ದೇಗುಲವನ್ನೇ ಕೆಡವಿದಷ್ಟು ನೋವಾಗಿದೆ; ವಿಷ್ಣು ಸ್ಮಾರಕ ಧ್ವಂಸಕ್ಕೆ ಕಿಚ್ಚ ಸುದೀಪ್ ಬೇಸರ
ಆದರೆ, ಸ್ಮಾರಕವನ್ನು ಉಳಿಸಿಕೊಳ್ಳಲು ನಾವು ಈ ಹಿಂದೆ ಸರ್ಕಾರದ ಮೂಲಕ, ಮಂತ್ರಿಗಳ ಮೂಲಕ ಸಾಕಷ್ಟು ಹೋರಾಟ ಮಾಡಿದ್ದೆವು ಎಂದು ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.;
ಕಿಚ್ಚ ಸುದೀಪ್
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ 'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮಗೊಳಿಸಿರುವುದಕ್ಕೆ ನಟ ಕಿಚ್ಚ ಸುದೀಪ್ ಅವರು ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾವು ವರ್ಷಾನುಗಟ್ಟಲೆ ನಂಬಿ, ಪೂಜಿಸುತ್ತಿದ್ದ ದೇವರ ದೇವಸ್ಥಾನವನ್ನೇ ಒಡೆದು ಹಾಕಿದಷ್ಟು ಸಂಕಟ ನನಗಾಗಿದೆ" ಎಂದು ತಮ್ಮ ಭಾವನಾತ್ಮಕ ಪತ್ರದಲ್ಲಿ ಬರೆದುಕೊಂಡಿರುವ ಅವರು, ಸ್ಮಾರಕವನ್ನು ಮರುಸ್ಥಾಪಿಸಲು ತಾವೇ ಮುಂದೆ ನಿಲ್ಲುವುದಾಗಿ ಘೋಷಿಸಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ.
ಶನಿವಾರ ತಮ್ಮ 'ಎಕ್ಸ್' ಖಾತೆಯಲ್ಲಿ ಸುದೀರ್ಘ ಪತ್ರ ಬರೆದಿರುವ ಸುದೀಪ್, "ಇದು ಹೈಕೋರ್ಟ್ ಆದೇಶ ಎಂದು ಹೇಳುತ್ತಾರೆ. ಆದರೆ, ಸ್ಮಾರಕವನ್ನು ಉಳಿಸಿಕೊಳ್ಳಲು ನಾವು ಈ ಹಿಂದೆ ಸರ್ಕಾರದ ಮೂಲಕ, ಮಂತ್ರಿಗಳ ಮೂಲಕ ಸಾಕಷ್ಟು ಹೋರಾಟ ಮಾಡಿದ್ದೆವು. ಅದಕ್ಕೆ ಬೇಕಾದ ಹಣಕಾಸು ಅಥವಾ ಇನ್ನಿತರ ಯಾವುದೇ ನೆರವಿಗೂ ನಾವು ಸಿದ್ಧರಿದ್ದೇವೆ ಎಂದು ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ಹರಿಸಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಯಿತೋ ತಿಳಿದಿಲ್ಲ," ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ…
— Kichcha Sudeepa (@KicchaSudeep) August 9, 2025
"ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ ಈ ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತೇ? ಬೆಂಗಳೂರಿನಂತಹ ರಾಜಧಾನಿಯಲ್ಲಿ ವಿಷ್ಣುವರ್ಧನ್ ಅವರಂತಹ ಮೇರು ನಟನಿಗೆ ಒಂದು ಅರ್ಧ ಎಕರೆ ಜಾಗವನ್ನು ಸ್ಮಾರಕಕ್ಕಾಗಿ ನೀಡಲು ಸಾಧ್ಯವಾಗಲಿಲ್ಲ ಎಂದರೆ, ಇದು ಅತ್ಯಂತ ಖಂಡನೀಯ ವಿಷಯ. ಇದೇ ಸ್ಥಳದಲ್ಲಿದ್ದ ಹಿರಿಯ ನಟ ಬಾಲಕೃಷ್ಣ ಅವರ ಸಮಾಧಿಯನ್ನೂ ಒಡೆದು ಹಾಕಲಾಗಿದೆ ಎಂಬುದು ತಿಳಿಯಿತು. ಇದು ಅಭಿಮಾನಕ್ಕೆ ಮತ್ತು ಪ್ರೀತಿಗೆ ಮಾಡುವ ದ್ರೋಹ," ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
"ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ. ನಮಗೆ ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ಸ್ಥಳ ಬೇಕು. ಆ ಭೂಮಿಯನ್ನು ಖರೀದಿ ಮಾಡಿರುವ ವ್ಯಕ್ತಿ ಅಥವಾ ಸಂಸ್ಥೆಯ ಮನವೊಲಿಸಿ, ಸ್ಮಾರಕವಿದ್ದ ಅಷ್ಟು ಜಾಗವನ್ನಾದರೂ ನಮಗೆ ಉಳಿಸಿಕೊಡಲು ನಾನು ಮನವಿ ಮಾಡಲು ಸಿದ್ಧನಿದ್ದೇನೆ. ಅದಕ್ಕೆ ಬೇಕಾದ ಹಣಕಾಸನ್ನು ನಾನು ಮತ್ತು ನನ್ನಂತಹ ಲಕ್ಷಾಂತರ ಅಭಿಮಾನಿಗಳು ಸೇರಿ ಕೊಡುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಸ್ಮಾರಕವಾಗಿ ಮರುಸ್ಥಾಪಿಸಲು ಮುಂದಾಗುತ್ತೇನೆ, ಅದಕ್ಕೊಂದು ಅವಕಾಶ ಮಾಡಿಕೊಡಿ," ಎಂದು ಸರ್ಕಾರ, ನ್ಯಾಯಾಲಯ ಮತ್ತು ಭೂಮಿಯ ಹೊಸ ಮಾಲೀಕರಲ್ಲಿ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.