Bangalore Rain Politics: ಬೆಂಗಳೂರಿಗಿದ್ದಾರೆ ಡಿಸಿಎಂ ಡಿಕೆಶಿ ಮತ್ತು ಅರು ಸಚಿವರು: ʼಮಳೆಯಲ್ಲೂ ರಾಜಕೀಯ'ಕ್ಕೆ ಜನ ಹೈರಾಣ

ಬೆಂಗಳೂರಿನ ಶಾಸಕರೇ ಅಗಿರುವ ಆರು ಸಚಿವರು, ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...‌ ಹೀಗೆ ಬೆಂಗಳೂರಿನ ಪ್ರಬಲ ನಾಯಕರಿದ್ದರೂ, ಮಳೆ ಅವಾಂತರವಾದಾಗ ಪರದಾಟ ನಡೆಸುವುದು ಬೆಂಗಳೂರಿನ ಜನತೆ ಮಾತ್ರ!;

Update: 2025-05-20 03:00 GMT

ಗ್ರೇಟರ್‌ ಬೆಂಗಳೂರು, ಬ್ರ್ಯಾಂಡ್‌ ಬೆಂಗಳೂರು ಎಂದು ಸರ್ಕಾರ, ವಿಶೇಷವಾಗಿ ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.

ಸುರಂಗ ಮಾರ್ಗ, ಕೆಂಪೇಗೌಡ ಹೆರಿಟೇಜ್‌ ಕಾರಿಡಾರ್‌, ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ... ಹೀಗೆ ಒಂದಲ್ಲ ಒಂದು ಹೇಳಿಕೆಗಳು ಪ್ರತಿದಿನ  ರಾರಾಜಿಸುತ್ತಿರುತ್ತವೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರು ಶಾಸಕ ಅಲ್ಲದಿದ್ದರೂ, ಪಕ್ಕದ ರಾಮನಗರ ಜಿಲ್ಲೆಯವರು. ಗ್ರೇಟರ್‌ ಬೆಂಗಳೂರು ಜತೆ ಸೇರಲು ಅವರು ಹರಸಾಹಸ ಪಡುತ್ತಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಘೋಷಿಸಿ, ಆ ಮೂಲಕ ಗ್ರೇಟರ್‌ ಬೆಂಗಳೂರಿನ ಶಾಸಕರಾಗಲು ಅವರು ಪ್ರಯತ್ನಿಸುತ್ತಿದ್ದಾರೆ. ಹಾಗೆ ಒಂದರ್ಥದಲ್ಲಿ ಬೆಂಗಳೂರು ಉಸ್ತುವಾರಿ ಹೊಂದಿರುವ ಅವರು ಬೆಂಗಳೂರಿನವರೇ.

ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಒಟ್ಟು 28 ಶಾಸಕರಿದ್ದು, ದಿನೇಶ್‌ ಗುಂಡೂರಾವ್‌, ರಾಮಲಿಂಗಾ ರೆಡ್ಡಿ, ಬೈರತಿ ಸುರೇಶ್‌, ಜಮೀರ್‌ ಅಹಮದ್‌ ಖಾನ್‌, ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ ಸೇರಿದಂತೆ ಆರು ಸಚಿವರಿದ್ದಾರೆ. ಬೆಂಗಳೂರು ಉಸ್ತುವಾರಿ ಹೊಂದಿರುವ ಡಿ.ಕೆ. ಶಿವಕುಮಾರ್‌ ಸೇರಿದರೆ, ಬೆಂಗಳೂರು ʼರಕ್ಷಕʼರಾಗಿ ಉಪಮುಖ್ಯಮಂತ್ರಿ ಸೇರಿದಂತೆ ಏಳು ಸಚಿವರಿದ್ದಾರೆ. ಜತೆಗೆ, ಬಿಜೆಪಿ, ಕಾಂಗ್ರೆಸ್‌ಗೆ ಸೇರಿದ ಅಷ್ಟೂ ಶಾಸಕರಿದ್ದಾರೆ.   

ಅವರಲ್ಲಿ ಹಲವರು ಹಿಂದೆ ಬೆಂಗಳೂರು ಉಸ್ತವಾರಿ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ ಸಚಿವರು. ವಿರೋಧ ಪಕ್ಷ ನಾಯಕ ಆರ್‌. ಅಶೋಕ್‌, ಸುರೇಶ್‌ ಕುಮಾರ್‌, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಬೈರತಿ ಬಸವರಾಜ್‌ ಮೊದಲಾದವರು. ಹೆಚ್ಚೇಕೆ, ಬೆಂಗಳೂರಿನ ಯುವ ನಾಯಕ ಎಂದೇ ಹೆಸರಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಕೂಡಾ ಬೆಂಗಳೂರು (ದಕ್ಷಿಣ) ಸಂಸದರೇ. ಇಷ್ಟೇ ಅಲ್ಲ, ಬೆಂಗಳೂರಿನ ಸಂಸದರ ಪೈಕಿ, ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ!

ಆದರೆ, ಬೆಂಗಳೂರಿನಲ್ಲಿ ಮಳೆ ಬಂದಾಗ ಅಷ್ಟೂ ಮಂದಿ ಸಚಿವರು, ಶಾಸಕರು ಜವಾಬ್ದಾರಿಯಿಂದ ಹಿಂದೆ ಸರಿಯುತ್ತಾರೆ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ. ಬಿಜೆಪಿ ಶಾಸಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರೋಪಗಳನ್ನು ಹೊರಿಸುಲು ಮುಂದಾದರೆ, ಕಾಂಗ್ರೆಸ್‌ ಶಾಸಕರು ಚಕಾರ ಎತ್ತುತ್ತಿಲ್ಲ. ಬೆಂಗಳೂರು ಶಾಸಕರಾಗಿ ಸಚಿವರಾದ ಆರೂ ಮಂದಿ ಸಾಧಾರಣ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟರೆ, ಜವಾಬ್ದಾರಿಯುತವಾಗಿ ಬೆಂಗಳೂರಿನ ಜನರ ಪರವಾಗಿ, ಅದರಲ್ಲೂ ಮಳೆ ಸಮಸ್ಯೆಗಳ ಬಗ್ಗೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.

ಮಳೆಯಲ್ಲೂ ರಾಜಕೀಯ?

ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ಬೆಂಗಳೂರಿನವರೇ ಆದ ಆರು ಸಚಿವರು ಯಾಕೆ ಸುಮ್ಮನಿದ್ದಾರೆ ಎನ್ನುವುದಕ್ಕೆ ಕುತೂಹಲಕಾರಿ ಕಾರಣಗಳಿವೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್‌ ಅವರು ಬೆಂಗಳೂರಿನ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಹಾಗೂ ಪ್ರಮುಖ ಯೋಜನೆಗಳಲ್ಲಿ ತಮ್ಮದೇ ನಿರ್ಧಾರಗಳಿಗೆ ಅಂಟಿಕೊಂಡಿರುವುದು ಇತರರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಹಾಗಾಗಿ, ಬೆಂಗಳೂರಿನ ಅನೇಕ ಕಾಂಗ್ರೆಸ್‌ ಶಾಸಕರು, ಸಚಿವರು ಬೆಂಗಳೂರಿನ ಕುಂದುಕೊರತೆಗಳ ಬಗ್ಗೆ, ಮಳೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅಷ್ಟೇನೂ ಮುತುವರ್ಜಿ ವಹಿಸುತ್ತಿಲ್ಲ. ಬದಲಿಗೆ "ನಮ್ಮನ್ನು ಕಡೆಗಣಿಸಿದವರು ಜನಾಕ್ರೋಶದ ಬಿಸಿಯನ್ನೂ ಅನುಭವಿಸಲಿ" ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್‌ನ ಹೆಸರು ಹೇಳಲಿಚ್ಛಿಸದ ಸಚಿವರೊಬ್ಬರು  ದ ಫೆಡರಲ್‌ ಕರ್ನಾಕದ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿಯೂ ಆಗಿ ಪ್ರಮುಖ ಖಾತೆಗಳನ್ನೂ ಹೊಂದಿದ್ದಾರೆ. ಎಲ್ಲವೂ ಅವರಿಗೆ ಬೇಕು, ಹಾಗಿದ್ದರೆ ಜವಾಬ್ದಾರಿಯನ್ನೂ ಅವರೇ ಹೊರಲಿ," ಎಂಬ ನಿಲುವು ಅವರ ರಾಜಕೀಯ ವಿರೋಧಿಗಳದು ಎನ್ನಲಾಗಿದೆ. ಜತೆಗೆ ಮುಖ್ಯಮಂತ್ರಿ ಆಗಲು ಕನಸು ಹೊಂದಿರುವ ಡಿ.ಕೆ. ಶಿವಕುಮಾರ್‌ ಅವರೇ ಈ ಸಮಸ್ಯೆಗಳನ್ನು ನಿಭಾಯಿಸಲಿ  ಎನ್ನುವ ಅಂಬೋಣವೂ ಇದೆ ಎನ್ನಲಾಗಿದೆ.

ಆ ಕಾರಣಕ್ಕೆ ಈಗ ಬೆಂಗಳೂರಿನ ಮಳೆ ಸಮಸ್ಯೆಯನ್ನು ನೀಗಿಸುವ ಜವಾಬ್ದಾರಿ ಡಿ.ಕೆ. ಶಿವಕುಮಾರ್‌ ಅವರ ಬೆನ್ನಿಗೇ ಹೆಚ್ಚು ಅಂಟಿಕೊಂಡಿದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿ ಅವರದೇ ಜವಾಬ್ದಾರಿಯಾದರೂ, ಅವರು ಎದುರಿಸುತ್ತಿರುವ ಸಮಸ್ಯೆಗಳ ಜತೆಗೆ, ಅವರ ಬೆನ್ನ ಹಿಂದೆ ನಿಲ್ಲಲು ಯಾವ ಶಾಸಕರೂ, ಸಚಿವರೂ ಸಿದ್ಧರಿಲ್ಲ ಎನ್ನುವುದೇ ವಿಶೇಷವಾಗಿದೆ. 

ಜತೆಗೆ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದ ಪೂರ್ವ ತಯಾರಿಯಲ್ಲಿ ʼಬ್ಯುಸಿʼ ಆಗಿರುವ ಅವರು, ಬೆಂಗಳೂರು ಜನತೆ ಮಳೆ ಹಾನಿಗಳ ಜತೆ ಕಂಗಾಲಾಗಿರುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಗ್ರಾಸವಾಗಿದ್ದಾರೆ. ಬೆಂಗಳೂರಿನ ಸಮಸ್ಯೆಗಳಿಗಿಂತ "ಸಾಧನಾ ಸಮಾವೇಶʼ ಆಡಂಬರವೇ ಹೆಚ್ಚಾಗಿದೆ ಎಂಬ ಆರೋಪಗಳನ್ನು ಅವರು ಎದುರಿಸುವಂತಾಗಿದೆ. ಸಹಜವಾಗಿ ಬೆಂಗಳೂರು ಸಚಿವರು ಉಪ,ಮುಖ್ಯಮಂತ್ರಿ ಬೆನ್ನಿಗೆ ನಿಲ್ಲದೆ ಜಾಣಮೌನಕ್ಕೆ ಶರಣಾಗಿದ್ದಾರೆ!

ರಾಜಕೀಯ ಲಾಭ?

ಆದರೆ, ಮಳೆಯ ಅವಾಂತರದಿಂದ ಬೆಂಗಳೂರಿಗರು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಅವರು ರಾಜಧಾನಿಯಲ್ಲಿ ಇಲ್ಲದೆ ಇರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ನಗರ ಪ್ರದಕ್ಷಿಣೆ ಆರಂಭಿಸಿ, ಜನತೆಯ ಅಹವಾಲು ಕೇಳಲು ಆರಂಭಿಸಿದ್ದಾರೆ. ಇದು ರಾಜಕೀಯವಾಗಿಯೂ ಡಿ.ಕೆ. ಶಿವಕುಮಾರ್‌ ಅವರಿಗೆ ಒಂದು ರೀತಿಯ ಸವಾಲಿನಂತೆ ಕಂಡುಬಂದಿದೆ.

ಬೆಂಗಳೂರಿಗೆ ದೌಡಾಯಿಸಿದ ಡಿಕೆಶಿ

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿರುವ ಡಿ.ಕೆ. ಶಿವಕುಮಾರ್‌, ಬಳ್ಳಾರಿಯಿಂದ  ಸಂಜೆ ಹೊತ್ತಿಗೆ ಬೆಂಗಳೂರಿಗೆ ದೌಡಾಯಿಸಿದ ಸಿಎಂ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಗೆ ಜತೆಯಾಗಲಿದ್ದಾರೆ. ಅದರೂ, ಸಿಎಂ ಅವರಿಗಿಂತ ಮುಂಚೆಯೇ ಬೆಂಗಳೂರಿನ ಜನರ ಅಹವಾಲು ಕೇಳಲು ನಗರದಲ್ಲೇ ಇದ್ದಿದ್ದರೆ ಅವರಿಗೆ ಹೆಚ್ಚು ರಾಜಕೀಯ ಲಾಭವಾಗುತ್ತಿತ್ತು ಎಂದು ಡಿ.ಕೆ. ಶಿವಕುಮಾರ್‌ ಬೆಂಬಲಿಗರ ಅಭಿಪ್ರಾಯಪಡುತ್ತಿದ್ದಾರೆ.

ವಿರೋಧ ಪಕ್ಷವೆಲ್ಲಿ?

ಬೆಂಗಳೂರು ಮಳೆ ಅವಾಂತರ ಹಿನ್ನೆಲೆ ಸರ್ಕಾರದ ವೈಫಲ್ಯ ವಿರುದ್ಧ ಹೋರಾಟಮಾಡಲು ಪ್ರತಿಪಕ್ಷ ಬಿಜೆಪಿ ವಿಫಲವಾಯಿತೆ? ಎಂಬ ಪ್ರಶ್ನೆಯೂ ಕೇಳಿಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷರು ಹಾಗು ಪ್ರತಿಪಕ್ಷದ ನಾಯಕರಿಗೆ ರು ಬಿಬಿಎಂಪಿಯ ಆಡಳಿತ ವೈಖರಿ ವಿರುದ್ದ ದನಿಎತ್ತಲು ಹಿಂಜರಿಕೆ ಯಾಕೆ? ಬೆಂಗಳೂರು ಉಸ್ತುವಾರಿ ಹೊತ್ತಿರುವ ಡಿಸಿಎಂ ಡಿಕೆಶಿ ಪಾತ್ರ ಬಹಳ ಮುಖ್ಯವಾದದ್ದು. ಬೆಂಗಳೂರು ಉಸ್ತುವಾರಿ ಸಚಿವರಾಗಿ ಡಿಕೆಶಿವಕುಮಾರ್ ವಿರುದ್ಧ ದನಿ ಎತ್ತಲು ಬಿಜೆಪಿ ಯಾಕೆ ಹಿಂದೇಟು ಹಾಕುತ್ತಿದೆ ಎಂಬ ಚರ್ಚೆ ಬಿಜೆಪಿ ವಲಯದಲ್ಲೇ  ನಡೆಯುತ್ತಿದೆ.

ಅದರಲ್ಲೂ ಪ್ರಮುಖವಾಗಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಬಲವಾಗಿ ಟೀಕಿಸುವಷ್ಟು ಉತ್ಸಾಹವನ್ನು ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್‌ ವಿರುದ್ಧ ತೋರಿಸುತ್ತಿಲ್ಲ ಎಂಬ ವಿಚಾರ ಅವರದೇ ಪಕ್ಷದೊಳಗೆ ಚರ್ಚೆಯಾಗುತ್ತಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಬೆಂಗಳೂರು ಮಳೆ ಸಮಸ್ಯೆಗಳಿಗೆ ಸಿದ್ಧವಾಗಿಲ್ಲ ಹಾಗೂ ಜನ ಎಂದಿನಂತೆ ಪರದಾಟ ನಡೆಸುವಂತಾಗಿದೆ. ಈ ನಡುವೆ ಆಡಳಿತಾರೂಡ ಸರ್ಕಾರ, ವಿರೋಧ ಪಕ್ಷಗಳು ಮತ್ತು ಅವರವರದೇ ಆದ ಗುಂಪು  ರಾಜಕೀಯದಿಂದಾಗಿ ಬೆಂಗಳೂರು ಸಮಸ್ಯೆಗಳ ನಡುವೆ ನರಳುವಂತಾಗಿದೆ. ಪ್ರಜಾಪ್ರಭುತ್ವ ಆಶಯದಂತೆ ಶಾಸಕರಾಗಿ ಆಯ್ಕೆಯಾಗಿರುವ ಶಾಸಕರು ಯಾಕೆ ಇನ್ನೂ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

Tags:    

Similar News