ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಬಳಿ ಎಸ್ಐಟಿ ಶೋಧ; ಜಿಪಿಆರ್ ತಂತ್ರಜ್ಞಾನದ ಕೊರತೆಯಿಂದ ತನಿಖೆಗೆ ಹಿನ್ನಡೆ?

ಎಸ್ಐಟಿ ತಂಡದ ಸೆಕೆಂಡ್-ಇನ್-ಕಮಾಂಡ್, ಐಪಿಎಸ್ ಅಧಿಕಾರಿ ಅನುಚೇತ್ ಅವರ ನೇತೃತ್ವದಲ್ಲಿ, ಶನಿವಾರ ತನಿಖಾ ತಂಡವು ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಪಕ್ಕದಲ್ಲಿ ಸಾಕ್ಷಿ ತೋರಿಸಿದ ಸ್ಥಳದಲ್ಲಿ ಅಗೆತದ ಕಾರ್ಯ ಆರಂಭಿಸಿದೆ.;

Update: 2025-08-09 10:15 GMT

ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಸರಣಿ ಅಸಹಜ ಸಾವು ಮತ್ತು ಸಾಮೂಹಿಕ ಸಮಾಧಿ ಆರೋಪಗಳ ತನಿಖೆಯು 13ನೇ ದಿನಕ್ಕೆ ಕಾಲಿಟ್ಟಿದ್ದು, ವಿಶೇಷ ತನಿಖಾ ತಂಡ (SIT) ಶನಿವಾರ ತನ್ನ ಶೋಧ ಕಾರ್ಯವನ್ನು ತೀವ್ರಗೊಳಿಸಿದೆ. ಪ್ರಕರಣದ ಪ್ರಮುಖ ಸಾಕ್ಷಿ 'ಅನಾಮಿಕ ಭೀಮ' ತೋರಿಸಿದ ಹೊಸ ಸ್ಥಳವಾದ ಬಾಹುಬಲಿ ಬೆಟ್ಟದ ಬಳಿ ಉತ್ಖನನಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಭೂಗರ್ಭದಲ್ಲಿರುವ ಅವಶೇಷಗಳನ್ನು ಪತ್ತೆಹಚ್ಚಲು ಅತ್ಯಗತ್ಯವಾಗಿರುವ ಭೂ-ಭೇದಕ ರಾಡಾರ್ (GPR) ವ್ಯವಸ್ಥೆಯ ಲಭ್ಯತೆಯ ಕೊರತೆಯಿಂದಾಗಿ ತನಿಖೆಯು ಸವಾಲುಗಳನ್ನು ಎದುರಿಸುತ್ತಿದೆ.

ಎಸ್ಐಟಿ ತಂಡದ ಸೆಕೆಂಡ್-ಇನ್-ಕಮಾಂಡ್, ಐಪಿಎಸ್ ಅಧಿಕಾರಿ ಅನುಚೇತ್ ಅವರ ನೇತೃತ್ವದಲ್ಲಿ, ಶನಿವಾರ ತನಿಖಾ ತಂಡವು ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಪಕ್ಕದಲ್ಲಿ ಸಾಕ್ಷಿ ತೋರಿಸಿದ ಸ್ಥಳದಲ್ಲಿ ಅಗೆತದ ಕಾರ್ಯ ಆರಂಭಿಸಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಸಾಕ್ಷಿಯು ಈವರೆಗೆ ಒಟ್ಟು 15 ಸ್ಥಳಗಳನ್ನು ಗುರುತಿಸಿದ್ದು, ಈ ಪೈಕಿ 14 ಕಡೆ ಶೋಧ ಕಾರ್ಯ ಪೂರ್ಣಗೊಂಡಿದೆ. ಈವರೆಗೆ ಎರಡು ಸ್ಥಳಗಳಲ್ಲಿ ಮಾತ್ರ ಮಾನವ ಅವಶೇಷಗಳು ಪತ್ತೆಯಾಗಿವೆ. ಸಾಕ್ಷಿ ಮೊದಲ ದಿನವೇ ಗುರುತಿಸಿದ್ದ ನೇತ್ರಾವತಿ ಸ್ನಾನಘಟ್ಟದ ಬಳಿಯ 13ನೇ ಪಾಯಿಂಟ್​ನಲ್ಲಿ ಇನ್ನಷ್ಟೇ ಶೋಧ ಕಾರ್ಯ ನಡೆಯಬೇಕಿದೆ.

ಜಿಪಿಆರ್ ತಂತ್ರಜ್ಞಾನದ ಗೊಂದಲ

ಶೋಧ ಕಾರ್ಯವನ್ನು ವೈಜ್ಞಾನಿಕವಾಗಿ ನಡೆಸಲು ಜಿಪಿಆರ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಎಸ್ಐಟಿ ಮುಂದಾಗಿತ್ತು. ಆದರೆ ಈ ವ್ಯವಸ್ಥೆ ಲಭ್ಯವಾಗುವುದು ವಿಳಂಬವಾಗುವ ಸಾಧ್ಯತೆಯಿದೆ. ಈ ಬಗ್ಗೆ ಮಂಗಳೂರಿನ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI) ಕಚೇರಿ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, "ನಮ್ಮಲ್ಲಿರುವ ಉಪಕರಣವು ಕಲ್ಲು ಮತ್ತು ಇತರ ಗಟ್ಟಿಯಾದ ವಸ್ತುಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಮಾನವ ಅಥವಾ ಪ್ರಾಣಿಗಳ ಅಸ್ಥಿಪಂಜರವನ್ನು ಪತ್ತೆ ಮಾಡುವುದು ಕಷ್ಟಸಾಧ್ಯ," ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ತಾಂತ್ರಿಕ ಹಿನ್ನಡೆಯಿಂದಾಗಿ, ಜಿಪಿಆರ್ ಬರುವವರೆಗೆ ಕಾಯದೆ, ಸಾಕ್ಷಿಯು ಗುರುತಿಸಿರುವ ಉಳಿದ 9 ಸ್ಥಳಗಳನ್ನು ಗುರುತು ಹಾಕುವ ಕಾರ್ಯವನ್ನು ಪೂರ್ಣಗೊಳಿಸಲು ಎಸ್ಐಟಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಪೊಲೀಸ್ ಠಾಣೆಯ ಸ್ಥಾನಮಾನ ಪಡೆದಿರುವ ಎಸ್ಐಟಿ, ತನಿಖೆಯನ್ನು ಚುರುಕುಗೊಳಿಸಿದ್ದು, ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕುವತ್ತ ಹೆಚ್ಚಿನ ಗಮನ ಹರಿಸಿದೆ.

Tags:    

Similar News