ಪರಿಶಿಷ್ಟ ಜಾತಿಗಳಿಗೆ ಮತಾಂತರ ಕ್ರೈಸ್ತರ ಸೇರ್ಪಡೆ; ದಲಿತರಲ್ಲಿ ಭುಗಿಲೆದ್ದ ಆಕ್ರೋಶ

ನ್ಯಾ.ನಾಗಮೋಹನ್‌ ದಾಸ್‌ ಆಯೋಗದ ವರದಿಯಲ್ಲಿ ಕಾಣದ ಮತಾಂತರ ಕ್ರಿಶ್ಚಿಯನ್‌ ಉಪ ಜಾತಿಗಳನ್ನು ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವ ಮೂಲಕ ರಾಜ್ಯ ಸರ್ಕಾರ ದಲಿತರಿಗೆ ದ್ರೋಹ ಬಗೆಯುತ್ತಿದೆ ಎಂದು ದೂರಲಾಗುತ್ತಿದೆ.;

Update: 2025-09-18 07:34 GMT

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲದ ಮತಾಂತರ ದಲಿತ ಕ್ರೈಸ್ತರನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಒಳಪಡಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ದಲಿತ ಸಂಘಟನೆಗಳು ಹಾಗೂ ಸಮುದಾಯದ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನ್ಯಾ.ನಾಗಮೋಹನ್‌ ದಾಸ್‌ ಆಯೋಗದ ವರದಿಯಲ್ಲಿ ಕ್ರಿಶ್ಚಿಯನ್‌ ಉಪ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರಲಿಲ್ಲ. ಈಗ ಅವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿ ಸಮೀಕ್ಷೆ ಮಾಡಲು ಹೊರಟಿರುವುದು ದಲಿತರಿಗೆ ಮಾಡಿರುವ ದ್ರೋಹ ಎಂದು ಆರೋಪಿಸಿದ್ದಾರೆ. 

ಬೆಂಗಳೂರಿನ ಶಾಸಕರ ಭವನದಲ್ಲಿ ಗುರುವಾರ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ  ದಲಿತ ಮುಖಂಡರು ಹಾಗೂ ಚಿಂತಕರ ಸಮಾಲೋಚನಾ ಸಭೆಯಲ್ಲಿ ಸರ್ಕಾರದ ಕ್ರಮಕ್ಕೆ ಮುಖಂಡರು ಆಕ್ಷೇಪ ಎತ್ತಿದ್ದಾರೆ. 

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿಲ್ಲದ 46 ಕ್ರೈಸ್ತ ಉಪ ಜಾತಿಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ನಾಗಮೋಹನ್ ದಾಸ್ ಸಮಿತಿಯ ಒಳ ಮೀಸಲಾತಿ ವರದಿ ಅಂಗೀಕಾರವಾದ ಎರಡು ತಿಂಗಳಲ್ಲೇ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಕಾಣುವುದಿಲ್ಲ.ಮತಾಂತರದ ಸೂಕ್ಷ್ಮವನ್ನು ನಾವು ಅರ್ಥಮಾಡಿಕೊಳ್ಳಬೇಕು.  ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳು ವಿದೇಶಿ ಧರ್ಮಗಳು ಎಂದು ಅಂಬೇಡ್ಕರ್ ಅವರೇ ಸ್ವತಃ ಹೇಳಿದ್ದಾರೆ. ಆದ್ದರಿಂದ ನಮ್ಮ ಸಮುದಾಯ ಹಾಗೂ ರಾಷ್ಟ್ರದ ದೃಷ್ಟಿಯಿಂದ ಅಂಬೇಡ್ಕರ್ ಅವರ ಮಾತಿನಂತೆ ನಡೆಯಬೇಕು ಎಂದು ಹೇಳಿದರು.

ಕ್ರಿಶ್ಚಿಯನ್ ನಾಮಾಂಕಿತ ಜಾತಿಗಳಿಗೆ ಈಗಾಗಲೇ ಸರ್ಕಾರ ಕೋಡ್ ನಂಬರ್ ನೀಡಿರುವುದರಿಂದ ಇದು ಅಧಿಕೃತ ದಾಖಲೆ. ನಾಳೆ ಈ ಸಮುದಾಯಗಳು ಪರಿಶಿಷ್ಟರ ಮೀಸಲಾತಿಗೂ ಬೇಡಿಕೆ ಇಡುವ ಸಾಧ್ಯತೆ ಇದೆ. ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಕ್ರಿಶ್ಚಿಯನ್ ಉಪಜಾತಿಗಳನ್ನು ಸಿದ್ದರಾಮಯ್ಯ ಅವರೇ ಸಮೀಕ್ಷೆಗೆ ಸೇರಿಸಿದ್ದಾರೆ. ಇದು ವೋಟ್ಬ್ಯಾಂಕ್ ರಾಜಕಾರಣ ಎಂದು ಆಕ್ರೋಶ ಹೊರಹಾಕಿದರು.

ಸಮತಾ ಸೈನಿಕ ದಳದ ಸಂಸ್ಥಾಪಕ ಡಾ. ಎಂ.ವೆಂಕಟಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಕ್ರಿಶ್ಚಿಯನ್ರನ್ನು ಸೇರಿಸುವುದು ಅಸಹ್ಯಕರ ಕ್ರಮ. ಇದಕ್ಕೆ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಬೇಕು. ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ತರುವಂತಹ ಹೋರಾಟ ನಡೆಸಬೇಕು ಎಂದು ಹೇಳಿದರು.

ನಾಗಮೋಹನ್ ದಾಸ್ ಅವರೇ ಸಿದ್ದರಾಮಯ್ಯರಿಗೆ ಸಲಹೆ ನೀಡುತ್ತಿರಬಹುದು. ಇದು ಸಂವಿಧಾನ ಮಾಡಿದ ದ್ರೋಹ. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮಾತು ಕೇಳಿ ದಲಿತರೊಳಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಭೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಮುಖಂಡರು, ನಿವೃತ್ತ ಅಧಿಕಾರಿಗಳು, ಪ್ರಾಧ್ಯಾಪಕರು, ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

Tags:    

Similar News