ಬಂಟ ಬ್ರಿಗೇಡ್ ಹೆಸರಿನಲ್ಲಿ ಬಿಲ್ಲವರ ವಿರುದ್ಧ ಕರಪತ್ರ: ಕಾಂಗ್ರೆಸ್ ಕೈವಾಡ ಎಂದ ಬಿಜೆಪಿ
ಕರಾವಳಿಯಲ್ಲಿ ಈ ಬಾರಿಯ ಲೋಕ ಕದನದಲ್ಲಿ ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದ ಜಾತಿ ರಾಜಕಾರಣ ಹೆಡೆಯೆತ್ತಿ ನಿಂತಿದೆ. ಕರಾವಳಿಯಲ್ಲಿ ಹಿಂದುತ್ವಕ್ಕೆ ಮೀರಿ ಜಾತಿ ಪ್ರಜ್ಞೆ ಮೇಲುಗೈ ಸಾಧಿಸುತ್ತಿದೆ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇರುವ ನಡುವೆಯೇ, ಜಾತಿಗಳ ನಡುವೆ ವೈಮನಸ್ಯ ಬಿತ್ತುವಂತಹ ಪತ್ರವೊಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವೈರಲ್ ಆಗುತ್ತಿದೆ.
ಜಿಲ್ಲೆಯ ಪ್ರಬಲ ಜಾತಿಯಾದ ಬಂಟರ ಸಂಘಟನೆಯೊಂದರ ಹೆಸರಿನಲ್ಲಿ ಪತ್ರ ವೈರಲ್ ಆಗುತ್ತಿದ್ದು, ಈ ಪತ್ರವು ಬಿಜೆಪಿ ಮತ್ತು ಬಂಟರ ವಿರುದ್ಧ ಬಿಲ್ಲವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ, ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಬಿಲ್ಲವ vs ಬಂಟ ಜಿದ್ದಾಜಿದ್ದಿನ ವಾತಾವರಣದ ಹಿನ್ನೆಲೆಯಲ್ಲಿ ಈ ಪತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದೇ, ವೇಳೆ ಈ ಕರಪತ್ರ ನಕಲಿಯೆಂದು ಬಿಜೆಪಿ, ಚುನಾವಣಾಧಿಕಾರಿಗಳ ಮೊರೆ ಹೋಗಿದೆ.
ಇದನ್ನೂ ಓದಿ: ಸೌಜನ್ಯಾ ಪ್ರಕರಣ | ಬಿಜೆಪಿಗೆ ಅಡ್ಡಗಾಲಾಗುವುದೇ ಹೋರಾಟಗಾರರ ನೋಟಾ ಅಭಿಯಾನ?
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ಎಂದಿನಂತೆ ಬಂಟ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಳೆದ ಮೂರು ಅವಧಿಯಲ್ಲಿ ಸಂಸದರಾಗಿದ್ದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತಾದರೂ, ಅವರದೇ ಸಮುದಾಯದ ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದೆ.
ಜಿಲ್ಲೆಯ 5 ಶಾಸಕರು, ಸತತವಾಗಿ 3 ಬಾರಿ ಗೆದ್ದುಬಂದ ಸಂಸದರೆಲ್ಲರೂ ಬಂಟ ಸಮುದಾಯಕ್ಕೆ ಸೇರಿದವರಾಗಿದ್ದು, ಜಿಲ್ಲೆಯ ನಂಬರ್ 1 ಮತದಾರರಾಗಿದ್ದರೂ ತಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಸಮಾಧಾನ ಸೇರಿದಂತೆ ಹಲವು ಅಂಶಗಳು ಈ ಬಾರಿ ಬಿಲ್ಲವರ ಅಸಮಾಧಾನಕ್ಕೆ ಕಾರಣವಾಗಿವೆ. ಹೀಗಿರುವಾಗ, ಮತದಾನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಬಿಲ್ಲವರನ್ನು ರೊಚ್ಚಿಗೆಬ್ಬಿಸುವ ರೀತಿಯಲ್ಲಿ ಪತ್ರವೊಂದು ಹರಿದಾಡುತ್ತಿದ್ದು, ಬಂಟರು ಬಂಟ ಅಭ್ಯರ್ಥಿಯಾದ ಬ್ರಿಜೇಶ್ ಚೌಟ ಅವರನ್ನು ಬೆಂಬಲಿಸುವಂತೆ ಕರಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಪೋಸ್ಟರ್ ವಿರುದ್ಧ ಬಿಲ್ಲವರು ಆಕ್ರೋಶ ಹೊರ ಹಾಕುತ್ತಿದ್ದಂತೆಯೇ, ಪೋಸ್ಟರ್ ಹರಿಬಿಟ್ಟಿರುವುದರ ಹಿಂದೆ ಕಾಂಗ್ರೆಸ್ ಕೈವಾಡ ಇದೆಯೆಂದು ಬಿಜೆಪಿ ಆರೋಪಿಸುತ್ತಿದೆ.
ಪತ್ರದಲ್ಲಿ ಏನಿದೆ?
“ಪ್ರೀತಿಯ ಸ್ವಜಾತಿ ಬಾಂಧವರೇ, ಚುನಾವಣೆಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ನಮ್ಮ ಸಮಾಜಕ್ಕೆ ಸೇರಿದ ಬ್ರಿಜೇಶ್ ಚೌಟರವರು ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಯಾಗಿದ್ದಾರೆ. ಒಂದು ಕಾಲದಲ್ಲಿ ಬಂಟ ನಾಯಕರನ್ನು ಮೂಲೆಗೆ ಸರಿಸಿ ಬಿಲ್ಲವರು ಮೆರೆದಾಡಿದ್ದ ಕ್ಷೇತ್ರ ನಂತರದ ದಿನದಲ್ಲಿ ನಮ್ಮ ಬಂಟರ ತೆಕ್ಕೆಗೆ ಬಂದಿದೆ. ನಳಿನ್ ಕುಮಾರ್ ಕಟೀಲ್ ಸತತ ಮೂರು ಬಾರಿ ಗೆಲ್ಲುವ ಮೂಲಕ ನಾವು ನಮ್ಮ ಒಗ್ಗಟ್ಟನ್ನು ಸಾಬೀತುಪಡಿಸಿದ್ದೇವೆ. ಆದರೆ ಒಂದು ಕಾಲದಲ್ಲಿ ನಮ್ಮ ಒಕ್ಕಲಿನಲ್ಲಿದ್ದ ಬಿಲ್ಲವರು, ಜನಾರ್ದನ ಪೂಜಾರಿಯವರು ಸಂಸದರಾದ ನಂತರ ದೊಡ್ಡ ದೊಡ್ಡ ಉದ್ಯಮದಲ್ಲಿ ತೊಡಗಿಸಿಕೊಂಡು ಊರಿಗೆ, ಜಿಲ್ಲೆಗೆ, ಪರ ಊರಿನಲ್ಲಿ ಪ್ರಭಾವಿಯಾಗಿದ್ದ ನಮ್ಮ ಸಮಾಜದವರ ಪ್ರಭಾವವನ್ನು ತಗ್ಗಿಸಿ ಮೆರೆದಾಡತೊಡಗಿದ್ದರು. ಇಂತಹ ಶೂದ್ರ ವರ್ಗದ ಜನರು ನಮ್ಮನ್ನು ಆಳಲು ಹೊರಟರೆ ಅದನ್ನು ಸ್ವಾಭಿಮಾನಿಗಳಾದ ನಾವು ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಸೇಂದಿ ತೆಗೆದು, ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದವರು, ಇಂದು ನಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲು ಹೊರಟರೆ ಅವರ ಕೈಕೆಳಗೆ ಬಾಳುವುದಕ್ಕೆ ನಮಗೆ ಸಾಧ್ಯವಿದೆಯೇ ಎನ್ನುವುದನ್ನು ಸ್ವಾಭಿಮಾನಿಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನಾರ್ದನ ಪೂಜಾರಿಯ ನಂತರ ಮತ್ತೊಮ್ಮೆ ಅವರ ಶಿಷ್ಯನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ನಮ್ಮ ಬಂಟ ಸಮಾಜಕ್ಕೆ ಸವಾಲನ್ನು ಎಸೆದಿದೆ. ಈ ಸವಾಲನ್ನು ನಾವು ಸ್ವೀಕರಿಸುವ ಮೂಲಕ ನಮ್ಮ ಸಮಾಜಕ್ಕೆ ಸೇರಿದ ಬ್ರಿಜೇಶ್ ಚೌಟರನ್ನು ಲಕ್ಷ ಲಕ್ಷ ಬಹುಮತದಿಂದ ಗೆಲ್ಲಿಸುವುದಕ್ಕೆ ರಾತ್ರಿ ಹಗಲೆನ್ನದೆ ದುಡಿಯಬೇಕಾಗಿದೆ. ಒಂದು ವೇಳೆ ಶೂದ್ರ ವರ್ಗಕ್ಕೆ ಸೇರಿದವ ಗೆದ್ದು ಬಂದರೆ ಮುಂದಿನ ದಿನದಲ್ಲಿ ಇತರ ಶೂದ್ರ ವರ್ಗಕ್ಕೆ ಸೇರಿದವರು ಗೌಡರು, ಕುಲಾಲ್, ಕೊಟ್ಟಾರಿ, ಗಾಣಿಗ, ಭಂಡಾರಿ, ನಾಯ್ಕ, ಎಸ್ಸಿ-ಎಸ್ಟಿಗಳು ಒಗ್ಗಟ್ಟಾಗಿ ನಮ್ಮನ್ನು ಆಳಲು ಹೊರಟರೆ, ಬೇರೆ ಬೇರೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನಮ್ಮವರನ್ನು ಮೂಲೆಗುಂಪು ಮಾಡಿದರೆ ಅದನ್ನು ನಮಗೆ ಸಹಿಸುವುದಕ್ಕೆ ಸಾಧ್ಯವಿದೆಯೇ? ಊರಿಗೆ ಪಟೇಲರಾಗಿ ವಿವಿಧ ಸ್ಥರಗಳಲ್ಲಿ ಜನಪ್ರತಿನಿಧಿಗಳಾಗಿ ಮೆರೆದಿದ್ದ ನಮ್ಮ ಸಮಾಜ ಇಂತಹ ಸಮಾಜದ ಶೂದ್ರರ ಮುಂದೆ ಕೈಕಟ್ಟಿಕೊಂಡು ನಿಲ್ಲಬೇಕೆ..?"
ಇದನ್ನೂ ಓದಿ: ಕರಾವಳಿ ಕದನ | ಯಾರು ಉತ್ತಮ ಹಿಂದೂ? ಬಿಜೆಪಿಗೆ ʼಧರ್ಮ ಸಂಕಟʼ ತಂದಿಟ್ಟ ಬಿಲ್ಲವರ ʼಜಾತಿ ಪ್ರಜ್ಞೆʼ
"ಒಂದು ಕಾಲದಲ್ಲಿ ಗರಡಿಗಳಿಗೆ, ದೇವಸ್ಥಾನಗಳಿಗೆ ಪ್ರವೇಶವೇ ಇಲ್ಲದ ಇಂತಹ ಶೂದ್ರ ಜಾತಿಯವರು ಜನಾರ್ದನ ಪೂಜಾರಿಗೆ ಅಧಿಕಾರ ಸಿಕ್ಕ ಮೇಲೆ ನಮ್ಮ ಗರಡಿಗಳ ಮೇಲೆ, ನಮ್ಮ ದೇವಸ್ಥಾನಗಳ ಮೇಲೆ ಯಾವ ರೀತಿಯ ಪಾರಮ್ಯ ಮೆರೆದು ದೇವಸ್ಥಾನಗಳಿಗೆ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನುವ ಸತ್ಯವನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ. ಜನಾರ್ದನ ಪೂಜಾರಿ ಗೆದ್ದ ನಂತರದ ಪರಿಸ್ಥಿತಿ ಅವರ ಶಿಷ್ಯ ಗೆದ್ದ ನಂತರ ನಮಗೆ ಬಾರದಿರಲಿ ಎನ್ನುವುದಾದರೆ ನಮ್ಮ ಸಮಾಜದ ಸೈನಿಕ ಬ್ರಿಜೇಶ್ ಚೌಟ ಗೆಲ್ಲಲೇಬೇಕು."
"ಸತ್ಯಜಿತ್ ಸುರತ್ಕಲ್, ಬಿರುವೆರ್ ಕುಡ್ಲದ ಉದಯ ಪೂಜಾರಿ ಬಲ್ಲಾಲ್ ಭಾಗ್ ಇಂತಹವರು ವಿವಿಧ ಸಂಘಟನೆಗಳನ್ನು ಕಟ್ಟಿಕೊಂಡು ನಮ್ಮವರಿಗೆ ಯಾವ ರೀತಿಯಲ್ಲಿ ಮಗ್ಗುಲ ಮುಳ್ಳಾಗಿದ್ದಾರೆ ಎನ್ನುವುದನ್ನು ನಾವು ಮರೆಯಲಾಗುತ್ತದೆಯೇ..?"
"ನಮ್ಮ ಸಮಾಜದ ಒಬ್ಬ ಯುವಕನನ್ನು ಗೆಲ್ಲಿಸುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ನಮ್ಮ ಸಮಾಜದ ಹಿರಿಯರ ಸೂಚನೆಯಂತೆ ಕೆಲಸ ಮಾಡಲಾಗಿದೆ. ನಮ್ಮ ಅಭ್ಯರ್ಥಿಯಾದ ಚೌಟರಿಗೆ ದೊಡ್ಡ ಮೊತ್ತದ ಹಣದ ನೆರವನ್ನು ಕೂಡ ನೀಡಲಾಗಿದೆ. ಇದು ಸಾಲದು. ನಮ್ಮ ಕೃಷಿ ಕಾರ್ಯದಲ್ಲಿ, ನಮ್ಮ ಮನೆಯ ಕೂಲಿ ಕೆಲಸದಲ್ಲಿ, ನಮ್ಮ ಉದ್ಯಮಗಳಲ್ಲಿ, ನಮ್ಮಲ್ಲಿ ಒಕ್ಕಲು ಇರುವವರನ್ನು ನಮ್ಮ ಪ್ರಭಾವವನ್ನು ಬಳಸಿಕೊಂಡು ಚೌಟ ಅವರಿಗೆ ಮತದಾನ ಮಾಡಿಸುವ ದೊಡ್ಡ ಜವಾಬ್ದಾರಿಯನ್ನು ನಮ್ಮ ಸಮಾಜದವರು ನಿರ್ವಹಣೆ ಮಾಡಿ, ಶೂದ್ರನೊಬ್ಬ ನಮ್ಮನ್ನು ಆಳದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ನಿಮ್ಮ ವಾರ್ಡ್, ಗ್ರಾಮ ವ್ಯಾಪ್ತಿಯಲ್ಲಿ ಮತವನ್ನು ದುಡ್ಡು ನೀಡಿ ಖರೀದಿಸುವ ಅವಕಾಶ ಸಿಕ್ಕರೆ, ಮತದಾರರಿಗೆ ಆಮಿಷ ಒಡ್ಡಿಯಾದರೂ ಕಾಂಗ್ರೆಸ್ಸಿಗೆ ಬೀಳುವ ಮತವನ್ನು ಬಿಜೆಪಿಗೆ ಹಾಕಿಸುವ ಕೆಲಸ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿಯನ್ನು ಮಾಡುತ್ತಿದ್ದೇವೆ”
ದೂರು ನೀಡಿದ ಬಿಜೆಪಿ
ʼಬಂಟ ಬ್ರಿಗೇಡ್ ದಕ್ಷಿಣಕನ್ನಡʼದ ಹೆಸರಿನಲ್ಲಿ ಹರಿದಾಡುತ್ತಿರುವ ಈ ಪತ್ರದಲ್ಲಿ, ಉದ್ದೇಶ ಪೂರ್ವಕವಾಗಿ ಜಾತಿ ಜಾತಿಗಳ ನಡುವೆ ವೈಷಮ್ಯ ಮೂಡುವ ಹಾಗೆ ಪ್ರಯತ್ನಿಸಲಾಗಿದೆ. ಅನುಮತಿ ಇಲ್ಲದೆ, ಬಿಜೆಪಿಯ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಭಾವಚಿತ್ರವನ್ನು ಬಳಸಲಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹೊತ್ತಲ್ಲಿ ಇಂತಹ ಬೇಜವಾಬ್ದಾರಿ ಪೋಸ್ಟರ್ ಅನ್ನು ಹರಿ ಬಿಡಲಾಗಿದೆ. ಇದರ ಹಿಂದೆ ಕಾಂಗ್ರೆಸ್ ಪಿತೂರಿ ಇದೆ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಬಗ್ಗೆ, ಬಿಜೆಪಿ ಕಾನೂನು ಪ್ರಕೋಷ್ಠದ ಸಹಸಂಚಾಲಕ ದೇವಿಪ್ರಸಾದ್ ಸಮಾನಿ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿ ಕಾಂಗ್ರೆಸ್ ದುರ್ಲಾಭ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ʼಬಿಲ್ಲವ ಪ್ರಜ್ಞೆʼ ಎಚ್ಚರ | ಈ ಬಾರಿ ʼಕೈʼ ಹಿಡಿಯುವುದೇ ಕರಾವಳಿ ಕ್ಷೇತ್ರ?
ಆದರೆ, ಕಾಂಗ್ರೆಸ್ ಕಾರ್ಯಕರ್ತರು, ತನ್ನ ಜಾತಿ ಬಲದ ಮೇಲೆ ಗೆಲ್ಲುವ ಸಲುವಾಗಿಯೇ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಇಂತಹ ಪೋಸ್ಟರ್ ಹರಿ ಬಿಟ್ಟು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಪ್ರತ್ಯಾರೋಪಿಸಿದ್ದಾರೆ. ʼಪ್ರಕಾಶಕರ ಹೆಸರಿಲ್ಲದೆ ನಕಲಿ ಕರಪತ್ರ ಹಂಚಿದ ಆರೋಪದ ಪ್ರಕರಣ ಈಗಾಗಲೇ ಬಿಜೆಪಿ ಅಭ್ಯರ್ಥಿ ಮೇಲಿದೆ. ಅದನ್ನು ಅವರು ತಮ್ಮ ನಾಮಪತ್ರದಲ್ಲಿಯೂ ಘೋಷಿಸಿಕೊಂಡಿದ್ದಾರೆ. ಆದರೆ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆʼ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ.