PSI Recruitment | ಪಿಎಸ್‌ಐ ಹುದ್ದೆಗೆ ಆಯ್ಕೆಯಾದವರ ಕಥೆ-ವ್ಯಥೆ; ನೇಮಕಾತಿ ಆದೇಶ ನಿರೀಕ್ಷೆಯ ವನವಾಸ
ರಾಜ್ಯ ಸರ್ಕಾರದ ವಿಳಂಬ ಧೋರಣೆಯಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅತ್ತ ಕೆಲಸವೂ ಇಲ್ಲದೇ, ಇತ್ತ ದಾಖಲಾತಿಗಳೂ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದು, ಸರ್ಕಾರದ ನೇಮಕಾತಿ ಆದೇಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.;
ರಾಜ್ಯದಲ್ಲಿ ಪಿಎಸ್ಐ ಹುದ್ದೆಗಳ ನೇಮಕಾತಿಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ 2021 ರಲ್ಲಿ ನಡೆದ ಪರೀಕ್ಷಾ ಗೋಲ್‌ಮಾಲ್‌ನಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸಬೇಕಾಯಿತು. ತನ್ಮೂಲಕ ಪರೀಕ್ಷೆ ನಡೆಯುವ ಜವಾಬ್ದಾರಿಯನ್ನೂ ಕಳೆದುಕೊಂಡಿತು. 2024ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಿದರೂ ಪಿಎಸ್ಐ ಹುದ್ದೆಗಳಿಗೆ ಆಯ್ಕೆಯಾಗಿರುವ 402 ಅಭ್ಯರ್ಥಿಗಳಲ್ಲಿ ಮಾತ್ರ ಆತಂಕದ ಗೆರೆಗಳು ಮಾಯವಾಗಿಲ್ಲ.
ರಾಜ್ಯ ಸರ್ಕಾರದ ವಿಳಂಬ ಧೋರಣೆಯಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅತ್ತ ಕೆಲಸವೂ ಇಲ್ಲದೇ, ಇತ್ತ ದಾಖಲಾತಿಗಳೂ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದು, ಸರ್ಕಾರದ ನೇಮಕಾತಿ ಆದೇಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಇಂದು, ನಾಳೆ ಎಂದು ಹೇಳಿಕೊಂಡೇ ಸರ್ಕಾರ ಮೂರು ವರ್ಷ ಕಳೆದಿದೆ. ದುಡಿಯಬೇಕಾದ ವಯಸ್ಸಿನಲ್ಲಿ ಕೆಲಸ ನೀಡದೇ ಸರ್ಕಾರವೇ ನಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ವಯಸ್ಸಾದ ಮೇಲೆ ಕೆಲಸ ನೀಡಿದರೆ ಪ್ರಯೋಜನವೇನು ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ನೇಮಕಾತಿ ಪ್ರಕ್ರಿಯೆ ಏನು?
ರಾಜ್ಯ ಸರ್ಕಾರವು 2021 ಏಪ್ರಿಲ್ 1 ತಿಂಗಳಲ್ಲಿ 402 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. 2024 ಅಕ್ಟೋಬರ್ 3 ರಂದು ಪರೀಕ್ಷೆ ನಡೆಸಿತ್ತು. ಡಿಸೆಂಬರ್ 26ರಂದು ತಾತ್ಕಾಲಿಕ ಪಟ್ಟಿ ಪ್ರಕಟವಾಗಿತ್ತು. ವೈದ್ಯಕೀಯ ಪರೀಕ್ಷೆ, ಸಿಂಧುತ್ವ ಸೇರಿ ಎಲ್ಲಾ ದಾಖಲಾತಿಗಳ ಪರಿಶೀಲನೆ ಮುಗಿದು ಆರು ತಿಂಗಳು ಕಳೆದರೂ ಸರ್ಕಾರ ಈವರೆಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೇ ವಿಳಂಬ ಮಾಡುತ್ತಿದೆ ಎಂದು ಪಿಎಸ್ಐ ಹುದ್ದೆಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ದೂರಿದ್ದಾರೆ.
ನೇಮಕಾತಿ ಆದೇಶ ಹೊರಡಿಸುವಂತೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಗೃಹ ಸಚಿವರು ಸೇರಿ ಸರ್ಕಾರದ ಎಲ್ಲ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಅಭ್ಯರ್ಥಿಗಳ ಅಲೆದಾಟ ತಪ್ಪಿಲ್ಲ. ಸರ್ಕಾರದ ಕಣ್ಣಾಮುಚ್ಚಾಲೆ ಆಟದಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಪರಿತಪಿಸುವಂತಾಗಿದೆ ಎಂದು ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪೋಷಕರಲ್ಲೇ ಅನುಮಾನ
ಪಿಎಸ್ಐ ಹುದ್ದೆಗೆ ಆಯ್ಕೆಯಾದರೂ ಆದೇಶ ಪತ್ರ ಸಿಗದ ಹಿನ್ನೆಲೆಯಲ್ಲಿ ನಮ್ಮ ಆಯ್ಕೆಯ ಬಗ್ಗೆ ಪೋಷಕರು, ಸಂಬಂಧಿಕರು ಅನುಮಾನಪಡುವಂತಾಗಿದೆ. ತರಬೇತಿ ಹೋಗಿಲಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನಾವು ತಿಂಗಳುಗಟ್ಟಲೇ ಕಾಯುತ್ತಿರುವುದನ್ನು ನೋಡಿ ಕೆಲವರು, ನಾವು ಪರೀಕ್ಷೆಯನ್ನೇ ಪಾಸು ಮಾಡಿಲ್ಲವೇನೋ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.
ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ (ಸಿ ಅಂಡ್ ಆರ್ ರೂಲ್ಸ್) ಅಂತಿ ಪಟ್ಟಿ ಬಿಡುಗಡೆ ಬಳಿಕ ಆದೇಶ ಪ್ರತಿ ನೀಡುವುದಾಗಿ ಹೇಳುತ್ತಿದ್ದಾರೆ. ಅಷ್ಟರಲ್ಲಿ ಎಲ್ಲರೂ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದ್ದಾರೆ. ಆದರೆ, ಎಲ್ಲರೂ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದಾಗ್ಯೂ, ವಿಳಂಬ ಮಾಡುತ್ತಿರುವುದು ಸರಿಯಲ್ಲ. ಸಚಿವ ಸಂತೋಷ್ ಲಾಡ್ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಒಂದು ವಾರದಲ್ಲಿ ಆದೇಶ ಪ್ರತಿ ಕೊಡುವುದಾಗಿ ಹೇಳಿದ್ದರು. ಅವರು ಆ ಹೇಳಿಕೆ ನೀಡಿ ಎರಡು ತಿಂಗಳಾಗಿದೆ. ಆದರೂ ಆದೇಶ ಪತ್ರ ಬಂದಿಲ್ಲ ಎಂದು ಹೇಳಿದರು.
ಬೇರೆ ಉದ್ಯೋಗಕ್ಕೂ ಹೋಗುವಂತಿಲ್ಲ
ದಾಖಲೆ ಪರಿಶೀಲನೆ ವೇಳೆ ಗೃಹ ಇಲಾಖೆಗೆ ಎಸ್ಎಸ್ಎಲ್ಸಿ ಅಂಕಪಟ್ಟಿ ಸೇರಿ ಎಲ್ಲಾ ದಾಖಲೆಗಳನ್ನು ನೀಡಿರುವುದರಿಂದ ಅಭ್ಯರ್ಥಿಗಳು ಬೇರೆ ಪರೀಕ್ಷೆ ತೆಗೆದುಕೊಳ್ಳಲು ಅಸಾಧ್ಯವಾಗಿದೆ. ಪಿಎಸ್ಐ ಹುದ್ದೆ ನಿರೀಕ್ಷೆಯಲ್ಲೇ ಅಭ್ಯರ್ಥಿಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಚೆಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ.
ಪಿಎಸ್ಐ ಅಧಿಸೂಚನೆ ಬಳಿಕ ಗ್ರಾಮ ಲೆಕ್ಕಾಧಿಕಾರಿ, ಕೆಎಎಸ್ ಸೇರಿದಂತೆ ಹಲವು ಪರೀಕ್ಷೆಗಳು ನಡೆದಿವೆ. ಪಿಎಸ್ಐ ಹುದ್ದೆಯನ್ನೇ ಕೇಂದ್ರೀಕರಿಸಿ ಪರೀಕ್ಷೆ ಬರೆದಿದ್ದೆವು. ದಾಖಲೆ ನೀಡಿದ ಬಳಿಕ ಬೇರೆ ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸಲೂ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮದುವೆ ಮೇಲೆಯೂ ಪರಿಣಾಮ
ಪಿಎಸ್‌ಐ ಹುದ್ದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇನ್ನೇನು ನೇಮಕಾತಿ ಆದೇಶ ಸಿಗದಿರುವುದು ಮದುವೆಯ ಮೇಲೂ ಪರಿಣಾಮ ಬೀರಿದೆ. ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಖುಷಿಯಲ್ಲಿ ಮದುವೆ ಸಂಬಂಧದ ಮಾತುಕತೆಗಳು ನಡೆದಿದ್ದವು. ಆದರೆ, ತರಬೇತಿ ಹಾಗೂ ನೇಮಕಾತಿ ಆದೇಶ ಸಿಗದ ಕಾರಣ ಹಲವು ಸಂಬಂಧಗಳು ಮಾತುಕತೆ ಹಂತದಲ್ಲೇ ಮುರಿದು ಬಿದ್ದಿವೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಜೀವನ ನಿರ್ವಹಣೆ ಕಷ್ಟ
ಮೂರು ವರ್ಷಗಳಿಂದ ಪರಿಶ್ರಮ ಹಾಕಿ ಪಿಎಸ್ಐ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷ ಕಳೆದರೂ ಆದೇಶ ಭಾಗ್ಯ ದೊರೆತಿಲ್ಲ. ನೇಮಕಾತಿ ಇಲ್ಲದ ಕಾರಣ ಬಡ ಅಭ್ಯರ್ಥಿಗಳಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಬಡವರ ಪರ ಸರ್ಕಾರ ಎನ್ನುವ ಮುಖ್ಯಮಂತ್ರಿಗಳಿಗೆ ಬಡ ಅಭ್ಯರ್ಥಿಗಳ ನೋವು ಕಾಣಿಸುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳಿಂದ ಸಚಿವರನ್ನು ಭೇಟಿಯಾಗಿ ನೂರಾರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಎಸ್ಐ ಅಭ್ಯರ್ಥಿಗಳ ಮನವಿ ಕೇಳಿದ ತಕ್ಷಣ ಕೀಳಾಗಿ ನೋಡುತ್ತಾರೆ. ಗೃಹ ಸಚಿವರು ಟೊಳ್ಳು ಭರವಸೆ ನೀಡುವುದರಲ್ಲಿ ನಿರತರಾಗಿದ್ದಾರೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಪಿಎಸ್‌ಐ ಹುದ್ದೆ ಆಕಾಂಕ್ಷಿಯಾದ ಗೌರಿಬಿದನೂರಿನ ಮಂಜುನಾಥ ಮಾತನಾಡಿ, ಪಿಎಸ್‌ಐ ಹುದ್ದೆಗಾಗಿ ಬೋಧನಾ ವೃತ್ತಿ ಬಿಟ್ಟು ಪರೀಕ್ಷೆಗೆ ತಯಾರಿ ನಡೆಸಿದೆ. ಆದರೆ, ಈಗ ಯಾವ ಕೆಲಸವೂ ಇಲ್ಲದಂತಾಗಿದೆ. ಜೀವನ ನಿರ್ವಹಣೆಯ ಪ್ರಶ್ನೆ ಎದುರಾಗಿದೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮತ್ತೊಬ್ಬ ಅಭ್ಯರ್ಥಿ ಅಬು ತಲಾಹ್ ಪ್ರತಿಕ್ರಿಯಿಸಿ, ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಪಿಎಸ್‌ಐ ಹುದ್ದೆಗಾಗಿ ಕೆಲಸ ಬಿಟ್ಟು ಐದು ವರ್ಷ ಸಿದ್ಧತೆ ನಡೆಸಿದ್ದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದಿದೆ. ಆದರೆ, ಇನ್ನೂ ನೇಮಕಾತಿ ಆದೇಶ ಬಂದಿಲ್ಲ ಎಂದು ಹೇಳಿದರು.
ದ ಫೆಡರಲ್ ಕರ್ನಾಟಕ ಎಸ್‌ಐ ಹುದ್ದೆಗೆ ಆಯ್ಕೆಯಾಗಿ ನೇಮಕಾತಿ ಪತ್ರಕ್ಕೆ ಕಾಯುತ್ತಿರುವ ಕೆಲವು ಅಭ್ಯರ್ಥಿಗಳ ಜತೆ ವಿವರ ಚರ್ಚೆ ನಡೆಸಿದೆ. ಅದರ ಪೂರ್ಣ ವಿವರಕ್ಕೆ ಈ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.