Caste Census | ಮುಸ್ಲಿಂ ಸಮುದಾಯದ ಒಟ್ಟಾರೆ ಸಂಖ್ಯೆ ಉಲ್ಲೇಖ; ವರದಿ ಅಂಶಗಳಿಗೆ ಆಕ್ಷೇಪ
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 75 ಲಕ್ಷಕ್ಕೂ ಮೇಲ್ಪಟ್ಟಿದ್ದು, ಮೂರನೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಮುಸ್ಲಿಂ ಸಮುದಾಯದ ಕೆಲ ಪಂಡಿತರ ತಮ್ಮಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ಹೇಳಿದರೂ ಮುಸ್ಲಿಂ ಹಾಗೂ 95ಉಪ ಜಾತಿಗಳು ಎಂದು ನಮೂದಿಸಿರುವುದು ಅನುಮಾನ ಮೂಡಿಸಿದೆ.;
ಮುಸ್ಲಿಂ ಸಮುದಾಯದ ಉಪ ಜಾತಿಗಳನ್ನು ಪ್ರತ್ಯೇಕಿಸದೆ ಒಟ್ಟಾರೆ ಜನಸಂಖ್ಯೆಯ ಮಾಹಿತಿ ನೀಡಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಗೆ ಇತರೆ ಸಮುದಾಯಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.
ಜಾತಿ/ಸಮುದಾಯಗಳ ಪ್ರವರ್ಗವಾರು ವರ್ಗೀಕರಣದಲ್ಲಿ ಪ್ರವರ್ಗ 2 ಬಿಯಲ್ಲಿ ಮುಸ್ಲಿಂ ಹಾಗೂ ಅದರ ಉಪಜಾತಿಗಳ ವರ್ಗಾವಾರು ಜನಸಂಖ್ಯೆ ಮಾಹಿತಿ ನೀಡದೇ ಒಟ್ಟು ಜನಸಂಖ್ಯೆಯ ಮಾಹಿತಿ ಒದಗಿಸಲಾಗಿದೆ. ಬೇರೆಲ್ಲಾ ಸಮುದಾಯಗಳ ಜಾತಿ ಹಾಗೂ ಉಪಜಾತಿಗಳ ಸಂಖ್ಯೆಯನ್ನು ನಮೂದಿಸಲಾಗಿದೆ. ಆದರೆ, 2ಬಿಯಲ್ಲಿ ಮುಸ್ಲಿಂ ಸಮುದಾಯದ ಒಟ್ಟು ಜನಸಂಖ್ಯೆ ಮಾತ್ರ ನೀಡಲಾಗಿದೆ. ಮುಸ್ಲಿಮರಲ್ಲಿ ಉಪ ಜಾತಿಗಳು ಇವೆಯೇ ಅಥವಾ ದೊಡ್ಡ ಸಮುದಾಯ ಎಂದು ಬಿಂಬಿಸುವ ಪ್ರಯತ್ನದ ಭಾಗವಾಗಿ ಒಗ್ಗೂಡಿಸಿದ ಮಾಹಿತಿ ನೀಡಲಾಗಿದೆಯೇ ಎಂಬ ಪ್ರಶ್ನೆಗಳು ಎದುರಾಗಿದ್ದವು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 75 ಲಕ್ಷಕ್ಕೂ ಮೇಲ್ಪಟ್ಟಿದ್ದು, ದಲಿತರ ಬಳಿಕ ಮೂರನೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಮುಸ್ಲಿಂ ಸಮುದಾಯದ ಮುಖಂಡರು ತಮ್ಮಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಂದು ಹೇಳಿದರೂ ಮುಸ್ಲಿಂ ಹಾಗೂ 95 ಉಪ ಜಾತಿಗಳು ಎಂದು ನಮೂದಿಸಿರುವುದು ಅದೇ ಸಮೀಕ್ಷಾ ವರದಿಯ ದತ್ತಾಂಶಗಳಲ್ಲಿ ನಮೂದಾಗಿರುವುದು ಪ್ರಶ್ನೆಗೆ ಕಾರಣವಾಗಿದೆ.
ಪ್ರತ್ಯೇಕ ಶೀಟ್
ಸರಕಾರದಿಂದ ಬಹಿರಂಗಗೊಂಡಿರುವ ಜಾತಿಗಣತಿ ಸಮೀಕ್ಷಾ ವರದಿಯಲ್ಲಿ ಪ್ರತ್ಯೇಕ ಪುಟಗಳಲ್ಲಿ ದಾಖಲಾಗಿರುವ ದತ್ತಾಂಶದ ಪ್ರಕಾರ ಪ್ರಕಾರ ಮುಸ್ಲಿಂ ಜಾತಿಯ ಒಟ್ಟು ಜನಸಂಖ್ಯೆ 59, 51,038 ಇದೆ. ಮುಸ್ಲಿಂನ 95 ಉಪಜಾತಿಗಳು ಸೇರಿ ಒಟ್ಟು ಜನಸಂಖ್ಯೆ 75,25,880 ಹೊಂದಿದೆ. ಉಪ ಜಾತಿಗಳಲ್ಲಿ ಪ್ರಮುಖವಾದ ಸಯ್ಯದ್ ಮುಸ್ಲಿಂ 1,78,541, ಮೆಹ್ದವಿಯಾ ಮುಸ್ಲಿಂ 41,687, ಬ್ಯಾರಿ ಮುಸ್ಲಿಮರು 32,650 ಹಾಗೂ ನಾಯರಿ ಮುಸ್ಲಿಂ 25, 685 ಜನಸಂಖ್ಯೆ ಹೊಂದಿದೆ.
ಆದರೆ, ವರದಿ ಶಿಫಾರಸು ಮಾಡಿರುವ ಜಾತಿ/ಸಮುದಾಯವಾರು ವರ್ಗೀಕರಣದಲ್ಲಿ ಎಲ್ಲಾ ಪ್ರವರ್ಗಗಳ ಜಾತಿಗಳು ಹಾಗೂ ಅವುಗಳ ಉಪಜಾತಿಗಳನ್ನು ಉಲ್ಲೇಖಿಸಲಾಗಿದೆ. ಆದರೆ, 2 ಬಿ ಪಟ್ಟಿಯಲ್ಲಿ ಎಲ್ಲ ಮುಸ್ಲಿಂ ಉಪಜಾತಿಗಳನ್ನು ಉಲ್ಲೇಖಿಸಲಾಗಿಲ್ಲ, ಬದಲಿಗೆ ಒಟ್ಟು ಜನಸಂಖ್ಯೆಯನ್ನು ಪ್ರಸ್ತಾಪಿಸಲಾಗಿದೆ.
ಆಯೋಗ ಬಿಡುಗಡೆ ಮಾಡಿರುವ ಉಪಜಾತಿಗಳ ಪ್ರತ್ಯೇಕ ಪಟ್ಟಿಯಲ್ಲಿ ಅತಾರಿ, ಅಥರಿ, ಬೇಗ್, ಬಂಗಾಡಿ ವಾಲ, ಬಂಗಿ, ಚಪ್ಪರ್ ಬಂದ್, ದಖನಿ, ದರ್ಜಿ, ದರ್ವೇಸು, ದವೇರವಾಲೆ, ಧೋಬಿ, ಫಕೀರ್, ಫುಲ್ ಮಾಲಿ, ಗವಂಡಿ, ಫ್ಯಾರೆ, ಗೌಳಿ, ಗೌಂಡಿ, ಗೌವಂಡಿ ಸೇರಿ ಒಟ್ಟು 95 ಉಪಜಾತಿಗಳಿವೆ.
ಮೀಸಲಾತಿ ಏರಿಕೆಗೆ ವಿರೋಧ
ಮುಸ್ಲಿಮರಿಗೆ ನೀಡಿದ್ದ ಶೇ4 ರಷ್ಟು ಮೀಸಲಾತಿಯನ್ನು ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ 2023ರ ಮಾರ್ಚ್ 27ರಂದು ವಾಪಸ್ ಪಡೆದಿತ್ತು. ಕೇಂದ್ರ ಸರ್ಕಾರ ಕೂಡ ಮುಸ್ಲಿಮರಿಗೆ ನೀಡಿರುವ ಮೀಸಲಾತಿ ವಾಪಸ್ ಪಡೆಯಲು ಮುಂದಾಗಿತ್ತು. ಈ ಬಗ್ಗೆ ಮುಸ್ಲಿಂ ಮುಖಂಡರು ಸುಪ್ರೀಂಕೋರ್ಟ್ ಮೊರೆ ಹೋದ ಬಳಿಕ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು.
ಮುಸ್ಲಿಂ ಮೀಸಲಾತಿ ಹಿಂಪಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದುಳಿದ ಆಯೋಗದ ವರದಿಯಲ್ಲಿ ಅವರಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ 8 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಆದರೆ, ಹಿಂದುಳಿದ ವರ್ಗಗಳ ಆಯೋಗದ ಈ ವರದಿಯನ್ನು ಬಿಜೆಪಿ ಮೈತ್ರಿಕೂಟ ಪಕ್ಷಗಳು ವಿರೋಧಿಸಿವೆ. ಆಯೋಗ ಮಾತ್ರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.