ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ | ಭುಗಿಲೆದ್ದ ರಾಜಕೀಯ ಕೆಸರೆರಚಾಟ: ಬೆಂಕಿಯಿಂದ ಬಾಣಲೆಗೆ ಸಂತ್ರಸ್ತೆಯರ ಸ್ಥಿತಿ

ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಈಗಾಗಲೇ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆದರೆ, ಆತನ ಲೈಂಗಿಕ ವಿಕೃತಿಗೆ ಬಳಕೆಯಾಗಿರುವ ನೂರಾರು ಮಹಿಳೆಯರ ಬದುಕು ಬೀದಿ ಸರಕಾಗಿದೆ. ಈ ಹೊತ್ತಿನಲ್ಲಿ ಸಂತ್ರಸ್ತ ಮಹಿಳೆಯರ ವಿಷಯದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಾಗಿದ್ದ ಜನನಾಯಕರು ರಾಜಕೀಯ ಲಾಭಕ್ಕಾಗಿ ಎಲ್ಲೆ ಮೀರಿ ವಾಗ್ವಾದಕ್ಕೆ ಇಳಿದಿದ್ದಾರೆ.;

Update: 2024-04-30 12:43 GMT

ಇಡೀ ಸಮಾಜವೇ ತಲೆತಗ್ಗಿಸಬೇಕಾದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಲೈಂಗಿಕ ಹಗರಣದ ವಿಷಯದಲ್ಲಿ ಕೂಡ ರಾಜಕೀಯ ಪಕ್ಷಗಳು ಲಾಭನಷ್ಟದ ಲೆಕ್ಕಾಚಾರದ ಪೈಪೋಟಿಗೆ ಬಿದ್ದಿವೆ. ನೂರಾರು ಮಹಿಳೆಯರ ಮಾನ- ಪ್ರಾಣದ ಪ್ರಶ್ನೆಯಾದ ಹಗರಣ, ಇದೀಗ ರಾಜಕೀಯ ಕೆಸರೆರಚಾಟದ ಸರಕಾಗಿ ಬದಲಾಗಿದೆ.

ಹಿಂದೆಂದೂ ಕಂಡು-ಕೇಳರಿಯದ ಪ್ರಮಾಣದಲ್ಲಿ ಸಾವಿರಾರು ಲೈಂಗಿಕ ದೌರ್ಜನ್ಯ, ಅತ್ಯಾಚಾರದ ವಿಡಿಯೋಗಳನ್ನು ಒಳಗೊಂಡಿರುವ ಈ ಹಗರಣದ ಆರೋಪಿ ಎನ್ನಲಾಗುತ್ತಿರುವ ಪ್ರಜ್ವಲ್ ರೇವಣ್ಣ ಈಗಾಗಲೇ ಸುರಕ್ಷಿತವಾಗಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆದರೆ, ಆತನ ಲೈಂಗಿಕ ವಿಕೃತಿಗೆ ಬಳಕೆಯಾಗಿರುವ ನೂರಾರು ಮಹಿಳೆಯರ ಬದುಕು ಬೀದಿ ಸರಕಾಗಿದೆ. ಈ ಹೊತ್ತಿನಲ್ಲಿ ಸಂತ್ರಸ್ತ ಮಹಿಳೆಯರ ದೃಷ್ಟಿಕೋನದಲ್ಲಿಸೂಕ್ಷ್ಮವಾಗಿ ವರ್ತಿಸಬೇಕಾಗಿದ್ದ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಎಲ್ಲಾ ಎಲ್ಲೆಗಳನ್ನು ಮೀರಿ ಸಾರ್ವಜನಿಕ ವಾಗ್ವಾದಕ್ಕೆ ಇಳಿದಿದ್ದಾರೆ.

ಪ್ರಜ್ವಲ್ ಗೆ ಲೋಕಸಭಾ ಟಿಕೆಟ್ ನೀಡಿ ಕಣಕ್ಕಿಳಿಸಿದ್ದು, ಅವರ ಕೃತ್ಯಗಳ ಅರಿವಿದ್ದೂ ಅವರನ್ನು ಬೆಂಬಲಿಸಿದ್ದು, ಪರಾರಿಯಾಗಲು ಪರೋಕ್ಷವಾಗಿ ನೆರವಾಗಿದ್ದು, ಅವರದ್ದು ಎನ್ನಲಾಗುವ ವಿಡಿಯೋ ತುಣುಕುಗಳನ್ನು ಒಳಗೊಂಡ ಪೆನ್ಡ್ರೈವನ್ನು ಚುನಾವಣಾ ಸಮಯದಲ್ಲೇ ಬಹಿರಂಗಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹರಡಿದ್ದು, ಹೀಗೆ ಹಲವು ವಿಷಯಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಕಾವೇರಿದೆ.

ಆರೋಪದ ಹೊರತಾಗಿಯೂ ವಿದೇಶಕ್ಕೆ ಹಾರಿದ

ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಕೃತ್ಯವನ್ನು ಚಿತ್ರೀಕರಿಸಿಕೊಂಡು ಮಹಿಳೆಯ ಮಾನ ಮತ್ತು ಪ್ರಾಣಕ್ಕೆ ಅಪಾಯ ತಂದಿರುವ ಆರೋಪಿ ಪ್ರಜ್ವಲ್ ರೇವಣ್ಣ ಎಸ್ ಐಟಿ ರಚನೆಗೆ ಮುನ್ನಾ ದಿನವೇ ವಿದೇಶಕ್ಕೆ ಹಾರಿದ್ದಾರೆ.

ರಾಜ್ಯ ಮಹಿಳಾ ಆಯೋಗ ಸಂತ್ರಸ್ತೆಯೊಬ್ಬರ ಹೇಳಿಕೆ ಆಧಾರದ ಮೇಲೆ ರಾಜ್ಯದ ಮುಖ್ಯಮಂತ್ರಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದು ಎಸ್ ಐಟಿ ರಚನೆಗೆ ಕೋರಿದ ಮೂರು ದಿನಗಳ ಬಳಿಕ ಎಸ್ ಐಟಿ ರಚಿಸಲಾಗಿದೆ. ಪ್ರಕರಣದ ಗಂಭೀರತೆ ಮತ್ತು ಅಗಾಧತೆ ಅರಿತು ತತಕ್ಷಣಕ್ಕೆ ಕ್ರಮವಹಿಸಬೇಕಿದ್ದ ಸರ್ಕಾರ, ವಿಳಂಬ ಮಾಡುವ ಮೂಲಕ ಪರೋಕ್ಷವಾಗಿ ಆರೋಪಿಯ ಪರಾರಿಗೆ ಸಹಕರಿಸಿತೆ? ಎಂಬ ಅನುಮಾನಗಳನ್ನು ಮಹಿಳಾ ಸಂಘಟನೆಗಳು ಎತ್ತಿವೆ.

“ಪ್ರಜ್ವಲ್ ರೇವಣ್ಣ ಒಬ್ಬ ಜನಸಾಮಾನ್ಯ ಅಲ್ಲ. ಅವರು ಲೋಕಸಭಾ ಸದಸ್ಯರು. ಮಾಜಿ ಪ್ರಧಾನಿ ಕುಟುಂಬದ ಕುಡಿ. ಹಾಗಿರುವಾಗ ಅವರಿಗೆ ಬೆಂಗಾವಲು ಪೊಲೀಸ್ ವಾಹನ ಇರುವುದು, ಭದ್ರತೆಗೆ ಗನ್ ಮ್ಯಾನ್ ಮತ್ತು ಪೊಲೀಸರು ಇರುವುದು ಸಾಮಾನ್ಯ. ಹಾಗಿರುವಾಗ ಅವರು ಚುನಾವಣಾ ಮತದಾನ ನಡೆದ ದಿನ ರಾತ್ರಿ ಹಾಸನದಿಂದ ಹೊರಟು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಜರ್ಮನಿಗೆ ಹೋಗಿದ್ದಾರೆ. ಗಂಭೀರ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಚಲನವಲನದ ಮೇಲೆ ಕಣ್ಣಿಡಬೇಕಿದ್ದ ರಾಜ್ಯ ಗುಪ್ತಚರ ಇಲಾಖೆ, ಜಿಲ್ಲಾ ಪೊಲೀಸರು ಏನು ಮಾಡುತ್ತಿದ್ದರು?” ಎಂದು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲ ಕೆ ಪಿ ಶ್ರೀಪಾಲ್ ಪ್ರಶ್ನಿಸುತ್ತಾರೆ.

ಸಂಸದ ರೇವಣ್ಣ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತಾ ಮೊಹಮ್ಮದ್ ಅವರನ್ನು ʼದ ಫೆಡರಲ್ ಕರ್ನಾಟಕʼ ಸಂಪರ್ಕಿಸಿತಾದರೂ, ಅವರು ಪ್ರಕರಣ ಈಗಾಗಲೇ ಎಸ್ ಐಟಿಗೆ ಹಸ್ತಾಂತರವಾಗಿರುವುದರಿಂದ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

ಪ್ರಭಾವಿಗಳ ಮಕ್ಕಳಿಗೆ ವಿಧಾನಸೌಧವೇ ನಡುಗುತ್ತೆ

ಸಾವಿರಾರು ಲೈಂಗಿಕ ದೌರ್ಜನ್ಯ ಎಸಗಿರುವ ವ್ಯಾಪಕ ಪೆನ್ ಡ್ರೈವ್ ಹಗರಣದ ಆರೋಪದ ಹೊರತಾಗಿಯೂ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅನಾಯಾಸವಾಗಿ ದೇಶ ಬಿಟ್ಟು ಹೋಗಿರುವುದು ಮತ್ತು ಆತ ದೇಶ ಬಿಟ್ಟು ಹೋದ ಮಾರನೇ ದಿನ ಸರ್ಕಾರ ಎಸ್ ಐಟಿ ತನಿಖೆಗೆ ಆದೇಶ ನೀಡಿರುವುದರ ಹಿನ್ನೆಲೆಯಲ್ಲಿ ನಿವೃತ್ತಿ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಅವರನ್ನು ʼದ ಫೆಡರಲ್ ಕರ್ನಾಟಕʼ ಮಾತನಾಡಿಸಿತು.

ಅವರು, “ಮುಖ್ಯವಾಗಿ ಪೊಲೀಸ್ ಇಲಾಖೆ ಈ ವಿಷಯದಲ್ಲಿ ಎಚ್ಚರ ವಹಿಸಬೇಕಿತ್ತು. ಆತನ ವಿರುದ್ಧ ಕಳೆದ ಆರು ತಿಂಗಳುಗಳಿಂದಲೇ ಇಂತಹ ಆರೋಪಗಳು ಕೇಳಿಬಂದಿದ್ದವು ಎನ್ನಲಾಗುತ್ತಿದೆ. ಜೊತೆಗೆ ಆತ ಪರಾರಿಯಾಗುವ ಮೂರು ದಿನ ಹಿಂದೆಯೇ ಮಹಿಳಾ ಆಯೋಗ ಪತ್ರ ಬರೆದಿತ್ತು. ಹಾಗಿದ್ದರೂ ಪೊಲೀಸ್ ಬೆಂಗಾವಲಿನಲ್ಲಿರುವ ಸಂಸದ ಪೊಲೀಸರ ಗಮನಕ್ಕೆ ಬಾರದಂತೆ ಪರಾರಿಯಾಗಲು ಹೇಗೆ ಸಾಧ್ಯ? ಇದೀಗ, ಎಫ್ ಐಆರ್ ದಾಖಲಾಗಿದೆ. ಈಗಲಾದರೂ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿ ಕೂಡಲೇ ಆತನ ಬಂಧಿಸಿ ಕರೆತರಬೇಕಿದೆ. ಆದರೆ, ಜನಸಾಮಾನ್ಯರ ವಿಷಯದಲ್ಲಿ ಇದೇ ಆಗಿದ್ದರೆ ಆತನ ವಿರುದ್ಧ ಪೆನ್ ಡ್ರೈವ್ ಹರಿದಾಡುತ್ತಿದ್ದಂತೆಯೇ ಬಂಧನವಾಗಿರುತ್ತಿತ್ತು. ಆದರೆ, ಈತ ಸಂಸದ, ಪ್ರಭಾವಿ ಕುಟುಂಬದ ಕುಡಿ, ಜಾತಿ, ಹಣ, ಅಧಿಕಾರ ಬಲ ಇರುವವ. ಹಾಗಾಗಿ ಪ್ರಭಾವಿಗಳ ಮಕ್ಕಳ ವಿಷಯದಲ್ಲಿ ವಿಧಾನಸೌಧದ ಕಲ್ಲುಗಳೇ ನಡುವಾಗ, ಅಧಿಕಾರಿಗಳು ನಡುಗದೇ ಇರುತ್ತಾರೆಯೇ?” ಎಂದು ನಿವೃತ್ತ ಎಸಿಪಿ ಬಿ ಕೆ ಶಿವರಾಂ ಮಾರ್ಮಿಕ ಪ್ರತಿಕ್ರಿಯೆ ನೀಡಿದರು.

ಸಂತ್ರಸ್ತೆಯರಿಗೆ ವಿಶ್ವಾಸ ಮೂಡಿಸುವ ಜರೂರು

ನೂರಾರು ಹೆಣ್ಣುಮಕ್ಕಳನ್ನು ಬಳಸಿಕೊಂಡು ಲೈಂಗಿಕ ಹಗರಣ ನಡೆಸಿರುವ ವಿಕೃತ ಸಂಸದ ಒಂದು ಕಡೆಯಾದರೆ, ಆ ಹೆಣ್ಣುಮಕ್ಕಳ ಗುರುತನ್ನು ಮಾಸಲು ಮಾಡದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಅವರ ಘನತೆ, ಬದುಕಿಗೆ ಧಕ್ಕೆ ತಂದಿರುವುದು ಮತ್ತೊಂದು ಅಪರಾಧ.

ಚುನಾವಣಾ ಸಂದರ್ಭದಲ್ಲಿ ಹಾಸನದಲ್ಲಿ ಹರಡಿದ ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳ ಮೂಲಕ ಈಗ ಜಗತ್ತಿನಾದ್ಯಂತ ವ್ಯಾಪಿಸಿವೆ. ಆ ಹಿನ್ನೆಲೆಯಲ್ಲಿ ಕಳೆದ ವಾರವೇ ಕೆಲವು ಸಂತ್ರಸ್ತೆಯರು ಆತಂಕದಿಂದ ಆತ್ಮಹತ್ಯೆಗೆ ಮುಂದಾಗಿದ್ದರು. ಪರಿಸ್ಥಿತಿ ಹೀಗಿರುವಾಗ ಮೊದಲು ಆ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗದಂತೆ, ಜಾಲತಾಣಗಳಲ್ಲಿ ಹರಿಬಿಡದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ಮಹಿಳಾ ಪರ ಹೋರಾಟಗಾರರಿಂದ ಕೇಳಿಬರುತ್ತಿದೆ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಅವರು, “ಇದೊಂದು ಇಡೀ ನಾಡೇ ನಾಚಿ ತಲೆತಗ್ಗಿಸುವಂತಹ ಘಟನೆ. ಕೃತ್ಯ ಎಸಗಿದ ಆರೋಪಿಯನ್ನು ವಿದೇಶದಿಂದ ಎಳೆದು ತಂದು ಕಟಕಟೆಗೆ ನಿಲ್ಲಿಸುವುದು ಎಷ್ಟು ಮುಖ್ಯವೋ, ಹಾಗೇ ಸಂತ್ರಸ್ತ ಹೆಣ್ಣುಮಕ್ಕಳ ಪ್ರಾಣ ಮತ್ತು ಮಾನ ರಕ್ಷಣೆ ಕೂಡ ಸರ್ಕಾರ ಮತ್ತು ಸಮಾಜದ ಹೊಣೆ. ಜೊತೆಗೆ ಆ ನೊಂದವರು, ಆರೋಪಿಯ ಜಾತಿ, ಅಧಿಕಾರ, ಹಣ, ರಾಜಕೀಯ ಬಲ ಮುಂತಾದ ಪ್ರಭಾವಗಳ ಹೊರತಾಗಿಯೂ ಮುಂದೆ ಬಂದು ಸಾಕ್ಷ್ಯ ಹೇಳುವ, ಮಾಹಿತಿ ನೀಡುವ ವಾತಾವರಣ ಸೃಷ್ಟಿಸಬೇಕಿದೆ. ಮಹಿಳಾ ಸಂಘಟನೆಗಳು ಈ ನಿಟ್ಟಿನಲ್ಲಿ ಸಂತ್ರಸ್ತೆಯರ ಪರ ಗಟ್ಟಿಯಾಗಿ ನಿಲ್ಲಬೇಕಿದೆ. ತನಿಖಾ ಸಂಸ್ಥೆಗಳು ಆ ಮಹಿಳೆಯರಲ್ಲಿ ವಿಶ್ವಾಸ ತುಂಬುವ, ಅವರ ಪರ ಸರ್ಕಾರ ಇದೆ ಎಂಬ ನಂಬಿಕೆ ಹುಟ್ಟಿಸುವ ರೀತಿಯಲ್ಲಿ ಕೆಲಸ ಮಾಡಬೇಕಿದೆ. ಇದು ತುರ್ತು ಆದ್ಯತೆ” ಎಂದು ಅಭಿಪ್ರಾಯಪಟ್ಟರು.

“ನೂರಾರು ಸಂಖ್ಯೆಯಲ್ಲಿ ಸಂತ್ರಸ್ತೆಯರು ಇರುವ ಹಿನ್ನೆಲೆಯಲ್ಲಿ ವಿಶೇಷ ಸಹಾಯವಾಣಿ, ಸಂತ್ರಸ್ತೆಯರ ಸ್ನೇಹಿ ಪೊಲೀಸ್ ವ್ಯವಸ್ಥೆ, ದೂರುಗಳನ್ನು ಪಡೆದು ಎಫ್ ಐಆರ್ ದಾಖಲಿಸುವಾಗ ಸೂಕ್ತ ಕಲಂ ದಾಖಲಿಸುವುದು, ಸಂತ್ರಸ್ತೆಯರ ಗೌಪ್ಯತೆ ಕಾಯುವುದು ಮುಂತಾದ ಕ್ರಮಗಳನ್ನು ಕೂಡ ಪೊಲೀಸ್ ಇಲಾಖೆ ಖಾತರಿಪಡಿಸಬೇಕಿದೆ. ಆ ಬಗ್ಗೆ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಆದರೆ, ನೂರಾರು ಮಹಿಳೆಯರ ಬದುಕಿನ ಪ್ರಶ್ನೆಯಾದ ಈ ಪ್ರಕರಣದಲ್ಲಿ ನಮ್ಮ ರಾಜಕಾರಣಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಪರಮ ಅಸಹ್ಯ” ಎಂದು ದಶಕಗಳಿಂದ ಮಹಿಳಾ ಪರ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ರೂಪಾ ಹಾಸನ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ರಾಜ್ಯ ಮಹಿಳಾ ಆಯೋಗ ವೈರಲ್ ಆಗಿರುವ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯಬೇಕು ಅಥವಾ ಅದರಲ್ಲಿ ಇರುವ ಮಹಿಳೆಯರ ಗುರುತು ಮಾಸಲು(ಬ್ಲರ್) ಮಾಡುವ ಪ್ರಯತ್ನವನ್ನಾದರೂ ಮಾಡಿ ಎಂದು ರಾಜ್ಯ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗಕ್ಕೆ ಮತ್ತೊಂದು ಪತ್ರ ಬರೆದಿದೆ. ಆದರೆ, ಈಗಾಗಲೇ ಕೋಟಿ ಕೋಟಿ ಜನರ ಕೈಸೇರಿರುವ ವಿಡಿಯೋಗಳನ್ನು ಹೇಗೆ ನಾಶಪಡಿಸುವುದು ಸಾಧ್ಯ? ಇದು ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಯತ್ನವಲ್ಲವೆ? ಎಂಬ ಪ್ರಶ್ನೆಯೂ ಎದುರಾಗಿದೆ.

Tags:    

Similar News