ತಿಮರೋಡಿ ಮನೆಯಲ್ಲಿ ಏರ್‌ಗನ್, ತಲವಾರು ಪತ್ತೆ | ಇಂದು ವಿಚಾರಣೆ ಸಾಧ್ಯತೆ
ಎಸ್‌ಐಟಿ ಎಸ್ಪಿ ಸೈಮನ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಆರ್ಮ್ಸ್ ಆಕ್ಟ್ ಪ್ರಕಾರ ಸೆ.16 ರಂದು ದೂರು ದಾಖಲಾಗಿದೆ. ಅಧಿಕಾರಿಗಳ ತಂಡ ಆ. 26 ರಂದು ಶೋಧ ಕಾರ್ಯ ನಡೆಸಿದ್ದರು.;
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ವಶಪಡಿಸಿಕೊಂಡಿದ್ದ ಏರ್ ಗನ್ ಮತ್ತು ಎರಡು ತಲವಾರುಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಗುರುವಾರ (ಸೆ.18) ಬೆಳ್ತಂಗಡಿ ಠಾಣೆಯಲ್ಲಿ ತಿಮರೋಡಿ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸ್‌ಐಟಿ ಅಧಿಕಾರಿಗಳ ತಂಡವು ಆ.26 ರಂದು ತಿಮರೋಡಿ ಮನೆಯ ದಾಳಿ ನಡೆಸಿ, ಏರ್‌ಗನ್, ತಲವಾರುಗಳು ಸೇರಿದಂತೆ ಒಟ್ಟು 44 ವಸ್ತುಗಳನ್ನು ಜಪ್ತಿ ಮಾಡಿಕೊಂಡಿತ್ತು. ಈ ಸಂಬಂಧ ಎಸ್‌ಐಟಿ ಎಸ್ಪಿ ಸೈಮನ್ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಶಸಾಸ್ತ್ರ ಕಾಯ್ದೆ ಪ್ರಕಾರ ಸೆ.16 ರಂದು ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಶಸ್ತಾಸ್ತ್ರ ಕಾಯ್ದೆ 1959 ರ 25(1),25(1ಎ) 24(1ಬಿ)(ಎ) ಪ್ರಕಾರ ದೂರು ದಾಖಲಾಗಿದೆ. ಮಾರಕಾಸ್ತ್ರ ಹೊಂದಿರುವುದಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಂದ ಹೇಳಿಕೆ ಪಡೆಯುವ ಸಾಧ್ಯತೆ ಇದೆ.
ಶೋಧದ ವೇಳೆ ಸಿಕ್ಕಿದ್ದೇನು?
ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದಾಗ ಏರ್‌ಗನ್, ತಲವಾರ್, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ರಿಮೋಟ್, ಸಿಸಿಟಿವಿ ಕ್ಯಾಮೆರಾ, ಸಿಮ್ ಕಾರ್ಡ್, ಅನಾಮಿಕ ದೂರುದಾರನ ಬಟ್ಟೆ , ನಿತ್ಯ ಬಳಕೆ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಜತೆಗೆ, ದೂರುದಾರನಿದ್ದ ಕೊಠಡಿಯಲ್ಲಿ ಆತನ ಆಧಾರ್ ಕಾರ್ಡ್ ಸಿಕ್ಕಿತ್ತು. ಜೊತೆಗೆ ತಿಮರೋಡಿ ಪತ್ನಿ, ಮಗ ಹಾಗೂ ಅವರ ಮಗಳ ಮೊಬೈಲ್ಗಳನ್ನು ಜಪ್ತಿ ಮಾಡಲಾಗಿತ್ತು.