ರೋಜ್‌ಗಾರ್ ಮೇಳ| 51 ಸಾವಿರ ಜನರಿಗೆ ನೇಮಕಾತಿ ಪತ್ರ ವಿತರಣೆ; 11 ವರ್ಷದಲ್ಲಿ ಪ್ರತಿ ಕ್ಷೇತ್ರದ ಪ್ರಗತಿ ಬಣ್ಣಿಸಿದ ಪ್ರಧಾನಿ ಮೋದಿ
ಕೇಂದ್ರ ಸರ್ಕಾರ ಕಲ್ಯಾಣ ಯೋಜನೆಗಳ ಮೂಲಕ ದೇಶದ ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಿಸಿಕೊಟ್ಟಿದೆ. 10 ಕೋಟಿಗೂ ಹೆಚ್ಚು ಹೊಸ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸಿದೆ.;
ಪ್ರಧಾನಿ ಮೋದಿ
ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ ಸೃಷ್ಟಿಗೆ ತಮ್ಮ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಕಳೆದ 11 ವರ್ಷಗಳಲ್ಲಿ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ ರೋಜ್‌ಗಾರ್ ಮೇಳದಲ್ಲಿ 51,000 ಯುವಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿದ ಬಳಿಕ ವರ್ಚುವಲ್ ಭಾಷಣ ಮಾಡಿದರು.
ಕೇಂದ್ರ ಸರ್ಕಾರ ಕಲ್ಯಾಣ ಯೋಜನೆಗಳ ಮೂಲಕ ದೇಶದ ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಿಸಿಕೊಟ್ಟಿದೆ. 10 ಕೋಟಿಗೂ ಹೆಚ್ಚು ಹೊಸ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸಿದೆ. ಮೇಲ್ಛಾವಣಿ ಸೌರಶಕ್ತಿ ಕಾರ್ಯಕ್ರಮದಂತಹ ಹೊಸ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.
ಯುವಜನರು ಸಬಲೀಕರಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶ ಒದಗಿಸುವಲ್ಲಿ ರೋಜ್‌ಗಾರ್ ಮೇಳವು ಮಹತ್ವದ ಪಾತ್ರ ವಹಿಸಿದೆ. ಯೋಜನೆಯಡಿ ಈವರೆಗೂ 10 ಲಕ್ಷಕ್ಕೂ ಹೆಚ್ಚು ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಭಯದಿಂದ ಬಲದವರೆಗೆ
ಕಳೆದ 10 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಬಡವರು ಹಿಂದೆ ಕಷ್ಟಕರವಾದ ಜೀವನದಲ್ಲಿ ಸಾವಿಗೆ ಹೆದರುತ್ತಿದ್ದರು, ಆದರೆ ಅವರು ಈಗ ಬಡತನವನ್ನು ಸೋಲಿಸುವಷ್ಟು ಬಲಿಷ್ಠರಾಗಿದ್ದಾರೆ ಎಂದು ಹೇಳಿದರು.
ಉತ್ಪಾದನಾ ವಲಯದ ಮೇಲೆ ತಮ್ಮ ಸರ್ಕಾರ ಹೆಚ್ಚು ಗಮನ ಹರಿಸಿದ ಪರಿಣಾಮ ಎಲೆಕ್ಟ್ರಾನಿಕ್ ಉತ್ಪಾದನೆಯು 11 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ. ಮೊಬೈಲ್ ಉತ್ಪಾದನಾ ಘಟಕಗಳು ಸುಮಾರು 300 ರಷ್ಟು ಹೆಚ್ಚಾಗಿವೆ ಎಂದರು.
ರಕ್ಷಣಾ ಉತ್ಪಾದನೆಯಲ್ಲಿ ಏರಿಕೆ
ಪಾಕಿಸ್ತಾನದ ಜತೆಗಿನ ಸಂಘರ್ಷ ವೇಳೆ ಕೈಗೊಂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಂತರ, ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ರಕ್ಷಣಾ ಉತ್ಪಾದನೆಯು 1.25 ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಎಂದು ಮೋದಿ ಹೇಳಿದರು.
ಇತ್ತೀಚಿಗೆ ತಮ್ಮ ಐದು ರಾಷ್ಟ್ರಗಳ ಪ್ರವಾಸದ ಕುರಿತು ಮಾತನಾಡಿದ ಅವರು, ಭಾರತದ ಜನಸಂಖ್ಯೆ ಮತ್ತು ಪ್ರಜಾಪ್ರಭುತ್ವದ ಬಲವನ್ನು ಇಡೀ ಜಗತ್ತು ಗುರುತಿಸುತ್ತಿದೆ. ಭಾರತದ ಯುವಜನರ ಬಲವೇ ಅತಿದೊಡ್ಡ ಬಂಡವಾಳ, ದೇಶದ ಉಜ್ವಲ ಭವಿಷ್ಯದ ಖಾತರಿ ಎಂದು ಅಭಿಪ್ರಾಯಪಟ್ಟರು.