ನಮ್ಮ ವರದಿ ಜಾರಿಯಾದರೆ ಈಗಲೂ ಪಶ್ಚಿಮಘಟ್ಟದ ಉಳಿವು ಸಾಧ್ಯ: ಮಾಧವ್ ಗಾಡ್ಗೀಳ್

ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ನಾವು ನೀಡಿದ್ದ ವರದಿಯನ್ನು ಅಧ್ಯಯನ ಮಾಡದೇ ತಪ್ಪು ಅಭಿಪ್ರಾಯಗಳನ್ನು ಜನರಲ್ಲಿ ತುಂಬಿದ್ದರಿಂದ ಹಿನ್ನಡೆಯಾಯಿತು. ಈಗಲೂ ಆ ವರದಿಯನ್ನು ಜಾರಿಮಾಡಿದರೆ ಪಶ್ಚಿಮಘಟ್ಟದ ಪರಿಸರ ಮತ್ತು ಜನಜೀವನಕ್ಕೆ ರಕ್ಷಣೆ ಸಿಗಲಿದೆ ಎಂದು ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಹೇಳಿದರು.

Update: 2024-08-10 13:19 GMT

ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ನಾವು ನೀಡಿದ್ದ ವರದಿಯನ್ನು ಅಧ್ಯಯನ ಮಾಡದೇ ತಪ್ಪು ಅಭಿಪ್ರಾಯಗಳನ್ನು ಜನರಲ್ಲಿ ತುಂಬಿದ್ದರಿಂದ ಹಿನ್ನಡೆಯಾಯಿತು. ಈಗಲೂ ಆ ವರದಿಯನ್ನು ಜಾರಿಮಾಡಿದರೆ ಪಶ್ಚಿಮಘಟ್ಟದ ಪರಿಸರ ಮತ್ತು ಜನಜೀವನಕ್ಕೆ ರಕ್ಷಣೆ ಸಿಗಲಿದೆ ಎಂದು ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಹೇಳಿದರು.

ಬೆಂಗಳೂರಿನಲ್ಲಿ ಶನಿವಾರ ʼಪರಿಸರಕ್ಕಾಗಿ ನಾವುʼ ಸಂಘಟನೆ ಏರ್ಪಡಿಸಿದ್ದ ʼಗಾಡ್ಗೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟು ಬಲಿ ಬೇಕು?ʼ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಶ್ಚಿಮಘಟ್ಟದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಯೋಜನೆಗಳನ್ನು ನಿಷೇಧಿಸುವಂತೆ ನಾವು ವರದಿ ನೀಡಿರಲಿಲ್ಲ. ಘಟ್ಟ ಪ್ರದೇಶವನ್ನು ಸಾಮಾನ್ಯ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಮೂರು ವಲಯಗಳಾಗಿ ನಾವು ಗುರುತಿಸಿದ್ದೆವು. ಸಾಮಾನ್ಯ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವನ್ನು ಸೂಚಿಸಿರಲಿಲ್ಲ. ಕೇವಲ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಲಯದಲ್ಲಿ ಮಾತ್ರ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬಾರದು ಎಂದು ಸಲಹೆ ನೀಡಿದ್ದೆವು. ಆದರೆ, ಆ ವರದಿಯನ್ನು ಓದದೇ ಕೇವಲ ಊಹಾಪೋಹ ಮತ್ತು ತಪ್ಪುಗ್ರಹಿಕೆಗಳನ್ನು ಹರಡಿ ಅದನ್ನು ಬದಿಗೆ ಸರಿಸಲಾಯಿತು. ಜನರಲ್ಲಿ ಭಯ ಬಿತ್ತಲಾಯಿತು ಎಂದು ಅವರು ವಿವರಿಸಿದರು.

ಐದು ವರ್ಷಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಪ್ರವಾಹದಲ್ಲಿ ಟೀ ತೋಟಗಳ ಬಡ ಕಾರ್ಮಿಕರು ಜೀವ ಕಳೆದುಕೊಂಡರು. ಹಿಮಾಲಯ, ಮಹಾರಾಷ್ಟ್ರ, ಪಶ್ಚಿಮಘಟ್ಟ ಸೇರಿದಂತೆ ಎಲ್ಲೇ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ಬಡವರೇ ಹೆಚ್ಚು ಜೀವ ಕಳೆದುಕೊಳ್ಳುವುದು. ಆದರೆ, ವಯನಾಡಿನಲ್ಲಿ ಆದ ಪ್ರಮಾಣದಲ್ಲಿ ಈ ಹಿಂದೆ ಎಲ್ಲೂ ಅನಾಹುತ ಸಂಭವಿಸಿರಲಿಲ್ಲ. ಈಗಿನ ಅಭಿವೃದ್ಧಿ ಚಿಂತನಾ ಕ್ರಮದಲ್ಲೇ ಲೋಪ ಇದೆ. ಪರಿಸರ ಪೂರಕವಾಗಿ ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳದೆ ಪಶ್ಚಿಮಘಟ್ಟ ಪರಿಸರ ಮತ್ತು ಜನಜೀವನಕ್ಕೆ ನೆಮ್ಮದಿ ಇರದು ಎಂದೂ ಅವರು ಎಚ್ಚರಿಕೆ ನೀಡಿದರು.

ಮೇಕೆದಾಟು ಯೋಜನೆ ಕೈಬಿಡಿ

ಸಂವಾದದಲ್ಲಿ ಮಾತನಾಡಿದ ಪರಿಸರ ವಿಜ್ಞಾನಿ ಟಿ ವಿ ರಾಮಚಂದ್ರ, ಬೆಂಗಳೂರು ನಗರಕ್ಕೆ ನೀರು ತರಲು ಐದು ಸಾವಿರ ಹೆಕ್ಟೇರ್ ಕಾಡು ನಾಶ ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟುವುದು ಅನಾಹುತಕಾರಿ. ಇದು ನೂರು ಟಿಎಂಸಿ ನೀರು ಇಂಗಿಸುವ ಕಾಡು ಮುಳುಗಿಸಿ 65 ಟಿಎಂಸಿ ನೀರು ತರುವ ಮೂರ್ಖತನ ಎಂದು ಹೇಳಿದರು.

ಬೆಂಗಳೂರಿಗೆ ವರ್ಷಕ್ಕೆ 18 ಟಿಎಂಸಿ ಅಡಿ ನೀರು ಬೇಕಿದೆ. ಬೆಂಗಳೂರಿನಲ್ಲಿ ವಾರ್ಷಿಕ ಬೀಳುವ ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ನೀರು ಪಡೆಯಬಹುದು. ಮತ್ತು ಅದೇ ನೀರನ್ನು ಮರು ಬಳಕೆ ಮಾಡುವ ಮೂಲಕ ಇಡೀ ಬೆಂಗಳೂರಿನ ನೀರಿನ ಅಗತ್ಯವನ್ನೇ ಪೂರೈಕೆ ಮಾಡಬಹುದು. ಅದಕ್ಕಾಗಿ ಪರಿಸರಕ್ಕೆ ತೀರಾ ಮಾರಕವಾಗಿ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತಿರುವುದು ಅನಾಹುತಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ಸಂವಾದ ಸಭೆಯಲ್ಲಿ ಮಂಡಿಸಲಾದ ಹಕ್ಕೊತ್ತಾಯಗಳು

• ಮಾಧವ್ ಗಾಡ್ಗೀಳ್ ಅವರು ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ನೀಡಿರುವ ವರದಿಯ ಕುರಿತ ತಪ್ಪುಗ್ರಹಿಕೆ ಮತ್ತು ವದಂತಿಗಳನ್ನು ಹೋಗಲಾಡಿಸಲು ವರದಿಯ ಸಂಕ್ಷಿಪ್ತ ಸರಳ ಅನುವಾದ ಮಾಡಬೇಕು. ಅದಕ್ಕಾಗಿ ಒಂದು ಸಮಿತಿ ರಚಿಸಬೇಕು

• ಘಟ್ಟ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸೌರಶಕ್ತಿ ಬಳಕೆ ಮತ್ತು ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಬೇಕು

• ಹೊರ ರಾಜ್ಯ ವಲಸಿಗರ ನಿಯಂತ್ರಣಕ್ಕೆ ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯನ್ನು ಪಶ್ಚಿಮಘಟ್ಟದಲ್ಲಿಯೂ ಜಾರಿಗೆ ತರಬೇಕು

• ಪಂಜಾಬ್ನಲ್ಲಿ ಜಾರಿಯಲ್ಲಿರುವ ಮರ ಕಡಿಯದೇ ಉಳಿಸುವವರಿಗೆ ಕಾರ್ಬನ್ ಕ್ರೆಡಿಟ್ ನೀಡುವ ಪ್ರೋತ್ಸಾಹಧನ ಯೋಜನೆಯನ್ನು ಪಶ್ಚಿಮಘಟ್ಟ ಪ್ರದೇಶದಲ್ಲೂ ಜಾರಿಗೆ ತರಬೇಕು

• ಕರಾವಳಿ ನಿಯಂತ್ರಿತ ವಲಯ(ಸಿಆರ್ಝಡ್) ಮಾದರಿಯಲ್ಲಿ ಪಶ್ಚಿಮಘಟ್ಟದ ನದಿಗಳ ತಟಗಳಿಗೂ ನಿಯಂತ್ರಣ ವಲಯ ಗುರುತು ಮಾಡಿ ಪರಿಸರ ವಿರೋಧಿ ಚಟುವಟಿಕೆ ನಿಷೇಧಿಸಬೇಕು

• ಶೇ.21ರಷ್ಟು ಇರುವ ರಾಜ್ಯದ ಅರಣ್ಯ ಪ್ರದೇಶದ ಪ್ರಮಾಣ ಶೇ.33ಕ್ಕೆ ಏರಿಕೆಯಾಗುವವರೆಗೆ ಪಶ್ಚಿಮಘಟ್ಟ ವಲಯ ಅರಣ್ಯದಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು

• ಪಶ್ಚಿಮಘಟ್ಟದಲ್ಲಿ ಲಂಟಾನ, ಯುಪಟೋರಿಯಂ, ಪಾರ್ಥೇನಿಯಂ ಮತ್ತು ಜಲಕಳೆಗಳನ್ನು ನಿಯಂತ್ರಿಸಬೇಕು

• ಕೊಳವೆ ಬಾವಿಗಳ ಅಗತ್ಯವೇ ಇಲ್ಲದಷ್ಟು ವ್ಯಾಪಕ ಮಳೆ ನೀರು ಇಂಗಿಸಬೇಕು

Tags:    

Similar News