ನಗರದ ನಾಲ್ಕು ದಿಕ್ಕುಗಳಲ್ಲಿ 'ಶ್ವಾನ ಆರೈಕೆ ಕೇಂದ್ರ' ಸ್ಥಾಪಿಸಿ: ಎನ್.ಆರ್. ರಮೇಶ್ ಆಗ್ರಹ

ಇತ್ತೀಚೆಗೆ ಬಿಬಿಎಂಪಿಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರು ಐದು ಸಾವಿರ ನಾಯಿಗಳಿಗೆ ಪ್ರತಿ ನಿತ್ಯ ಬಾಡೂಟ ಹಾಕಲು 2.80 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು.;

Update: 2025-07-21 07:16 GMT

ಸಾಂದರ್ಭಿಕ ಚಿತ್ರ

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಮತ್ತು ನಾಗರಿಕರ ಮೇಲಿನ ದಾಳಿಗಳನ್ನು ತಡೆಗಟ್ಟಲು, ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ 25 ಎಕರೆ ವಿಸ್ತೀರ್ಣದಲ್ಲಿ ಬೃಹತ್ 'ಬೀದಿ ಶ್ವಾನಗಳ ಆರೈಕೆ ಕೇಂದ್ರ'ಗಳನ್ನು ಸ್ಥಾಪಿಸಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್  ಬಿಬಿಎಂಪಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಕೇವಲ 5,000 ಬೀದಿ ನಾಯಿಗಳಿಗೆ ದಿನನಿತ್ಯ ಬಾಡೂಟ ಪೂರೈಸಲು 2.80 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆದಿರುವ ಬಿಬಿಎಂಪಿ ಕ್ರಮವನ್ನು ಟೀಕಿಸಿದ ಅವರು, "ಎರಡು ವರ್ಷಗಳ ಹಿಂದಿನ ಸಮೀಕ್ಷೆಯಲ್ಲೇ ನಗರದಲ್ಲಿ 3.40 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ವರದಿ ನೀಡಲಾಗಿತ್ತು. ಹೀಗಿರುವಾಗ ಕೇವಲ 5,000 ನಾಯಿಗಳಿಗೆ ಆಹಾರ ನೀಡುವುದು ಸರಿಯಲ್ಲ, ಎಲ್ಲಾ ಪ್ರಾಣಿಗಳಿಗೂ ಆಹಾರ ಸಿಗಬೇಕು," ಎಂದು ಒತ್ತಾಯಿಸಿದರು.

ಸರ್ಕಾರಿ ಜಮೀನು ಬಳಕೆಗೆ ಸಲಹೆ

ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ, ಯಲಹಂಕ, ದಾಸರಹಳ್ಳಿ, ಆರ್.ಆರ್. ನಗರ, ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಸಾವಿರಾರು ಎಕರೆ ಸರ್ಕಾರಿ ಗೋಮಾಳ ಮತ್ತು 'ಬಿ' ಖರಾಬು ಜಮೀನು ಲಭ್ಯವಿದೆ. ಇದರಲ್ಲಿ ಸರ್ಕಾರದ ಅನುಮತಿ ಪಡೆದು, ನಗರದ ನಾಲ್ಕು ಭಾಗಗಳಲ್ಲಿ ತಲಾ 25 ಎಕರೆ ಜಮೀನನ್ನು ಗುರುತಿಸಿ, ಸುಮಾರು ₹2 ಕೋಟಿ ವೆಚ್ಚದಲ್ಲಿ ಶಾಶ್ವತ ಬೇಲಿ ನಿರ್ಮಿಸಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ರಮೇಶ್ ಸಲಹೆ ನೀಡಿದ್ದಾರೆ.

'ಶ್ವಾನ ವೈದ್ಯ ಶಾಲೆ' ನಿರ್ಮಾಣದ ಪ್ರಸ್ತಾಪ

ಈ ಆರೈಕೆ ಕೇಂದ್ರಗಳಲ್ಲಿ ಕೇವಲ ಆಶ್ರಯ ಮಾತ್ರವಲ್ಲದೆ, ಐಸಿಯು ಘಟಕಗಳು ಮತ್ತು ಆಪರೇಷನ್ ಥಿಯೇಟರ್‌ಗಳನ್ನು ಹೊಂದಿರುವ 'ಶ್ವಾನ ವೈದ್ಯ ಶಾಲೆ'ಗಳನ್ನು ನಿರ್ಮಿಸಬೇಕು. ಇದರಿಂದ ಬೀದಿ ನಾಯಿಗಳಿಗೆ ವೈದ್ಯಕೀಯ ಆರೈಕೆ ನೀಡುವುದರ ಜೊತೆಗೆ, ಅವುಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ಸಮರ್ಪಕವಾಗಿ ನಿರ್ವಹಿಸಬಹುದು. ಇದು ನಾಗರಿಕರ ಮೇಲಿನ ದಾಳಿಯನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.

ಆಹಾರ ಪೂರೈಕೆಗೆ ಸುಲಭ ಮಾದರಿ

ಆಹಾರದ ವೆಚ್ಚದ ಬಗ್ಗೆ ಮಾತನಾಡಿದ ಅವರು, "ನಗರದಲ್ಲಿರುವ 2,600ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳು ಮತ್ತು 30,000ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಪ್ರತಿದಿನ ಉಳಿಯುವ ಟನ್‌ಗಟ್ಟಲೆ ಆಹಾರವನ್ನು ಈ ಶ್ವಾನ ಕೇಂದ್ರಗಳಿಗೆ ಉಚಿತವಾಗಿ ಸಾಗಿಸಲು ನೂರಾರು ಎನ್‌ಜಿಒಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಸಿದ್ಧವಿವೆ. ಬಿಬಿಎಂಪಿ ಈ ಅವಕಾಶವನ್ನು ಬಳಸಿಕೊಂಡು, ಬೀದಿ ನಾಯಿಗಳಿಗೆ ಶಾಶ್ವತ ಮತ್ತು ಮಾನವೀಯ ಪರಿಹಾರ ಕಲ್ಪಿಸಬೇಕು" ಎಂದು ಆಗ್ರಹಿಸಿದರು. 

Tags:    

Similar News