ಪೋಕ್ಸೋ ಪ್ರಕರಣ | ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ: ಬಂಧನಕ್ಕೆ ಕ್ಷಣಗಣನೆ
ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ;
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೌಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ ನಲ್ಲಿ ಸಂತ್ರಸ್ತೆಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸಹೋದರ, ಆರೋಪಿಯ ಬಂಧನಕ್ಕೆ ಆದೇಶ ನೀಡುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದರು.
ಸಂತ್ರಸ್ತೆಯ ಸಹೋದರನ ಅರ್ಜಿ ವಿಚಾರಣೆ ನಡೆಸಿದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೋ ಪ್ರಕರಣಗಳ ವಿಚಾರಣೆಯ ತ್ವರಿತಗತಿಯ ವಿಶೇಷ ನ್ಯಾಯಾಲಯ ಗುರುವಾರ ಮಧ್ಯಾಹ್ನ ಆದೇಶ ನೀಡಿದ್ದು, ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕೂಡಲೇ ಬಂಧಿಸಿ ಎಂದು ಸೂಚಿಸಿ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.
"ಆರೋಪಿ ಎಲ್ಲಾ ರೀತಿಯಲ್ಲೂ ಪ್ರಭಾವಿಯಾಗಿದ್ದು, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರ ಪುತ್ರರು ಕೂಡ ಪ್ರಭಾವಿಗಳಾಗಿದ್ದು, ಒಬ್ಬರು ಹಾಲಿ ಸಂಸದರು ಮತ್ತು ಮತ್ತೊಬ್ಬರು ಶಾಸಕರಾಗಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಇಂತಹ ಪ್ರಭಾವದ ಹಿನ್ನೆಲೆಯಲ್ಲೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಹಾಜರಾಗಿಲ್ಲ. ಹಾಗಾಗಿ ಅವರನ್ನು ಬಂಧಿಸಲು ನಿರ್ದೇಶಿಸಬೇಕು" ಎಂದು ಪ್ರಕರಣದ ವಿಶೇಷ ಪ್ಯಾಸಿಕ್ಯೂಟರ್ ಅಶೋಕ್ ನಾಯಕ್ ನ್ಯಾಯಾಲಯಕ್ಕೆ ಕೋರಿದ್ದರು.
ಆ ಕೋರಿಕೆಯನ್ನು ಮಾನ್ಯ ಮಾಡಿದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೋ ಪ್ರಕರಣಗಳ ವಿಚಾರಣೆಯ ತ್ವರಿತಗತಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್ ಎಂ ರಮೇಶ್ ಅವರು ಬಂಧನ ವಾರೆಂಟ್ ಹೊರಡಿಸಲು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ
“ಅಪ್ರಾಪ್ತ ಬಾಲಕಿಯನ್ನು ತಮ್ಮ ಖಾಸಗಿ ಕೋಣೆಗೆ ಕರೆದೊಯ್ದು ಎದೆ ಭಾಗವನ್ನು ಹಿಸುಕಿ ಲೈಂಗಿಕ ಕಿರುಕುಳ ನೀಡಿದ್ದಾರೆ” ಎಂದು ಸಂತ್ರಸ್ತೆಯ ತಾಯಿ ಮಾರ್ಚ್ 14ರಂದು ಸದಾಶಿವನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
ತಮ್ಮ ಮಗಳ ಮೇಲೆ ಈ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಜರುಗಿಸಿಲ್ಲ. ಹಾಗಾಗಿ ನೀವು ರಾಜ್ಯ ಸರ್ಕಾರಕ್ಕೆ ಈ ವಿಷಯದಲ್ಲಿ ಮಾತನಾಡಿ ಪ್ರಕರಣದ ತನಿಖೆ ನಡೆಸಿ ನ್ಯಾಯ ಕೊಡಿಸಲು ಸಹಾಯ ಮಾಡಿ ಎಂದು ನೊಂದ ತಾಯಿ ಮಾಜಿ ಮುಖ್ಯಮಂತ್ರಿಗಳ ಬೆಂಗಳೂರಿನ ನಿವಾಸಕ್ಕೆ ನೆರವು ಯಾಚಿಸಿ ಹೋಗಿದ್ದಾಗ ಬಿ ಎಸ್ ಯಡಿಯೂರಪ್ಪ ಈ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.