ಪೊಲೀಸರ ಟೋಪಿ ಬದಲಾವಣೆ ; ಸಿಎಂ ಜತೆ ಚರ್ಚಿಸಿ ನಿರ್ಧಾರ-ಡಾ.ಜಿ.ಪರಮೇಶ್ವರ್‌

ದೇಶದ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಸಿಬ್ಬಂದಿ ಬಳಸುವ ಕ್ಯಾಪ್‌ಗಳ (ಟೋಪಿ) ವಿನ್ಯಾಸವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಶುಕ್ರವಾರ ವೀಕ್ಷಿಸಿದರು.;

Update: 2025-06-27 12:15 GMT

ವಿವಿಧ ರಾಜ್ಯಗಳ ಪೊಲೀಸ್‌ ಕ್ಯಾಪ್‌ಗಳನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ವೀಕ್ಷಿಸಿದರು.

ರಾಜ್ಯ ಪೊಲೀಸ್‌ ಇಲಾಖೆ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳು ಬಳಸುತ್ತಿರುವ ಬ್ರಿಟೀಷರ ಕಾಲದ ʼಸ್ಲೌಚ್‌ ಕ್ಯಾಪ್‌ʼ (ಟೋಪಿ) ಬದಲಿಸುವ ಕುರಿತು ಸಿಎಂ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಪೊಲೀಸರು ಸ್ಲೌಚ್‌ ಕ್ಯಾಪ್‌ ಬದಲಿಸುವಂತೆ ಕೆಎಸ್‌‍ಆರ್‌ಪಿಯ ಎಡಿಜಿಪಿ ಉಮೇಶ್‌ಕುಮಾರ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಶುಕ್ರವಾರ ವಿವಿಧ ವಿನ್ಯಾಸದ ಪೊಲೀಸ್‌ ಟೋಪಿಗಳನ್ನು ವೀಕ್ಷಿಸಿದ ಬಳಿಕ ಗೃಹ ಸಚಿವ ಪರಮೇಶ್ವರ್‌ ಮಾತನಾಡಿದರು.  

ಪ್ರಸ್ತುತ, ಬಳಕೆಯಲ್ಲಿರುವ ಸ್ಲೌಚ್‌ ಕ್ಯಾಪ್‌ ಬದಲು ಕಡು ನೀಲಿ ಬಣ್ಣದ ಬೆರೆಟ್‌ ಕ್ಯಾಪ್‌ ಬಳಕೆಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಇದೇ ರೀತಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಪೊಲೀಸ್‌‍ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳು ಖಾಕಿ ಕಡುನೀಲಿ ಬಣ್ಣದ ಇನ್‌ಸ್ಪೆಕ್ಟರ್‌ ಮಾದರಿಯ ಪೀಕ್‌ ಕ್ಯಾಪ್‌ಗಳನ್ನು ಬಳಸುತ್ತಿದ್ದಾರೆ. ಗೋವಾ, ದೆಹಲಿಯಲ್ಲಿ ಕಡುನೀಲಿ ಬಣ್ಣದ ಬೆರೆಟ್‌ ಕ್ಯಾಪ್‌ಗಳು ಬಳಕೆಯಾಗುತ್ತಿವೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. 

ರಾಜ್ಯ ಪೊಲೀಸ್‌ ಇಲಾಖೆಗೆ ಸೂಕ್ತವಾದ ಆಕರ್ಷಕ ಹಾಗೂ ಕಾರ್ಯನಿರ್ವಹಣೆಗೆ ಪೂರಕವಾದ ಕ್ಯಾಪ್‌ ಆಯ್ಕೆ ಮಾಡಿ, ಹೊಸ ಕ್ಯಾಪ್‌ ನೀಡುವ ಸಾಧ್ಯತೆ ಇದೆ.

ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ

ಕಾನ್‌ಸ್ಟೆಬಲ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗೆ ದಟ್ಟ ಹಸಿರು ಬಣ್ಣದ ಬೆರೆಟ್‌ ಕ್ಯಾಪ್‌ಗಳನ್ನು ಧರಿಸಲು ಅವಕಾಶ ನೀಡುವ ಕುರಿತು ಕಳೆದ ವರ್ಷ ಬಜೆಟ್‌ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ  ಪ್ರಸ್ತಾಪಿಸಿದ್ದರು.

ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪೊಲೀಸ್‌‍ ಮಹಾ ನಿರ್ದೇಶಕರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸೂಚಿಸಿದ್ದರು. ಅದರಂತೆ ಕೆಎಸ್‌‍ಆರ್‌ಪಿಯ ಎಡಿಜಿಪಿ ಉಮೇಶ್‌ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು.

ಪ್ರಸ್ತಾವನೆ ತಿರಸ್ಕರಿಸಿದ್ದ ಸಮಿತಿ

ಜನದಟ್ಟಣೆ, ಪ್ರತಿಭಟನೆ, ಬೃಹತ್‌ ಕಾರ್ಯಕ್ರಮದ ಸ್ಥಳಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಅಗತ್ಯವಾದ ಹಾಗೂ ಪೊಲೀಸರನ್ನು ನಿರ್ದಿಷ್ಟವಾಗಿ ಗುರುತಿಸಬೇಕಾದರೆ ಕ್ಯಾಪ್‌ ಅಗತ್ಯ. ಹೀಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಖಾಕಿ ಬಣ್ಣದ ಸ್ಲೌಚ್‌ ಮಾದರಿಯ ಟೋಪಿಯೇ ಸೂಕ್ತ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿ ಟೋಪಿಗಳ ಮಾದರಿ ಬದಲಾವಣೆಯನ್ನು 2024 ಜುಲೈನಲ್ಲಿ ತಿರಸ್ಕರಿಸಿತ್ತು.

ಆದರೆ, ಪ್ರಸ್ತುತ ಬಳಕೆಯಲ್ಲಿರುವ ಟೋಪಿಗಳು ಲಗೇಜ್‌ ಮಾದರಿಯಲ್ಲಿ ಹೊರೆಯಾಗುತ್ತಿದ್ದು, ದೂರದ ಪ್ರಯಾಣಕ್ಕೆ ಅನಾನುಕೂಲವಾಗಿವೆ. ಹೀಗಾಗಿ ಪ್ರಸ್ತಾವಿತ ಮಾದರಿಯ ಟೋಪಿ ಅಳವಡಿಕೆ ಸೂಕ್ತ ಎಂಬ ಚರ್ಚೆಗಳೂ ನಡೆದಿದ್ದವು.

ಎಡಿಜಿಪಿ ಉಮೇಶ್‌ಕುಮಾರ್‌ ನೂತನ ಪ್ರಸ್ತಾವಿತ ಟೋಪಿಗಳ ಅನುಕೂಲತೆ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ಟೋಪಿಗಳ ಅನಾನುಕೂಲತೆ ಬಗ್ಗೆ ವಿವರಿಸಿದ್ದರು.

Tags:    

Similar News