ಪಬ್ಲಿಕ್‌ ಪರೀಕ್ಷೆ | ಹೈಕೋರ್ಟ್‌ ಆದೇಶದ ವಿರುದ್ಧ ಸರ್ಕಾರದ ಮೇಲ್ಮನವಿ

Update: 2024-03-07 09:15 GMT

ರಾಜ್ಯದ 5, 8, 9 ಮತ್ತು 11ನೇ ತರಗತಿ ಪಬ್ಲಿಕ್‌ ಪರೀಕ್ಷೆ(ಬೋರ್ಡ್‌ ಪರೀಕ್ಷೆ) ರದ್ದು ಮಾಡಿದ ಹೈಕೋರ್ಟ್‌ ಆದೇಶದ ವಿರುದ್ಧ ರಾಜ್ಯ ಸರ್ಕಾರ ಗುರುವಾರ ಮೇಲ್ಮನವಿ ಸಲ್ಲಿಸಿದೆ.

5, 8 ಮತ್ತು 9ನೇ ತರಗತಿಗೆ ಪರೀಕ್ಷೆಗಳು ಸೋಮವಾರದಿಂದಲೇ ಆರಂಭವಾಗಲಿದ್ದು, 11ನೇ ತರಗತಿಯ ಪರೀಕ್ಷೆ ಈಗಾಗಲೇ ಮುಗಿದಿದೆ. ಆ ಹಿನ್ನೆಲೆಯಲ್ಲಿ ಪಬ್ಲಿಕ್‌ ಪರೀಕ್ಷೆ ರದ್ದು ಮಾಡಿ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಬುಧವಾರ ಹೈಕೋರ್ಟ್‌ ಆದೇಶ ಹೊರಬೀಳುತ್ತಿದ್ದಂತೆ ಪರೀಕ್ಷೆಗೆ ಇನ್ನು ನಾಲ್ಕು ದಿನ ಇರುವಾಗ ಮುಂದೆ ಏನು ಮಾಡುವುದು ಎಂಬ ಆತಂಕಕ್ಕೆ ಒಳಗಾಗಿದ್ದರು.

ಈ ನಡುವೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದು ಮಕ್ಕಳ ಮುಕ್ತ ಕಲಿಕೆಗೆ ಮಾರಕ. ಮಕ್ಕಳ ಮೇಲೆ ಅನಗತ್ಯ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಇಂತಹ ಪರೀಕ್ಷೆಗಳು ಕಾರಣವಾಗುತ್ತವೆ. ಹಾಗಾಗಿ ಸರ್ಕಾರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದೆ, ತೀರ್ಪನ್ನು ಒಪ್ಪಿಕೊಂಡು ಮಕ್ಕಳ ಉಲ್ಲಾಸದ ಕಲಿಕೆಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೂ ಆರಂಭವಾಗಿತ್ತು.

ಆದರೆ, ಗುರುವಾರ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಸರ್ಕಾರ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ ಜೆ ಶಿವಶಂಕರೇಗೌಡ ಅವರ ವಿಭಾಗೀಯ ಪೀಠದ ಮುಂದೆ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ್‌, ಮಾರ್ಚ್‌ 11ರಿಂದಲೇ ಪರೀಕ್ಷೆಗಳು ಆರಂಭವಾಗುತ್ತಿವೆ. ಇಲಾಖೆ ಪರೀಕ್ಷೆಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಹಂತದಲ್ಲಿ ದಿಢೀರನೇ ಪರೀಕ್ಷೆ ರದ್ದು ಮಾಡುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಮೇಲ್ಮನವಿಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿ ವಿಚಾರಣೆಗೆ ಪ್ರತ್ಯೇಕ ಪೀಠ ರಚಿಸಿ, ಸಂಜೆಯೊಳಗೆ ವಿಷಯವನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದೆ.

Tags:    

Similar News