ಪೌರ ಕಾರ್ಮಿಕರ ಸೇವೆ ಕಾಯಂ : ಯಾರಿಗುಂಟು, ಯಾರಿಗಿಲ್ಲ? ಏಪ್ರಿಲ್ 16ರಂದು ಸರ್ಕಾರದ ನಿರ್ಧಾರ?
2022 ರಲ್ಲಿ ಪೌರ ಕಾರ್ಮಿಕರ ಸೇವಾ ಕಾಯಮಾತಿಗೆ ಹೊರಡಿಸಿದ್ದ ಆದೇಶದಡಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿರುವವರಿಗೆ ಮಾತ್ರ ಸೇವಾ ಕಾಯಮಾತಿ ಭಾಗ್ಯ ಸಿಗಲಿದೆ ಎಂಬ ಮಾತುಗಳು ಒಂದೆಡೆಯಾದರೆ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರನ್ನು ಕಾಯಂ ಗೊಳಿಸಬಹುದು ಎಂಬ ಆಶಾಭಾವನೆ ಹಲವರಲ್ಲಿದೆ.;
ಸೇವಾ ಕಾಯಂಗೊಳಿಸುವಂತೆ ಪೌರ ಕಾರ್ಮಿಕರು ನಡೆಸಿದ ಸುದೀರ್ಘ 25 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಮೇ 1 ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಹೊರಡಿಸಿರುವುದು ಪೌರ ಕಾರ್ಮಿಕರಲ್ಲಿ ಸಂತಸ ತಂದಿದೆ. ಆದರೆ, ಯಾರೆಲ್ಲಾ ಸೇವಾ ಕಾಯಂನ ಫಲ ಉಣ್ಣಲಿದ್ದಾರೆ ಎಂಬ ಜಿಜ್ಞಾಸೆಯೂ ಕಾಡಲಾರಂಭಿಸಿದೆ. ಸಿಎಂ ಘೋಷಣೆಯ ಕುರಿತು ಪೌರಕಾರ್ಮಿಕರಲ್ಲೇ ಚರ್ಚೆ ಆರಂಭವಾಗಿದೆ.
2022ರಲ್ಲಿ ಪೌರ ಕಾರ್ಮಿಕರ ಸೇವಾ ಕಾಯಮಾತಿಗೆ ಹೊರಡಿಸಿದ್ದ ಆದೇಶದಡಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿರುವವರಿಗೆ ಮಾತ್ರ ಸೇವಾ ಕಾಯಮಾತಿ ಭಾಗ್ಯ ಸಿಗಲಿದೆ ಎಂಬ ಮಾತುಗಳು ಒಂದೆಡೆಯಾದರೆ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರನ್ನು ಕಾಯಂ ಗೊಳಿಸಬಹುದು ಎಂಬ ಆಶಾಭಾವನೆ ಹಲವರಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪೌರಕಾರ್ಮಿಕರ ಸಂಖ್ಯೆ, ಕಾಯಂಮಾತಿ ಗೊಂದಲ, ಎದುರಿಸುತ್ತಿರುವ ಸಮಸ್ಯೆಗಳ ಕುರಿತ ವರದಿ ಇಲ್ಲಿದೆ.
ರಾಜ್ಯದಲ್ಲಿರುವ ಪೌರಕಾರ್ಮಿಕರ ಸಂಖ್ಯೆ ಎಷ್ಟು?
ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದಡಿ ಪೌರಕಾರ್ಮಿಕರನ್ನು ಕಾಯಂ ಕಾರ್ಮಿಕರು, ನೇರ ಪಾವತಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರು ಎಂದು ವಿಂಗಡಿಸಲಾಗಿದೆ. ರಾಜ್ಯದಲ್ಲಿ ಅಂದಾಜು 55 ಸಾವಿರ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 41,373 ಪೌರಕಾರ್ಮಿಕರು, 12,387 ಲೋಡರ್‌ಗಳು ಹಾಗೂ ಕ್ಲೀನರ್‌ಗಳು, 752 ಮಂದಿ ಒಳಚರಂಡಿ ಸಹಾಯಕರು ಇದ್ದಾರೆ.
26,349 ಪೌರಕಾರ್ಮಿಕರು ನೇರ ಪಾವತಿ ವ್ಯವಸ್ಥೆಯಲ್ಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 16,516 ಪೌರಕಾರ್ಮಿಕರು, 11,916 ಲೋಡರ್‌ಗಳು ಹಾಗೂ ಕ್ಲೀನರ್‌ಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 29 ಸಾವಿರ ಪೌರ ಕಾರ್ಮಿಕರು ಕಾಯಂ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1984ರಿಂದ ಕಾಯಂ ಆಗಿಲ್ಲ
ರಾಜ್ಯದಲ್ಲಿ 1980, 1982 ಹಾಗೂ 1984 ರಲ್ಲಿ ಮಾತ್ರ ಪೌರಕಾರ್ಮಿಕರ ಕಾಯಂ ಪ್ರಕ್ರಿಯೆ ನಡೆದಿದೆ. ಅದಾದ ಬಳಿಕ ಸಾಕಷ್ಟು ನೇಮಕಾತಿಗಳು ನಡೆದರೂ ಯಾರೊಬ್ಬರ ಸೇವೆ ಕಾಯಂ ಆಗಿರಲಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಪೌರ ಕಾರ್ಮಿಕರಿದ್ದರೂ, ಅವರಲ್ಲಿ ಸೇವಾ ಕಾಯಮಾತಿ ಪಡೆದವರ ಸಂಖ್ಯೆ ಕೇವಲ 1600. ಇದರಲ್ಲೂ ಅನುಕಂಪದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರೇ 500 ಜನರಿದ್ದಾರೆ.
“ಪೌರಕಾರ್ಮಿಕರ ಕಾಯಮಾತಿಗೆ ಈ ಹಿಂದೆಯೇ ಆದೇಶವಾಗಿದೆ. ಆದೇಶ ಪ್ರಕ್ರಿಯೆಯನ್ನು ಈಗ ಜಾರಿ ಮಾಡಲಾಗುತ್ತಿದೆ. 2017 ರಿಂದ ಹಂತ ಹಂತವಾಗಿ ಸೇವಾ ಕಾಯಮಾತಿ ಮಾಡಲಾಗುತ್ತಿದೆ. 2022 ರಲ್ಲಿ ಪೌರ ಕಾರ್ಮಿಕರ ಮುಷ್ಕರದ ವೇಳೆ ಅಂದಿನ ಬಿಜೆಪಿ ಸರ್ಕಾರ ಪೌರಕಾರ್ಮಿಕ ಕಾಯಮಾತಿಗೆ ಆದೇಶ ಹೊರಡಿಸಿತ್ತು. 19998-99 ರಿಂದ ಸುದೀರ್ಘ 25ವರ್ಷಗಳವರೆಗೆ ಪೌರಕಾರ್ಮಿಕರು ನಡೆಸಿದ ಹೋರಾಟದ ಫಲವಾಗಿ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಪೌರಕಾರ್ಮಿಕರೊಂದಿಗೆ ಹಲವಾರು ಸಂಘಟನೆಗಳು, ಸಾರ್ವಜನಿಕರು ಬೆಂಬಲ ನೀಡಿದ ಪರಿಣಾಮ ಈಗ ಸರ್ಕಾರ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಮುಂದಾಗಿದೆ” ಎಂದು ಪೌರಕಾರ್ಮಿಕರ ಪರವಾಗಿ ಹೋರಾಟ ನಡೆಸಿದ ಚಿಂತಕಿ ದು. ಸರಸ್ವತಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಎಲ್ಲ ಪೌರ ಕಾರ್ಮಿಕರನ್ನು ಕಾಯಂ ಮಾಡಲಿ
ಬೆಂಗಳೂರಿನಲ್ಲಿ ಅಂದಾಜು 16-17 ಸಾವಿರ ಪೌರಕಾರ್ಮಿಕರು ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಗುತ್ತಿಗೆ ಹಾಗೂ ನೇರ ಪಾವತಿ ಆಧಾರದಲ್ಲಿ ದುಡಿಯುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲರನ್ನೂ ಕಾಯಂ ಮಾಡಬೇಕು ಎಂದು ಎಐಟಿಸಿಟಿಯು ನಾಯಕಿ ಮೈತ್ರಿ ಕೃಷ್ಣ ಅವರು “ದ ಫೆಡರಲ್ ಕರ್ನಾಟಕ”ಕ್ಕೆ ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 1/3 ರಷ್ಟು ಪೌರಕಾರ್ಮಿಕರ ಸೇವೆ ಕಾಯಂ ಆಗಿದೆ. ಉಳಿದವರಿಗೆ ಆಗಿಲ್ಲ. ಇದಲ್ಲದೇ ಕಸಸಂಗ್ರಹ ವಾಹನ ಚಾಲಕರು, ಸಹಾಯಕರು 12 ಸಾವಿರದಷ್ಟಿದ್ದು, ಅವರನ್ನೂ ಕಾಯಂ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಸಾಕಷ್ಟು ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನವಾಗಿಲ್ಲ. ಭವಿಷ್ಯನಿಧಿ, ಕಾರ್ಮಿಕರ ವಿಮೆ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಕಸ ಸಂಗ್ರಹಗಾರರು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ದತಿಯಿಂದ ಕೈಬಿಟ್ಟು, ಕಾಯಂ ಮಾಡಬೇಕು ಎಂದು ಹೇಳಿದರು.
ಪೌರಕಾರ್ಮಿಕರ ಹಲವಾರು ಸಮಸ್ಯೆಗಳನ್ನು ಮುಂದಿಟ್ಟು ಮೇ ತಿಂಗಳಲ್ಲಿ ರಾಜ್ಯಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೈತ್ರಿ ಕೃಷ್ಣಾ ತಿಳಿಸಿದರು.
ರಾಜ್ಯ ಸರ್ಕಾರ ಮೂರು ಹಂತಗಳಲ್ಲಿ ಸೇವೆ ಕಾಯಂ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನ ಪೌರಕಾರ್ಮಿಕರನ್ನು ಮೊದಲ ಹಂತದಲ್ಲಿ ಕಾಯಂ ಮಾಡಿದರೆ, ಎರಡನೇ ಹಂತದಲ್ಲಿ ರಾಜ್ಯದ ಉಳಿದ ಭಾಗಗಳ ಪೌರಕಾರ್ಮಿಕರ ಸೇವೆ ಕಾಯಂ ಮಾಡಲಿದೆ. ಮೂರನೇ ಹಂತದಲ್ಲಿ ಕಸ ಸಂಗ್ರಹ ವಾಹನ ಚಾಲಕರು ಹಾಗೂ ಸಹಾಯಕರನ್ನು ಕಾಯಂ ಮಾಡುವ ಮಾಹಿತಿ ಇದೆ ಎಂದು ಹೇಳಿದರು.
ಏ.15-16 ರಂದು ಸಿಎಂ, ಡಿಸಿಎಂ ಜೊತೆ ಸಭೆ
ಕಸ ಸಂಗ್ರಹ ಚಾಲಕರು ಹಾಗೂ ಸಹಾಯಕರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಏ.15 ಅಥವಾ 16 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭೆ ಕರೆದಿದ್ದಾರೆ. ಗುತ್ತಿಗೆ ಪದ್ಧತಿಯಿಂದ ಕೈಬಿಟ್ಟು ಕಾಯಂ ಮಾಡಬೇಕು, ಇಲ್ಲವೇ ನೇರ ಪಾವತಿ ವ್ಯವಸ್ಥೆಗೆ ಸೇರಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿದ್ದು, ಅಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂದು ಕಾರ್ಮಿಕರ ಹಿತರಕ್ಷಣಾ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ತ್ಯಾಗರಾಜ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.26 ರಿಂದ 29 ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ನಡೆಸಲಾಗಿತ್ತು. ಆಗ ಸಿಎಂ ಹಾಗೂ ಡಿಸಿಎಂ ಅವರು ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿ, ನೇರ ಪಾವತಿ ಸೇರಿಸುವ ಭರವಸೆ ನೀಡಿದ್ದರು. ಈ ಸಂಬಂಧ ಚರ್ಚಿಸಲು ಕರೆದಿರುವ ಸಭೆಯಲ್ಲಿ ಕಾಯಂಮಾತಿ ಕುರಿತಂತೆಯೂ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿಈ ಹಿಂದೆ 3673 ಹಾಗೂ 11307 ಕಾರ್ಮಿಕರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಒಟ್ಟು 12,307 ಜನರನ್ನು ಆಯ್ಕೆ ಮಾಡಲಾಗಿದೆ. ಶೇ 92 ರಷ್ಟು ಪೌರಕಾರ್ಮಿಕರ ಪೊಲೀಸ್ ವರಿಫಿಕೇಷನ್ ಪೂರ್ಣಗೊಂಡಿದೆ. ಪ್ರಸ್ತುತ, ಸಿಂಧುತ್ವದ ಬಗ್ಗೆ ಗೊಂದಲವಿದೆ. ಏ.29 ರೊಳಗೆ ಈ ಗೊಂದಲ ನಿವಾರಣೆ ಮಾಡಿ, ಮೇ 1ರಂದು ಸೇವೆ ಕಾಯಮಾತಿ ಆದೇಶ ಪತ್ರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇನ್ನು ಘನತ್ಯಾಜ್ಯ ವಿಲೇವಾರಿ ಚಾಲಕರು ಹಾಗೂ ಸಹಾಯಕರ ನೇಮಕಾತಿ ಬಗ್ಗೆಯೂ ಸಿಎಂ ಜೊತೆಗಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತ್ಯಾಗರಾಜ್ ವಿವರಿಸಿದರು.
ಹೆಚ್ಚಾದ ಗುತ್ತಿಗೆದಾರರ ಶೋಷಣೆ
ರಾಜ್ಯದಲ್ಲಿ ಸುಮಾರು 12 ಸಾವಿರ ಮಂದಿ ಕಸ ವಿಲೇವಾರಿ ವಾಹನ ಚಾಲಕರು ಹಾಗೂ ಸಹಾಯಕರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನಿಷ್ಠ ವೇತನ ನೀಡಬೇಕೆಂಬ ಆದೇಶವಿದ್ದರೂ ಗುತ್ತಿಗೆದಾರರು ಕೇವಲ 8 ರಿಂದ 10ಸಾವಿರ ರೂ. ನೀಡಿ ಶೋಷಣೆ ಮಾಡುತ್ತಿದ್ದಾರೆ. ಚಾಲಕರೇ ಎರಡೆರಡು ಕೆಲಸ ಮಾಡಬೇಕಾದ ದುಸ್ಥಿತಿ ಇದೆ. ಇದು ಮಾನವಹಕ್ಕುಗಳ ಉಲ್ಲಂಘನೆ ಆಗಿರುವುದರಿಂದ ನೇರಪಾವತಿಗೆ ವರ್ಗಾಯಿಸಲು ಆಗ್ರಹಿಸಿದ್ದೇವೆ ಎಂದು ತ್ಯಾಗರಾಜ ಹೇಳಿದರು.
ಪೌರಕಾರ್ಮಿಕರಿಗೆ ಹಣಕಾಸು ಸಮಸ್ಯೆ ಇಲ್ಲ
ಬೆಂಗಳೂರಿನಲ್ಲಿ ಪೌರಕಾರ್ಮಿಕರ ಸೇವಾ ಕಾಯಮಾತಿಯಿಂದ ಆರ್ಥಿಕ ಹೊರೆ ಆಗುವುದಿಲ್ಲ. ಏಕೆಂದರೆ ಬಿಬಿಎಂಪಿ ಬಜೆಟ್ನಲ್ಲಿ ವೇತನಕ್ಕಾಗಿ 500 ಕೋಟಿ ರೂ. ಮೀಸಲಿಟ್ಟಿರುವುದರಿಂದ ಸಮಸ್ಯೆ ಆಗದು ಎಂದು ಕಾರ್ಮಿಕ ಸಂರಕ್ಷಣಾ ಟ್ರೇಡ್ ಯೂನಿಯನ್ ಅಧ್ಯಕ್ಷ ತ್ಯಾಗರಾಜ ಹೇಳಿದರು.
ಪೌರಕಾರ್ಮಿಕರ ಕುರಿತ ವಿವಿಧ ಸಮಿತಿಯ ವರದಿಗಳೇನು?
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರ ಹೊಸ ಕಾನೂನು ರೂಪಿಸಿ, ಎಲ್ಲರಿಗೂ ಕಾಯಮಾತಿ ನೀಡಬೇಕು ಎಂದು ಐಪಿಡಿ ಸಾಲಪ್ಪ ಸಮಿತಿ ಹಾಗೂ ಚಂದ್ರಶೇಖರ್ ಸಮಿತಿ ವರದಿಗಳು ಶಿಫಾರಸು ಮಾಡಿದ್ದವು. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಬೇಕಾದ ಪ್ರಕ್ರಿಯೆ ರೂಪಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದವು.
ಐಪಿಡಿ ಸಾಲಪ್ಪ ಸಮಿತಿಯ ಶಿಫಾರಸಿನ ಪ್ರಕಾರ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಪೌರಕಾರ್ಮಿಕರಾಗಿ (ಗುತ್ತಿಗೆ, ತಾತ್ಕಾಲಿಕ, ದಿನಗೂಲಿ) ಸೇವೆ ಸಲ್ಲಿಸಿರುವವರನ್ನೂ ಕಾಯಂಗೊಳಿಸಬೇಕು ಎಂದಿದೆ. ಇದೇ ಅಭಿಪ್ರಾಯವನ್ನು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗವೂ ವ್ಯಕ್ತಪಡಿಸಿದೆ. ದಿನಗೂಲಿ ಅಥವಾ ಅರೆಕಾಲಿಕ ನೌಕರರನ್ನು ಕೂಡ ಸಫಾಯಿ ಕರ್ಮಚಾರಿಗಳು ಎಂದು ಪರಿಗಣಿಸಿ ಕಾಯಂಗೊಳಿಸಬೇಕು. ಅವಶ್ಯಕತೆ ಬಂದರೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಿ ಕಾಯಂಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಷ್ಟೇ ಸೇವೆ ಕಾಯಂ
ಕಾಂಗ್ರೆಸ್ ಪಕ್ಷ ಚುನಾವಣೆ ಅವಧಿಯಲ್ಲಿ 25 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಮಾತಿಯ ಆಶ್ವಾಸನೆ ನೀಡಿತ್ತು. ಅದರನ್ವಯ ಈಗ ಬಿಬಿಎಂಪಿ ವ್ಯಾಪ್ತಿಯ 12,307 ಪೌರ ಕಾರ್ಮಿಕರನ್ನು ಮಾತ್ರ ಕಾಯಂ ಮಾಡಲಾಗುತ್ತಿದೆ. ಪೌರಕಾರ್ಮಿಕರ ಕಾಯಮಾತಿಗೆ ಸಂಬಂಧಿಸಿ ಈಗಾಗಲೇ ಪ್ರಕ್ರಿಯೆಗಳು ಮುಗಿದಿದ್ದು, ಮೇ 1 ರಂದು ಕಾಯಮಾತಿ ಆದೇಶ ನೀಡುವುದಾಗಿ ಸಿಎಂ ಅವರು ಹೇಳಿದ್ದಾರೆ. ಪ್ರಸ್ತುತ, ರಾಜ್ಯಾದ್ಯಂತ 29 ಸಾವಿರ ಕಾಯಂ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ 10,500 ಪೌರಕಾರ್ಮಿಕರ ಸೇವೆ ಕಾಯಮಾತಿ ಬಾಕಿ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೌರಕಾರ್ಮಿಕದ ಸಂಘಟನೆ ಮುಖಂಡ ಕೆ.ಬಿ. ಓಬಳೇಶ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.