‌ಸೌಜನ್ಯಾ ಪ್ರಕರಣ | ಬಿಜೆಪಿಗೆ ಅಡ್ಡಗಾಲಾಗುವುದೇ ಹೋರಾಟಗಾರರ ನೋಟಾ ಅಭಿಯಾನ?
x

‌ಸೌಜನ್ಯಾ ಪ್ರಕರಣ | ಬಿಜೆಪಿಗೆ ಅಡ್ಡಗಾಲಾಗುವುದೇ ಹೋರಾಟಗಾರರ ನೋಟಾ ಅಭಿಯಾನ?

ಒಂದೆಡೆ ಜಿಲ್ಲೆಯಲ್ಲಿ ಬಿಲ್ಲವ ವರ್ಸಸ್ ಬಂಟ ನಡುವಿನ ಪೈಪೋಟಿಯಾಗಿ ಲೋಕಸಭಾ ಕಣ ಮಾರ್ಪಟ್ಟಿದೆ. ಇನ್ನೊಂದೆಡೆ, ಒಕ್ಕಲಿಗ ಹುಡುಗಿಯ ನ್ಯಾಯಕ್ಕಾಗಿ ಹಿಂದುತ್ವದಲ್ಲಿ ಗುರುತಿಸಿಕೊಂಡಿರುವ ಬಂಟ ನಾಯಕರು ನೋಟಾ ಪರ ಅಭಿಯಾನ ಆರಂಭಿಸಿರುವುದು ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.


ದಕ್ಷಿಣಕನ್ನಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. ಸಂಘ ಪರಿವಾರದ ಪ್ರಯೋಗ ಶಾಲೆಯಾಗಿ, ಹಿಂದುತ್ವದ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಯ ಪ್ರಚಾರ ತಂತ್ರಗಳು ಕಳೆಗುಂದಿದ್ದು, ಕೇಸರಿ ಪಾಳೆಯ ತನ್ನ ಹಿಂದಿನ ಕಸುವು ಕಳೆದುಕೊಂಡಿದೆ.

ಹಿಂದುತ್ವಕ್ಕಾಗಿ ಎದೆಗೊಟ್ಟು ಮುಂಚೂಣಿಯಲ್ಲಿ ನಿಲ್ಲುತ್ತಿದ್ದವರೇ ಇದೀಗ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ. ಒಂದೆಡೆ, ಬಿಜೆಪಿಯನ್ನು ದಶಕಗಳಿಂದ ಬೆಂಬಲಿಸಿಕೊಂಡು ಬಂದಿರುವ ಬಿಲ್ಲವರಲ್ಲಿ ಜಾತಿ ಜಾಗೃತ ಪ್ರಜ್ಞೆ ಎಚ್ಚರವಾಗಿದ್ದು, ಬಿಜೆಪಿಯನ್ನು ತಲ್ಲಣಿಸುವಂತೆ ಮಾಡಿದೆ. ಇನ್ನೊಂದೆಡೆ, ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಸೌಜನ್ಯ ಪರ ಅಭಿಯಾನ ಪಕ್ಷವನ್ನು ತತ್ತರಿಸುವಂತೆ ಮಾಡಿದೆ. ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದವರೇ ಸೌಜನ್ಯ ಪರ ಅಭಿಯಾನದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ಪಕ್ಷಗಳ ವಿರುದ್ಧ ನೋಟಾ ಅಭಿಯಾನ ಆರಂಭಿಸಿದ್ದಾರೆ.

ದಶಕದ ಹಿಂದೆ ದಕ್ಷಿಣಕನ್ನಡದ ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದ ವಿದ್ಯಾರ್ಥಿನಿ ಸೌಜನ್ಯಳ ಸಾವಿಗೆ ನ್ಯಾಯ ಸಿಗಬೇಕೆಂದು ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಆಂದೋಲನದ ಸ್ವರೂಪ ಪಡೆದುಕೊಂಡಿದ್ದು, ಸೌಜನ್ಯ ಪರ ಹೋರಾಟಕ್ಕೆ ರಾಜಕೀಯ ಪಕ್ಷಗಳು ಸೂಕ್ತವಾಗಿ ಸ್ಪಂದಿಸದೆ ಇರುವುದರಿಂದ ಹೋರಾಟಗಾರರು ʼನೋಟಾ(ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ಹಾಕದೆ, ತಮಗೆ ಯಾರಿಗೂ ಮತ ಕೊಡಲು ಇಷ್ಟವಿಲ್ಲ ಎಂಬ ಆಯ್ಕೆಗೆ ಮತ ಹಾಕುವುದು)ʼ ಮತ ಚಲಾಯಿಸಲು ಮುಂದಾಗಿದ್ದಾರೆ. ಉಡುಪಿ ಮತ್ತು ದಕ್ಷಿಣಕನ್ನಡದಲ್ಲಿ ಈ ಅಭಿಯಾನ ನಡೆಸಲು ಹೋರಾಟಗಾರರು ಮುಂದಾಗಿದ್ದರೂ, ದಕ್ಷಿಣಕನ್ನಡದಲ್ಲಿ ನೋಟಾ ಅಭಿಯಾನ ತುಸು ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ, ಹೋರಾಟಗಾರರು ಅಭಿಯಾನದ ಪರವಾಗಿ ನಡೆಸುತ್ತಿರುವ ಬೈಕ್‌ ರ್ಯಾಲಿ, ಕಾರ್ಯಕ್ರಮಗಳಿಗೆ ಉತ್ತಮ ಜನಸ್ಪಂದನೆ ದೊರರೆಯುತ್ತಿದೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಹಿಂದೂ ಧರ್ಮ ಚಿಂತಕ ಎಂದು ಗುರುತಿಸಿಕೊಂಡಿರುವ ತಮ್ಮಣ್ಣ ಶೆಟ್ಟಿ ಮೊದಲಾದವರು ನೋಟಾ ಅಭಿಯಾನದ ಮುಂಚೂಣಿಯಲ್ಲಿದ್ದು, ಇವರೆಲ್ಲರೂ ದಶಕಗಳಿಂದ ಕರಾವಳಿಯ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದವರೇ ಆಗಿದ್ದಾರೆ. ಇನ್ನೊಂದೆಡೆ, ಸಂಘಪರಿವಾರದ ಕಾಲಾಳಾಗಿ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದ ಸತ್ಯಜಿತ್‌ ಸುರತ್ಕಲ್‌ ರಂತಹ ಬಿಲ್ಲವ ಸಮುದಾಯದ ನಾಯಕರೂ ಹಿಂದುತ್ವಕ್ಕಿಂತ ಜಾತಿ ಮುಖ್ಯ ಎಂದು ಹೊರಟಿದ್ದು, ಬಿಜೆಪಿ ಈ ಬಾರಿ ಕರಾವಳಿ ಹಿಂದುತ್ವದ ತಳಮಟ್ಟದ ಕಾಲಾಳು ನಾಯಕರ ಬಲವಿಲ್ಲದೆ ಚುನಾವಣೆ ಎದುರಿಸುವ ವ್ಯತಿರಿಕ್ತ ಪರಿಸ್ಥಿತಿ ಬಂದಿದೆ.

ಸೌಜನ್ಯ ಪರ ಹೋರಾಟಗಾರರು ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ತಮ್ಮ ಅಸಮಾಧಾನ ಅಲ್ಲವೆಂದು ಹೇಳಿದರೂ, ನೇರವಾಗಿ ಬಿಜೆಪಿ ಪಕ್ಷದ ಮೇಲೆ ಹೆಚ್ಚಿನ ಅಸಮಾಧಾನವಿದೆ. ಉಡುಪಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಂಸದರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ಎರಡೂ ಜಿಲ್ಲೆಗಳ ಒಟ್ಟು 12 ವಿಧಾನಸಭಾ ಕ್ಷೇತ್ರಗಳಲ್ಲಿ 10 ಮಂದಿ ಬಿಜೆಪಿ ಶಾಸಕರಿದ್ದರೂ, ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಲು ಉತ್ಸಾಹ ತೋರುತ್ತಿಲ್ಲ ಎನ್ನುವುದು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಅದೂ ಅಲ್ಲದೆ, ಸೌಜನ್ಯ ಅತ್ಯಾಚಾರ ಮತ್ತು ಕೊಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬಸ್ಥರ ಕೈವಾಡವಿದೆ ಎಂದು ಸೌಜನ್ಯಾ ಕುಟುಂಬಸ್ಥರು ಮತ್ತು ಹೋರಾಟಗಾರರು ಆರೋಪಿಸುತ್ತಾ ಬಂದಿದ್ದಾರೆ. ಹೀಗಿರುವಾಗ, ವೀರೇಂದ್ರ ಹೆಗ್ಗಡೆ ಅವರನ್ನು ಬಿಜೆಪಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದೂ ಹೋರಾಟಗಾರರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.

ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಬಿಲ್ಲವರ ಮತ ಬಿಲ್ಲವರಿಗೆ ಚಲಾಯಿಸಲು ಈಗಾಗಲೇ ಹಲವು ಬಿಲ್ಲವ ಸಂಘಟನೆಗಳು ಕರೆ ನೀಡಿವೆ. ದಕ್ಷಿಣಕನ್ನಡದಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್‌ ರಾಮಯ್ಯರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರೆ, ಬಿಜೆಪಿ ಬಂಟ ಸಮುದಾಯದ ಬ್ರಿಜೇಶ್‌ ಚೌಟ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸೌಜನ್ಯಳ ಪರವಾದ ಹೋರಾಟಕ್ಕೆ ಬಂಟ ಸಮುದಾಯದ ತಮ್ಮಣ್ಣ ಶೆಟ್ಟಿ, ಮಹೇಶ್‌ ಶೆಟ್ಟಿ ಮೊದಲಾದವರು ನಾಯಕತ್ವ ವಹಿಸಿಕೊಂಡಿದ್ದಾರೆ. ಹಿಂದುತ್ವ ಸಂಘಟನೆಗಳಲ್ಲಿ ಗುರುತಿಸಿಕೊಂಡ ಇವರಿಗೆ ತಮ್ಮದೇ ಆದ ಬೆಂಬಲಿಗ ಯುವಕರ ಪಡೆಯೂ ಇದೆ. ಅದರಲ್ಲಿ ಬಂಟರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಒಂದೆಡೆ, ಬಿಲ್ಲವ ಮತಗಳು ಕಾಂಗ್ರೆಸ್‌ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಲತೊಡಗಿದ್ದರೆ, ಇನ್ನೊಂದೆಡೆ ಸೌಜನ್ಯ ಪ್ರಕರಣದಲ್ಲಿ ಹೋರಾಡುತ್ತಿರುವ ಒಕ್ಕಲಿಗ-ಬಂಟ ಯುವಕರ ಮತಗಳು ತಟಸ್ಥಗೊಳ್ಳುವ ಆತಂಕದಲ್ಲಿ ಬಿಜೆಪಿ ಇದೆ. ಕರಾವಳಿಯಲ್ಲಿ ಇವೆಲ್ಲವೂ ಬಿಜೆಪಿಯ ಸಾಂಪ್ರದಾಯಿಕ ಮತಗಳಾಗಿರುವುದರಿಂದ ನೋಟಾಗೆ ಹೆಚ್ಚು ಮತಗಳು ಬಂದರೆ ಅಂತಿಮವಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ವರವಾಗಲಿದೆ.

ಹೆಗ್ಗಡೆ ಅವರ ಪ್ರಭಾವಕ್ಕೆ ಒಳಗಾಗಿ ಸ್ಥಳೀಯ ಬಿಜೆಪಿ ನಾಯಕರು ಸೌಜನ್ಯ ಪ್ರಕರಣವನ್ನು ಮುಚ್ಚಿಹಾಕಲು ಸಹಾಯ ಮಾಡುತ್ತಿದ್ದಾರೆ. ದಾಖಲೆ ಪ್ರಮಾಣದಲ್ಲಿ ನೋಟಾ ಗೆ ಮತ ಚಲಾಯಿಸಿ, ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳ ಬಗ್ಗೆ ಇಲ್ಲಿನ ಜನಸಾಮಾನ್ಯರಿಗೆ ಇರುವ ಅಸಮಾಧಾನವನ್ನು ತೋರಿಸಲಿದ್ದೇವೆ. ಈ ದಾಖಲೆಯನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹೋಗಬೇಕೆಂದುಕೊಂಡಿದ್ದೇವೆ ಎಂದು ಹೋರಾಟದಲ್ಲಿ ತೊಡಗಿಸಿಕೊಂಡಿರುವ ಗಿರೀಶ್‌ ಮಟ್ಟಣ್ಣನವರ್‌ ಹೇಳಿದ್ದಾರೆ.

ಸೌಜನ್ಯ ಅತ್ಯಾಚಾರ ಪ್ರಕರಣದ ಆರೋಪಿ ಸಂತೋಷ್ ರಾವ್ ವಿರುದ್ದ ಸಿಬಿಐ ಅಧಿಕಾರಿಗಳು ಆರೋಪ ಸಾಬೀತುಪಡಿಸಲು ವಿಫಲಗೊಂಡ ಬಳಿಕ ಬೆಂಗಳೂರು ಸಿಬಿಐ ಕೋರ್ಟ್, ಸಂತೋಷ್‌ ರಾವ್‌ನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಸಂತೋಷ್‌ ರಾವ್‌ ನಿರ್ದೋಷಿ, ತಪ್ಪಿತಸ್ಥರು ಹಣ ಮತ್ತು ಅಧಿಕಾರದ ಪ್ರಭಾವದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಸೌಜನ್ಯ ಕುಟುಂಬ ಈ ಹಿಂದಿನಿಂದಲೂ ಹೇಳಿಕೊಂಡು ಬಂದಿತ್ತು. ಸಿಬಿಐ ಕೋರ್ಟ್‌ ಸಂತೋಷ್‌ ರಾವ್‌ ನಿರ್ದೋಷಿ ಎಂದು ಕಳೆದ ನವೆಂಬರ್‌ ನಲ್ಲಿ ತೀರ್ಪು ನೀಡಿದ ಬಳಿಕ ಸೌಜನ್ಯ ಪರ ಹೋರಾಟಗಾರರು ತಮ್ಮ ಆಂದೋಲನವನ್ನು ತೀವ್ರಗೊಳಿಸಿದ್ದರು. ಸೌಜನ್ಯ ಪರ ಪ್ರತಿಭಟನೆ ವೇಳೆ, ಕಣ್ಣೀರು ಸುರಿಸಿ ಜನರೆದುರು ಸೆರಗೊಡ್ಡಿ ಸೌಜನ್ಯ ತಾಯಿ ʼನ್ಯಾಯಭಿಕ್ಷೆʼ ಬೇಡಿದ ರೀತಿಯು ಕರಾವಳಿಗರ ಕಣ್ಣಂಚನ್ನೂ ಒದ್ದೆಯಾಗಿಸಿತ್ತು. ನಂತರ ಸೌಜನ್ಯ ಪರ ಅಭಿಯಾನಕ್ಕೆ ಬೆಂಬಲ ತೀವ್ರವಾಗಿತ್ತು.

ನೋಟಾ ಅಭಿಯಾನ ಕುರಿತು ʼದಿ ಫೆಡೆರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಮಹೇಶ್‌ ಶೆಟ್ಟಿ ತಿಮರೋಡಿ, “ಇಲ್ಲಿನ ಎಲ್ಲಾ ರಾಜಕಾರಣಿಗಳಿಗಿಂತಲೂ ಆರೋಪಿಗಳನ್ನು ರಕ್ಷಿಸುತ್ತಿರುವವರು ಹೆಚ್ಚು ಪ್ರಭಾವಿ. ಅಷ್ಟು ಇಲ್ಲಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಇದನ್ನು ನಾವೇ ಬದಲಾಯಿಸಬೇಕಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ದಮ್ಮಿಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌, ಬಿಜೆಪಿಯಾದಿ ಎಲ್ಲಾ ರಾಜಕಾರಣಿಗಳ ವಿರುದ್ಧ ಹರಿಹಾಯ್ದ ಶೆಟ್ಟಿ, "ಹಿಂದುತ್ವ ಎಂದು ನಾವು ನಾಲ್ಕು ದಶಕಗಳ ಕಾಲ ಕಟ್ಟಿದ ಪಕ್ಷದಲ್ಲಿ ಇವತ್ತು ಹಿಂದುತ್ವ ಇಲ್ಲ. ಅಧಿಕಾರ, ಹಣ, ಬಲ ಇರುವವರು ಮಾಡಿದ ಎಲ್ಲಾ ಅನ್ಯಾಯಗಳಿಗೂ ಇಲ್ಲಿನ ರಾಜಕಾರಣಿಗಳು ಸಾಥ್‌ ನೀಡುತ್ತಾರೆ. ಇಂತಹವರು ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ನಮ್ಮಲ್ಲಿ ಇನ್ನೂ ಹಿಂದುತ್ವದ, ನ್ಯಾಯದ, ಹೋರಾಟದ ಕಿಚ್ಚು ಇದೆ. ಇದೇ ಕಿಚ್ಚಿರುವ ತುಳುನಾಡಿನ ಜನತೆ ನಮ್ಮ ಬೆನ್ನ ಹಿಂದಿದ್ದಾರೆ. ನೇಹಾ ಕೊಲೆಯಲ್ಲಿ ಮುಸ್ಲಿಂ ಇದ್ದಾನೆಂದು ಬಿಜೆಪಿಗರು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಆದರೆ, ಧರ್ಮಸ್ಥಳದಲ್ಲೇ ಸೌಜನ್ಯ, ವೇದಾವತಿ, ಸೇರಿದಂತೆ ನೂರಾರು ಹೆಣ್ಣುಮಕ್ಕಳ ಹತ್ಯೆಯಾಗಿದ್ದಾರೆ. ಆ ಬಗ್ಗೆ ಬಿಜೆಪಿ ನಮ್ಮೊಂದಿಗೆ ಸೇರಿ ಪ್ರಶ್ನಿಸುತ್ತಿಲ್ಲ ಯಾಕೆ? ನಾನು ದುಡ್ಡು ಪಡೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ಸುಳ್ಳಾರೋಪ ಮಾಡುತ್ತಿದ್ದಾರೆ. ನನಗೆ ಅಕ್ರಮ ಹಣ ಬರುವುದಾದರೆ, ನಿಮ್ಮಲ್ಲೇ ಐಟಿ, ಇಡಿ, ಸಿಬಿಐ ಇದೆಯಲ್ಲಾ? ನಾವೇನು ಲೆಕ್ಕ? ಕೇಜ್ರಿವಾಲ್‌ ರನ್ನು ಬಂಧಿಸುವವರಿಗೆ ನಾವು ಯಾವ ಲೆಕ್ಕ? ತಿಮರೋಡಿಯ ವಿರುದ್ಧ ತನಿಖೆ ನಡೆಸಲಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಸೌಜನ್ಯ ಪರ ಹೋರಾಟಗಾರರ ವಿರುದ್ಧ ಬಹಿರಂಗವಾಗಿ ಮಾತನಾಡಲು ಹಿಂಜರಿದ ಹಿರಿಯ ಸಂಘಪರಿವಾರ ನಾಯಕರೊಬ್ಬರು, ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿ, "ಹಿಂದುತ್ವದ ಹೋರಾಟಗಾರರಲ್ಲಿನ ಬಿರುಕಿನ ಬಗ್ಗೆ ಆರ್‌ ಎಸ್‌ ಎಸ್‌ ವಲಯದಲ್ಲಿಯೂ ಆತಂಕ ಶುರುವಾಗಿದೆ ಎಂದಿದ್ದಾರೆ. ಅದಾಗ್ಯೂ, ನರೇಂದ್ರ ಮೋದಿ ನಾಮಬಲ ಮತ್ತು ಕಾಂಗ್ರೆಸ್‌ ವಿರೋಧಿ ಆಕ್ರೋಶಗಳು ಕೊನೆ ಕ್ಷಣದಲ್ಲಿ ಬದಲಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದಿನ ಬಾರಿಯಂತೆ ಲಕ್ಷಾಂತರ ಮುನ್ನಡೆಯಲ್ಲದಿದ್ದರೂ ಕೆಲವು ಸಾವಿರ ಮತಗಳಲ್ಲಾದರೂ ಪಕ್ಷ ಗೆಲ್ಲಬಹುದು" ಎಂದು ಅವರು ಅಂದಾಜಿಸಿದ್ದಾರೆ.

Read More
Next Story