೇಳೆ ಪ್ರಬಲ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಸಚಿವರ ಮಧ್ಯೆ ಚರ್ಚೆ ಬಿಸಿಯೇರಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರನ್ನೂ ಸಮಾಧಾನಪಡಿಸಿದರು.
ಜಾತಿಗಣತಿ ವರದಿಗೆ ಸಂಬಂಧಿಸಿದ ಕೆಲ ದತ್ತಾಂಶಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಇನ್ನಷ್ಟು ವಿಸ್ತೃತ ಅಂಕಿ ಅಂಶಗಳನ್ನು ಪಡೆದು, ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟು, ಮುಂದಿನ ಸಂಪುಟ ಸಭೆಗೆ ಚರ್ಚೆ ಮುಂದೂಡಿದರು.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಇಂದಿನ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಕುರಿತು ಚರ್ಚೆಯಾಗಿದೆ. ಮುಂದಿನ ಗುರುವಾರ ಮೇ ಡೇ (ಮೇ 1) ಆಗಿರುವುದರಿಂದ ಮೇ 2 ರಂದು ಶುಕ್ರವಾರ ಕರೆದಿರುವ ಸಂಪುಟ ಸಭೆಯಲ್ಲಿ ಚರ್ಚೆಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ ಕುರಿತಂತೆ ಹೆಚ್ಚಿನ ಮಾಹಿತಿ, ತಾಂತ್ರಿಕ ವಿವರಗಳು ಚರ್ಚೆಗೆ ಅವಶ್ಯವಾಗಿವೆ. ಈ ಅಂಕಿ ಅಂಶಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವ ಆಧಾರದಡಿ ವರದಿ ಸಂಗ್ರಹಿಸಲಾಗಿದೆ. ಮಾಹಿತಿ ಸಂಗ್ರಹಕ್ಕೆ ಅನುಸರಿಸಿದ ಮಾನದಂಡಗಳೇನು ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಮಲೈಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಂಪುಟ ಸಭೆಯ ಅಜೆಂಡಾ ಈಗಾಗಲೇ ನಿಗದಿಯಾಗಿರುವುದರಿಂದ ಮೇ 2 ರಂದು ಮತ್ತೆ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ವರದಿಯಲ್ಲಿ ವಿವಿಧ ಜಾತಿಗಳ ಆರ್ಥಿಕ ಮಾನದಂಡಗಳ ಬಗ್ಗೆಯೂ ಚರ್ಚೆಯಾಗಿದೆ. ಕೆಲವು ಸಚಿವರು ಇನ್ನಷ್ಟು ಅಂಕಿ ಅಂಶಗಳನ್ನು ಪಡೆದು ಚರ್ಚಿಸಲು ಸಲಹೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ವಿವರ ಒದಗಿಸಲಿದ್ದು, ಮೇ 2ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚೆ ಮುಂದುವರಿಸಲಾಗುವುದು. ಶೇ 91 ರಷ್ಟು ಜನರ ಸಮೀಕ್ಷೆ ಮಾಡಿದ್ದು, ಸಣ್ಣ ಪುಟ್ಟ ದೋಷಗಳಿದ್ದರೆ ಸರಿಪಡಿಸಬಹುದು ಎಂದು ಹೇಳಿದರು.
ಯಾರು ಏನೆಂದರು?
ಮುಸ್ಲಿಂ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ. ಕೆಲವರು ಅನಗತ್ಯವಾಗಿ ಮುಸ್ಲಿಮರು ನಂ.1 ಎಂದೆಲ್ಲಾ ಹುಯಿಲೆಬ್ಬಿಸುತ್ತಿದ್ದಾರೆ. 2011 ರ ಜನಗಣತಿ ಅಂಕಿ ಅಂಶಗಳಿಗೆ ಹೋಲಿಸಿದರೆ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆಯಾಗಿದೆ ಎಂದು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಜಾತಿಗಣತಿ ವರದಿಯಿಂದ ವಿವಿಧ ಸಮುದಾಯಗಳಿಗೆ ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮಾಧ್ಯಮದವರಿಗೆ ಹೇಳಿದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ. ವರದಿ ಕುರಿತು ಸೌಹಾರ್ದಯುತ ಚರ್ಚೆ ನಡೆದಿದೆ. ಎಲ್ಲಾ ಸಮುದಾಯಗಳ ಹಿತಾಸಕ್ತಿ ಪರಿಗಣಿಸಿ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಒಕ್ಕಲಿಗ ಸಮುದಾಯದ ದತ್ತಾಂಶ ಸಂಗ್ರಹದ ಬಗ್ಗೆ ಸಮುದಾಯದ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದನ್ನು ಮರು ಪರಿಶೀಲಿಸುವ ಮೂಲಕ ಎಲ್ಲರೂ ಒಪ್ಪುವಂತಹ ವರದಿ ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಭೆಯಲ್ಲಿ ವರದಿಯ ದತ್ತಾಂಶಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹತ್ತು ವರ್ಷಗಳ ಹಳೆಯ ವರದಿ ಇದಾಗಿದೆ. ಅಲ್ಲದೇ ಸಮೀಕ್ಷೆ ವೈಜ್ಞಾನಿಕವಾಗಿ ಆಗಿಲ್ಲ. ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಬಗ್ಗೆ ಚರ್ಚೆ ಆಗಿದೆ. ಮುಖ್ಯಮಂತ್ರಿಯವರು ಎಲ್ಲರ ಅಭಿಪ್ರಾಯಗಳನ್ನು ಕೇಳಿದ್ದಾರೆ, ಅಭಿಪ್ರಾಯಗಳನ್ನು ಮೌಖಿಕವಾಗಿಯಾದರೂ ನೀಡಬಹುದು ಇಲ್ಲವೇ ಲಿಖಿತ ರೂಪದಲ್ಲಿ ಮುಂದಿನ ಸಂಪುಟ ಸಭೆಯೊಳಗೆ ತಿಳಿಸಲು ಸೂಚಿಸಿದ್ದಾರೆ ಎಂದು ಹೇಳಿದರು.
ಸಮುದಾಯಗಳ ಮಧ್ಯೆ ಜಟಾಪಟಿ
ಜಾತಿಗಣತಿ ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಒಕ್ಕಲಿಗರು, ಲಿಂಗಾಯತರು ಹಾಗೂ ವರದಿ ಜಾರಿಗೆ ಪಟ್ಟು ಹಿಡಿದಿರುವ ಹಿಂದುಳಿದ ವರ್ಗಗಳ ನಾಯಕರ ಮಧ್ಯೆ ವಾಕ್ಸಮರವೂ ನಡೆದಿದೆ. ವರದಿ ಜಾರಿ ಮಾಡಿದರೆ ಸರ್ಕಾರವನ್ನು ಉರುಳಿಸುತ್ತೇವೆ ಎಂಬ ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದ ನಾಯಕರ ಹೇಳಿಕೆಗೆ ಹಿಂದುಳಿದ ವರ್ಗಗಳ ನಾಯಕರು ತಿರುಗೇಟು ನೀಡಿದ್ದಾರೆ. ಸರ್ಕಾರ ಒಕ್ಕಲಿಗರು ಹಾಗೂ ಲಿಂಗಾಯತರ ಜಹಗೀರು ಅಲ್ಲ ಎಂದು ಹಿಂದುಳಿದ ವರ್ಗಗಳ ಒಕ್ಕೂಟ ತೀಕ್ಷ್ಣವಾಗಿ ಕಿಡಿಕಾರಿದೆ.
ಸಂಪುಟಕ್ಕೆ ಸಲ್ಲಿಕೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರಿಲ್ 11ರಂದು ಈ ಸಮೀಕ್ಷೆಯ ವರದಿಯನ್ನು ಸಂಪುಟಕ್ಕೆ ಸಲ್ಲಿಸಿತ್ತು. 2015ರಲ್ಲಿ ಎಚ್. ಕಾಂತರಾಜ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ಆಧಾರದ ಮೇಲೆ ತಯಾರಾದ ಈ ವರದಿಯು ರಾಜ್ಯದ 1,821 ಜಾತಿಗಳನ್ನು ಗುರುತಿಸಿದ್ದು, ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳ ಸಂಖ್ಯಾಬಲವು ಸಾಂಪ್ರದಾಯಿಕ ನಿರೀಕ್ಷೆಗಳಿಗಿಂತ ಕಡಿಮೆ ಇದೆ ಎಂದು ತೋರಿಸಿದೆ. ಒಕ್ಕಲಿಗರ ಜನಸಂಖ್ಯೆಯನ್ನು ಶೇ.12.2 ಮತ್ತು ಲಿಂಗಾಯತರ ಜನಸಂಖ್ಯೆಯನ್ನು ಶೇ.13.6 ಎಂದು ಅಂದಾಜಿಸಿದೆ. ಇದು ಸಾಮಾನ್ಯ ಗ್ರಹಿಕೆಯ ಶೇ.17 ಮತ್ತು ಶೇ.15ಕ್ಕಿಂತ ಕಡಿಮೆ ಎನಿಸಿದೆ. ಹೀಗಾಗಿ ಎರಡೂ ಸಮುದಾಯಗಳ ನಾಯಕರು ಸಮೀಕ್ಷೆಗೆ ಒಕ್ಕೊರಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅವರ ಬೇಡಿಕೆಗಳು ಚರ್ಚೆಗೆ ಬರಲಿವೆ.
ಸಮುದಾಯಗಳಿಂದ ವಿರೋಧ
ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಅವರು, ಒಕ್ಕಲಿಗರ ಜನಸಂಖ್ಯೆ ಸುಮಾರು ಒಂದು ಕೋಟಿಯಷ್ಟಿದೆ ಎಂದು ವಾದಿಸಿದ್ದಾರೆ, ವರದಿಯು ಇದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸಿದೆ. ಹೀಗಾಗಿ ವರದಿಯನ್ನು ಸ್ವೀಕರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದರ ಜೊತೆಗೆ, ಒಕ್ಕಲಿಗ ಸಮುದಾಯದ ಉಪ-ವರ್ಗವಾದ ಕುಂಚಿಟಿಗರನ್ನು ಪ್ರತ್ಯೇಕವಾಗಿ ಪಟ್ಟಿಮಾಡಿರುವುದು ವೊಕ್ಕಲಿಗ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಇದೇ ರೀತಿ, ಲಿಂಗಾಯತ ಮಹಾಸಭಾವು ವರದಿಯನ್ನು "ವೈಜ್ಞಾನಿಕವಲ್ಲ" ಎಂದು ಹೇಳಿದೆ. ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ (ಚನ್ನಗಿರಿ) ಬಸವರಾಜ ಶಿವಗಂಗ ಅವರು ಲಿಂಗಾಯತ ಸಮುದಾಯದ ಏಳು ಸಚಿವರ ವಿರುದ್ಧ ತಮ್ಮ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸದಿರುವ ಆರೋಪ ಮಾಡಿ, ಅವರೆಲ್ಲರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯ
ವರದಿಯು ಕಾಂಗ್ರೆಸ್‌ನ ಒಳಗಿನ ಭಿನ್ನಾಭಿಪ್ರಾಯಗಳನ್ನು ಜಾಹೀರು ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಶಾಸಕರೊಂದಿಗೆ ಏಪ್ರಿಲ್ 15ರಂದು ರಾತ್ರಿ ಸಭೆ ನಡೆಸಿ, ಏಕಮತದಿಂದ ಸಂಪುಟದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವ ತೀರ್ಮಾನ ಕೈಗೊಂಡಿದ್ದಾರೆ. ಸಭೆಯ ಬಳಿಕ ಅವರು, ಕಾಂಗ್ರೆಸ್ ಸರ್ಕಾರವು 12ನೇ ಶತಮಾನದ ಸಂತ ಬಸವಣ್ಣನವರ "ಸಮಾನ ಜೀವನ, ಸಮಾನ ಪಾಲು" ತತ್ವ ಅನುಸರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ವರದಿಯನ್ನು "ದ್ವೇಷದ ಗಣತಿ" ಎಂದು ಕರೆದು, ಇದು ಸಮಾಜವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧಾರ್ಮಿಕ ಒಡಕಿನ ಗುರಿ ಎಂದು ಆರೋಪಿಸಿದ್ದಾರೆ.