Police Constable Hat | ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಪೀಕ್‌ ಕ್ಯಾಪ್‌; ಬ್ರಿಟೀಷ್‌ ಕಾಲದ ಗ್ಲೋಚ್‌ ಟೋಪಿಗೆ ಗುಡ್‌ ಬೈ

ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಇಲಾಖೆಯು ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ನೀಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನೀಡುವ ಕುರಿತಾಗಿ ಪರಿಶೀಲನೆ ನಡೆಸಲಾಗುತ್ತಿದೆ.;

Update: 2025-03-30 06:54 GMT

ಬ್ರೀಟೀಷ್‌ ಕಾಲದ ಪೊಲೀಸರ ಟೋಪಿಗೆ (ಗ್ಲೋಚ್‌ ಟೋಪಿ) ಗುಡ್‌ ಬೈ ಹೇಳಲು ಪೊಲೀಸ್ ಇಲಾಖೆ ಸಿದ್ಧವಾಗಿದೆ. ಹೆಡ್ ಕಾನ್‌ಸ್ಟೆಬಲ್‌, ಕಾನ್ ಸ್ಟೆಬಲ್ ಧರಿಸುವ ಗ್ಲೋಚ್ ಟೋಪಿ ಬದಲಾವಣೆ ಇಲಾಖೆ ಸಿಬ್ಬಂದಿಯಿಂದ ಒತ್ತಡ ಹೆಚ್ಚಿತ್ತು. ಆರೋಗ್ಯದ ಮೇಲೆ ಗ್ಲೋಚ್‌ ಟೋಪಿ ಗಂಭೀರ ಪರಿಣಾಮ ಬೀರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕೂಡ ಇತ್ತೀಚೆಗೆ ಎಚ್ಚರಿಕೆ ಸಹ ನೀಡಿತ್ತು.  ಬಹುವರ್ಷಗಳ ಬೇಡಿಕೆ ಹಾಗೂ ಆರೋಗ್ಯ ಇಲಾಖೆ ನೀಡಿದ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ ಇದೀಗ ಟೋಪಿ ಬದಲಾಯಿಸಲು ತೀರ್ಮಾನಿಸಿದೆ.

ಪ್ರತಿಭಟನೆ, ಲಾಠಿ ಚಾರ್ಜ್ ಸಂದರ್ಭದಲ್ಲಿ ಪೊಲೀಸ್‌ ಟೋಪಿಯಿಂದ ಹೆಚ್ಚು ಸಮಸ್ಯೆಯಾಗುತ್ತಿತ್ತು. ಓಡುವಾಗ ಕೆಳಗೆ ಬಿದ್ದರೆ ಸಾರ್ವಜನಿಕವಾಗಿ ಅವಮಾನವಲ್ಲದೇ ಇಲಾಖೆಯ ಸಮವಸ್ತ್ರಕ್ಕೂ ಅಗೌರವ ತೋರಿದಂತಾಗುತ್ತದೆ. ಹಾಗಾಗಿ ಬ್ರಿಟೀಷ್‌ ಕಾಲದ ತೋಪಿ ಬದಲಾವಣೆ ಮಾಡುವಂತೆ ಬಹು ವರ್ಷಗಳಿಂದ ಪೊಲೀಸರು ಬೇಡಿಕೆ ಇಟ್ಟಿದ್ದರೂ ಈಡೇರಿರಲಿಲ್ಲ.

ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುವ ಗ್ಲೋಚ್ ಟೋಪಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಾಧ್ಯತೆ ಕುರಿತು ಕೇಂದ್ರ ಆರೋಗ್ಯ ಇಲಾಖೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.

ಎಲ್ಲೆಲ್ಲಿ ಪೀಕ್‌ ಕ್ಯಾಪ್‌ ಬಳಕೆ

ದೇಶದ ಹಲವು ರಾಜ್ಯಗಳಲ್ಲಿ ಪೊಲೀಸರು ಪೀಕ್‌ ಕ್ಯಾಪ್‌ ಬಳಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬ್ರಿಟೀಷ್‌ ಕಾಲದ ಟೋಪಿಯನ್ನೇ ಬಳಸಲಾಗುತ್ತಿತ್ತು. ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಇಲಾಖೆಯು ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ನೀಡಿದೆ. ಸದ್ಯ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನೀಡುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಜಿ ಐಜಿಪಿ ಡಾ. ಅಲೋಕ್ ಮೋಹನ್ ಅವರು ಸೂಚಿಸಿದ್ದಾರೆ.

ಏ.4 ರಂದು ಹಿರಿಯ ಅಧಿಕಾರಿಗಳ ಸಭೆ

ಪೀಕ್ ಟೋಪಿ ವಿತರಣೆ ಕುರಿತಯು ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಆರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏ. 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ.

ಪ್ರಧಾನ ಕಚೇರಿ ಐಜಿಪಿ, ಬೆಂಗಳೂರು ಉತ್ತರ ವಿಭಾಗ, ಆಗ್ನೇಯ ವಿಭಾಗ ಹಾಗೂ ಸಿಎಆರ್ ಡಿಸಿಪಿಗಳು, ಬೆಂಗಳೂರು ನಗರ ಜಿಲ್ಲೆ ಎಸ್ಪಿ, ಕೆಎಸ್ಆರ್ಪಿ ಕಮಾಂಡೆಂಟ್ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಲಿದ್ದಾರೆ.

Tags:    

Similar News