ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ಪ್ರಜ್ವಲ್ ರೇವಣ್ಣ ಪ್ಲ್ಯಾನ್
ದೇಶಾದ್ಯಂತ ಸದ್ದು ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಧ್ಯ ಬಂಧನ ಬೀತಿ ಎದುರಿಸುತ್ತಿರುವ ಪ್ರಜ್ವಲ್, ಸದ್ಯ ವಿದೇಶದಲ್ಲಿದ್ದುಕೊಂಡೇ ವಕೀಲರ ಸಲಹೆ ಪಡೆದುಕೊಂಡು ಮೇ 10ರೊಳಗೆ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲೇ ವಿದೇಶಕ್ಕೆ ತೆರಳಿರುವ ಪ್ರಜ್ವಲ್, ಏಪ್ರಿಲ್ 27ರಿಂದ ಇಲ್ಲಿವರೆಗೂ ವಿದೇಶದಲ್ಲಿದ್ದುಕೊಂಡೇ ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ದೆಹಲಿ, ಬೆಂಗಳೂರಿನ ನುರಿತ ವಕೀಲರ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ಮಧ್ಯೆ, ವಕೀಲರ ಸಲಹೆಯಂತೆ ಮೇ 10ರೊಳಗೆ ದೇಶಕ್ಕೆ ಬಂದು ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತೆಯರಿಗೆ ಬೆದರಿಸುವ ಯತ್ನ: ರೇವಣ್ಣ ಎಸ್‌ಐಟಿ ವಶಕ್ಕೆ
ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಸಂತ್ರಸ್ತೆಯನ್ನು ರೇವಣ್ಣ ಹಾಗೂ ಇತರರು ಅಪಹರಣ ಮಾಡಿದ್ದರು. ಈ ಮೂಲಕ ಸಂತ್ರಸ್ತೆಯನ್ನು ಬೆದರಿಸಲು ಯತ್ನಿಸಿದ್ದರು. ಇದೇ ಕಾರಣಕ್ಕೆ ರೇವಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ. ರೇವಣ್ಣ ಅವರನ್ನು ಕಚೇರಿಗೆ ಕರೆದೊಯ್ದು, ಬಂಧನದ ಕಾನೂನು ಪ್ರಕ್ರಿಯೆ ನಡೆಸಲಾಗುವುದು' ಎಂದು ಎಸ್‌ಐಟಿ ಮೂಲಗಳು ಹೇಳಿವೆ. 'ಆರೋಪಿಯನ್ನು ಕಚೇರಿಯಿಂದ ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದೊಯ್ಯಬೇಕು. ಇದಾದ ನಂತರ, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ' ಎಂದು ಹೇಳಲಾಗುತ್ತಿದೆ.
ಪ್ರಜ್ವಲ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಸೂಚನೆ
ಎಸ್‌ಐಟಿ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಸಹಿಸಲಾಗದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಜ್ವಲ್ ವಿರುದ್ಧ 700ಕ್ಕೂ ಹೆಚ್ಚು ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು
ಪ್ರಜ್ವಲ್ ರೇವಣ್ಣ, ಎಚ್‌ಡಿ ರೇವಣ್ಣ ಮತ್ತು ಭಯಾನಕ ಲೈಂಗಿಕ ವೀಡಿಯೊ ಅಪರಾಧಗಳಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷರಿಗೆ ಮಹಿಳಾ ಸಂಘಟನೆಯ 700ಕ್ಕೂ ಹೆಚ್ಚು ಮಹಿಳೆಯರು ದೂರು ನೀಡಿದ್ದಾರೆ.
ರೇವಣ್ಣ ನಿರೀಕ್ಷಣಾ ಜಮೀನು ಅರ್ಜಿ ವಿಚಾರಣೆ, ಮಧ್ಯಾಹ್ನ 2-45ಕ್ಕೆ ಮುಂದೂಡಿಕೆ
ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅರ್ಜಿ ವಿಚಾರಣೆ ನಡೆಸಿದರು. ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮಧ್ಯಾಹ್ನ 2-45ಕ್ಕೆ ಮುಂದೂಡಿದೆ.
ಬಂಧನದಿಂದ ರಕ್ಷಣೆ ನೀಡಿದ್ರೆ ಇವತ್ತೇ ಎಸ್‌ಐಟಿ ಮುಂದೆ ಹಾಜರ್: ರೇವಣ್ಣ ಪರ ವಕೀಲರ ಭರವಸೆ
ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್‌ಐಆರ್ ಗೆ ಸಂಬಂಧಿಸಿದಂತೆ 'ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿದರೆ ಇವತ್ತೇ ಎಸ್‌ಐಟಿ ಮುಂದೆ ಹಾಜರಾಗುತ್ತಾರೆ' ಎಂದು ಅವರ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಬಂಧನ ಭೀತಿ: ಅಜ್ಞಾತ ಸ್ಥಳದಲ್ಲಿ ರೇವಣ್ಣ
ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದರೆ ರೇವಣ್ಣ ಬಂಧನವಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿದ್ದು ರೇವಣ್ಣ ವಕೀಲರ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಇಂದು ಸಂಜೆಯೊಳಗೆ ವಿಚಾರಣೆಗೆ ಹಾಜರಾಗಲು ರೇವಣ್ಣಗೆ ಎಸ್‌ಐಟಿ ಎರಡನೇ ನೋಟಿಸ್ ನೀಡಿದೆ. ಇಂದು ನಿರೀಕ್ಷಣಾ ಜಾಮೀನು ಸಿಕ್ಕಿದರೆ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಇಂದು ನಿರೀಕ್ಷಣ ಜಾಮೀನು ಸಿಕ್ಕರೆ ವಿಚಾರಣೆಗೆ ಹಾಜರು ಸಾಧ್ಯತೆ.
ಹೆಚ್‌ಡಿ ರೇವಣ್ಣಗೆ ಜೈಲೋ? ಜಾಮೀನೋ?
ಹೆಚ್‌ಡಿ ರೇವಣ್ಣ ವಿರುದ್ಧ ಮೊದಲು ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದ ಜತೆಗೆ ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್ಐಆರ್‌ಗೆ ಸಂಬಂಧಿಸಿದಂತೆ ಶಾಸಕ ಎಚ್. ಡಿ. ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಜಾಮೀನು ಮಂಜೂರಾತಿ ಕೋರಿಕೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ವಿಚಾರಣೆ ನಡೆಸಿ, ಆದೇಶ ಪ್ರಕಟಿಸುವುದಾಗಿ ತಿಳಿಸಿದೆ. ಇದು ರೇವಣ್ಣ ಜೀಲು ಸೇರುತ್ತಾರೋ ಅಥವಾ ಬೇಲ್ ಪಡೆಯುತ್ತಾರೋ ಎನ್ನುವನ್ನು ಕಾದುನ ಓಡಬೇಕು.