ರೈತರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಸಕ್ರಮ ಯೋಜನೆ ಮರು ಜಾರಿ ಸೇರಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

Update: 2024-09-11 06:35 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಸಕ್ರಮ ಯೋಜನೆ ಮರು ಜಾರಿ ಸೇರಿದಂತೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ನಿಯೋಗದ ಜೊತೆ ಚರ್ಚೆ ನಡೆಸಿದ ನಂತರ ಅವರು, ಬೇಡಿಕೆ ಪರಿಶೀಲಿಸಿ, ಬಹುಮುಖ್ಯವಾದ ಸಮಸ್ಯೆಗಳಿಗೆ ತ್ವರಿತ ಪರಿಹಾರ ದೊರಕಿಸುವ ಭರವಸೆ ನೀಡಿದರು.

'ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುತ್ತಿರುವ ಕಾರ್ಯವನ್ನು ತಕ್ಷಣ ಕೈಬಿಡಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಕೃಷಿ ಸಾಲ ಮರುಪಾವತಿಸದ ರೈತರ ಜಮೀನು ವಶಪಡಿಸಿಕೊಳ್ಳುವ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ (ಸರ್ಫೇಸಿ) ಕಾಯ್ದೆ ರದ್ದುಪಡಿಸಬೇಕು' ಎಂದು ಶಾಂತಕುಮಾರ್ ಒತ್ತಾಯಿಸಿದರು.

ಬರ, ಅತಿವೃಷ್ಟಿ, ಪ್ರವಾಹಕ್ಕೆ ಹಾನಿಯಾದ ಬೆಳೆಗಳಿಗೆ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಪರಿಹಾರ ನೀಡಬೇಕು. ಖಾಸಗಿ ಫೈನಾನ್ಸ್ ಹಾಗೂ ಬ್ಯಾಂಕ್‌ಗಳು ಸಾಲ ವಸೂಲಿ ನೆಪದಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಕ್ಕೆ ಕಡಿವಾಣ ಹಾಕಬೇಕು. ಜಿಂದಾಲ್ ಕಂಪನಿಗೆ ನೀಡಿರುವ 3,667 ಎಕರೆ ಜಮೀನು ಹಿಂಪಡೆಯಬೇಕು. ಕಬ್ಬಿನ ಮುಕ್ತ ಮತ್ತು ನ್ಯಾಯಸಮ್ಮತ (ಎಫ್‌ಆರ್‌ಪಿ) ದರಕ್ಕಿಂತ ಹೆಚ್ಚುವರಿ ದರ ನಿಗದಿಪಡಿಸಬೇಕು' ಎಂಬುದೂ ಸೇರಿದಂತೆ ವಿವಿಧ ಬೇಡಿಕೆಯನ್ನು ಅವರು ಮುಖ್ಯಮಂತ್ರಿ ಎದುರು ಮಂಡಿಸಿದರು.

ಮಹದಾಯಿ ನೀರು ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೀರೇಶ್ ಸೊಬರದಮಠ, ವಿವಿಧ ರೈತ ಸಂಘಟನೆಗಳ ಮುಖಂಡರಾದ ಬಲ್ಲೂರು ರವಿಕುಮಾರ್, ವೀರನಗೌಡ ಪಾಟೀಲ, ಕರಿಬಸಪ್ಪಗೌಡ, ಹತ್ತಳ್ಳಿ ದೇವರಾಜ್, ಮಂಜೇಶ್‌ಗೌಡ ನಿಯೋಗದಲ್ಲಿದ್ದರು.

Tags:    

Similar News