ಗ್ರಂಥಾಲಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆ ತನಿಖೆ ಸಿಬಿಐಗೆ ವಹಿಸಲು ಆರ್‌.ಅಶೋಕ್‌ ಆಗ್ರಹ

ಕಲಬುರಗಿ ಗ್ರಂಥಾಲಯದ ಮಹಿಳೆಯದು ಆತ್ಮಹತ್ಯೆಯಲ್ಲ, ಬದಲಿಗೆ ಸರ್ಕಾರಿ ಪ್ರಾಯೋಜಿತ ಕೊಲೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಘಟನೆಯನ್ನು ಮುಚ್ಚಿಹಾಕಲು ಎಸ್‍ಐಟಿ ರಚಿಸುವ ಸಾಧ್ಯತೆ ಇದೆ.

Update: 2025-10-14 14:13 GMT
Click the Play button to listen to article

ಕಲಬುರಗಿ ಗ್ರಂಥಾಲಯದ ನೌಕರಿಯಲ್ಲಿದ್ದ ಮಹಿಳೆಯದು ಆತ್ಮಹತ್ಯೆಯಲ್ಲ, ಬದಲಿಗೆ ಅದು ಸರ್ಕಾರಿ ಪ್ರಾಯೋಜಿತ ಕೊಲೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನೌಕರರು ನ್ಯಾಯಕ್ಕಾಗಿ ಮುಷ್ಕರ ನಡೆಸುತ್ತಿದ್ದಾರೆ. ಘಟನೆಯನ್ನು ಮುಚ್ಚಿ ಹಾಕಲು ಎಸ್‍ಐಟಿ, ಆಯೋಗ ರಚಿಸುವ ಸಾಧ್ಯತೆ ಇದೆ. ಕರೂರಿನಲ್ಲಿ ಸುಮಾರು 50 ಜನ ಸಾವನ್ನಪ್ಪಿದ್ದರು. ಅಲ್ಲಿ ಎಸ್ಐಟಿ ಮಾಡಿ ಆ ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ನೀಡಿದೆ. ಕಲಬುರಗಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು.

ವೇತನ ಸಿಗದೆ ಗ್ರಂಥಪಾಲಕರ ಆತ್ಮಹತ್ಯೆ, ಬಿಲ್ ಪಾವತಿಯಾಗದೇ ಗುತ್ತಿಗೆದಾರರ ಆತ್ಮಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ನಿಗಮಗಳಲ್ಲಿ ಸರ್ಕಾರಿ ಸಾಲ ಸಿಗದೆ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೆ 300ಕ್ಕೂ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ. ಇದು ಮನೆಹಾಳರ ಸರ್ಕಾರ. ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ಟೀಕಿಸಿದರು.

ಕಲಬುರಗಿಯ ಡೆತ್‌ನೋಟ್‌ ಸಹ ಮುಚ್ಚಿ ಹಾಕಿದ್ದಾರೆ. ಕಾಂಗ್ರೆಸ್ಸಿನವರು ಎಂದಿನಂತೆ ಮನೆಗೆ ಹೋಗಿ ಹಣ ಕೊಟ್ಟು ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದು ಪಾಪರ್ ಸರ್ಕಾರ ಆಗಿದ್ದು, ಭಿಕ್ಷಾಪಾತ್ರೆ ಹಿಡಿಯುವ ಸರ್ಕಾರ. ಹಿಮಾಚಲ ಪ್ರದೇಶಕ್ಕಿಂತ ಕೆಟ್ಟದಾಗಿರುವ ಸರ್ಕಾರ ಇದಾಗಿದೆ. ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೂಡುವ ಕಳೆಯುವ ಲೆಕ್ಕ ಗೊತ್ತಿದ್ದರೆ ಈ ಸಾವು ಯಾಕೆ ಆಗುತ್ತಿತ್ತು ಎಂದು ಕಿಡಿಕಾರಿದರು. 

ದೀಪಾವಳಿ ಬರಲಿದ್ದು, ರಾಜ್ಯದಲ್ಲಿ ಬೆಳಕು ಮೂಡಲಿದೆ ಎಂದು ನಾವೆಲ್ಲ ತಿಳಿದುಕೊಂಡಿದ್ದೇವು. ಆದರೆ, ಕರ್ನಾಟಕವನ್ನು ಬೆಳಗಿಸುವ ದೀಪಗಳು, ಗ್ರಂಥಾಲಯಗಳು, ಜ್ಞಾನ ಭಂಡಾರಗಳು ಇವತ್ತು ಆತ್ಮಹತ್ಯೆಯ ಭಂಡಾರವಾಗುತ್ತಿವೆ. ಕಲಬುರಗಿ ಜಿಲ್ಲೆಯು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಸಚಿವರು  ಇರುವ ಜಿಲ್ಲೆಯಾಗಿದ್ದು, ಅಲ್ಲಿನ ಗ್ರಂಥಾಲಯದಲ್ಲಿ 15 ದಿನಗಳಿಂದ ನನಗೆ ಟಿ.ವಿ. ಚಾನೆಲ್ ಬಿಲ್ ಪಾವತಿಸಿಲ್ಲ ಮತ್ತು ಪತ್ರಿಕೆಗಳಿಗೆ 15 ತಿಂಗಳಿನಿಂದ ಬಿಲ್ ಬಾಕಿ ಇದೆ. ನನ್ನ ಜೀವನ ನಡೆಸಲು, ಊಟ ಮಾಡಲು 3 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಮಗನಿಗೆ ಶಾಲೆಯಲ್ಲಿ ಶುಲ್ಕ ಕಟ್ಟಲು ಪ್ರಯತ್ನ ಮಾಡಿದಾಗ ಫೀ ಕಟ್ಟಲು ಹಣ ನೀಡಿಲ್ಲ. ಇದು ನನ್ನ ಸಾವಲ್ಲ, ರಾಜ್ಯದ ಗ್ರಂಥಾಲಯಗಳಲ್ಲಿ ಕೆಲಸದಲ್ಲಿ ಇರುವ ಲಕ್ಷಾಂತರ ಜನರ ಸಾವು ಎಂಬಂತೆ ಆತ್ಮಹತ್ಯೆಗೆ ಸಂಬಂಧಿಸಿ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. 

300 ರೂ. ಊಟ ಕೊಟ್ಟು 300 ಕೋಟಿ ವಸೂಲಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟವು  ರಾಜಕೀಯದ ಕಾರ್ಯಸೂಚಿಯಾಗಿದ್ದು, ಬಿಹಾರ ವಿಧಾನಸಭೆ ಚುನಾವಣೆಗೆ ಹಣ ಹೊಂದಿಸುವುದು ಔತಣಕೂಟದ ಉದ್ದೇಶವಾಗಿದೆ. ಬಿಹಾರ ಚುನಾವಣೆಗೆ 300 ಕೋಟಿ ರೂ. ಸಂಗ್ರಹಿಸಲು 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು.  ಹೀಗಾಗಿ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಔತಣಕೂಟಕ್ಕೆ ಪ್ರತಿಯೊಬ್ಬರಿಗೂ ತಲಾ 300 ರೂ. ಊಟ ಕೊಟ್ಟು 300 ಕೋಟಿ ರೂ. ವಸೂಲಿಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. 

Tags:    

Similar News