Part-3| ಕಿರುಬಂದರುಗಳ ಮೂಲಕ ಅದಿರು ರಫ್ತು: ಮತ್ತೆ ಬಳ್ಳಾರಿ ʼಗಣಿ ಮಾಫಿಯಾʼ ಆರಂಭ?
ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರನ್ನು ರಫ್ತು ಮಾಡಲು ಮತ್ತೆ ಅನುಮತಿ ನೀಡುವ ನಿರ್ಧಾರವು ಮತ್ತೊಮ್ಮೆ ಅಕ್ರಮ ಗಣಿಗಾರಿಕೆಗೆ ಪರೋಕ್ಷವಾಗಿ ಹಸಿರು ನಿಶಾನೆ ತೋರಿದಂತಾಗಲಿದೆ ಎಂಬ ಆತಂಕ ಮೂಡಿದೆ.
ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಗರಣದ ಕರಾಳ ಅಧ್ಯಾಯವನ್ನು ಗಮನಿಸಿದಾಗ ಬಳ್ಳಾರಿಯ ಕೆಂಪು ಮಣ್ಣಿನಷ್ಟೇ ಪ್ರಾಮುಖ್ಯತೆಯನ್ನು ಕರಾವಳಿಯ ಕಿರು ಬಂದರುಗಳು ಪಡೆದುಕೊಳ್ಳುತ್ತವೆ. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಹೆಸರಾಗಿದ್ದ ಬಳ್ಳಾರಿ ಜಿಲ್ಲೆಯ ನೆಲ, 2000ರ ದಶಕದ ಮಧ್ಯಭಾಗದಲ್ಲಿ "ಅಕ್ರಮ ಗಣಿಗಾರಿಕೆಯ ರಾಜಧಾನಿ" ಎಂಬ ಕುಖ್ಯಾತಿಗೆ ಒಳಗಾಯಿತು. ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಪರಿಸರ ನಾಶ, ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತಕ್ಕೆ ಗಣಿನಾಡು ಸಾಕ್ಷಿಯಾಯಿತು. ಇದೀಗ ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರನ್ನು ರಫ್ತು ಮಾಡಲು ಮತ್ತೆ ಅನುಮತಿ ನೀಡುವ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ನಡೆಯು ಮತ್ತೊಮ್ಮೆ ಅಕ್ರಮ ಗಣಿಗಾರಿಕೆಗೆ ಪರೋಕ್ಷವಾಗಿ ಹಸಿರು ನಿಶಾನೆ ತೋರಿದಂತಾಗಲಿದೆ ಎಂಬ ಆತಂಕ ತಜ್ಞರು ಮತ್ತು ಪರಿಸರವಾದಿಗಳಲ್ಲಿ ಮೂಡಿದೆ.
ಬಳ್ಳಾರಿಯಿಂದ ಅಗೆದ ಅದಿರನ್ನು ಚೀನಾ ಸೇರಿದಂತೆ ವಿದೇಶಗಳಿಗೆ ಕಳ್ಳಸಾಗಣೆ ಮಾಡಲು ಪ್ರಮುಖವಾಗಿ ಬಳಸಿಕೊಂಡಿದ್ದು ಮಂಗಳೂರು ಅಥವಾ ಚೆನ್ನೈಯಂತಹ ಬೃಹತ್ ಬಂದರುಗಳನ್ನಲ್ಲ, ಬದಲಿಗೆ ಕಾರವಾರ ಮತ್ತು ಬೇಲೆಕೇರಿಯಂತಹ ಕಿರು ಬಂದರುಗಳನ್ನು. ಇದಕ್ಕೆ ಪ್ರಮುಖ ಕಾರಣ, ಅಲ್ಲಿನ ತಪಾಸಣಾ ವ್ಯವಸ್ಥೆಯಲ್ಲಿದ್ದ ದೊಡ್ಡ ರಂಧ್ರಗಳು ಎಂಬ ಆರೋಪಗಳು ಕೇಳಿಬಂದಿವೆ.
2006 ರಿಂದ 2011ರ ಅವಧಿಯಲ್ಲಿ ಬಳ್ಳಾರಿಯಲ್ಲಿ ನಡೆದದ್ದು ಕೇವಲ ಗಣಿಗಾರಿಕೆಯಲ್ಲ, ಅದು ರಾಜ್ಯದ ಬೊಕ್ಕಸಕ್ಕೆ ಮತ್ತು ನಿಸರ್ಗಕ್ಕೆ ಎಸಗಿದ ದ್ರೋಹವಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಚೀನಾದಲ್ಲಿ ಒಲಿಂಪಿಕ್ಸ್ ತಯಾರಿಯ ಕಾರಣ ಕಬ್ಬಿಣದ ಅದಿರಿಗೆ ಅತೀವ ಬೇಡಿಕೆ ಸೃಷ್ಟಿಯಾಯಿತು. ಈ ಬೇಡಿಕೆಯನ್ನು ದುರ್ಬಳಕೆ ಮಾಡಿಕೊಂಡ ಗಣಿ ಧಣಿಗಳು, ಕಾನೂನಿನ ಎಲ್ಲಾ ಮಿತಿಗಳನ್ನು ಮೀರಿ ಬೆಟ್ಟಗಳನ್ನು ಬಗೆದರು. ಈ ಅವಧಿಯಲ್ಲಿ ಗಡಿ ರೇಖೆಗಳನ್ನು ಅಳಿಸಿ ಹಾಕಲಾಯಿತು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಗಳನ್ನು ತಿರುಚಿ, ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿ ಗಣಿಗಾರಿಕೆ ನಡೆಸಲಾಯಿತು. ಜಿರೋ ರಿಸ್ಕ್ ವ್ಯವಸ್ಥೆಯ ಹೆಸರಿನಲ್ಲಿ ಅಧಿಕಾರಿಗಳನ್ನು, ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ನಡೆಸಿದ ಈ ದಂಧೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವರದಿಯಿಂದ ಜಗಜ್ಜಾಹೀರಾಯಿತು.
ಬೃಹತ್ ಬಂದರು ಮತ್ತು ಕಿರು ಬಂದರು ವ್ಯವಸ್ಥೆಯ ವ್ಯತ್ಯಾಸ
ಅಕ್ರಮ ಗಣಿಗಾರಿಕೆ ನಡೆಸುವವರು ನವ ಮಂಗಳೂರು ಬಂದರು ಅಥವಾ ಚೆನ್ನೈ ಬಂದರುಗಳಂತಹ ಬೃಹತ್ ಬಂದರುಗಳನ್ನು ಕಡೆಗಣಿಸಲು ಬಲವಾದ ಕಾರಣವಿದೆ. ಬೃಹತ್ ಬಂದರುಗಳು ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿರುತ್ತವೆ. ಅಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಬಿಗಿ ಭದ್ರತೆ ಇರುತ್ತದೆ. ಪ್ರತಿಯೊಂದು ಲಾರಿಯೂ ಸ್ಕ್ಯಾನರ್‌ಗಳ ಮೂಲಕ ಹಾದು ಹೋಗಬೇಕು ಮತ್ತು ಎಲ್ಲವೂ ಡಿಜಿಟಲೀಕರಣಗೊಂಡಿರುತ್ತದೆ. ಕಸ್ಟಮ್ಸ್ ಅಧಿಕಾರಿಗಳ ಕಣ್ಗಾವಲು ಹಗಲಿರುಳು ಇರುತ್ತದೆ. ಆದರೆ, ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಡುವ ಕಿರು ಬಂದರುಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿರುತ್ತದೆ.
ಅಲ್ಲಿ ಬೃಹತ್ ಹಡಗುಗಳು ದಡಕ್ಕೆ ಬರಲು ಸಾಧ್ಯವಿರಲಿಲ್ಲ. ಬದಲಿಗೆ ಹಡಗುಗಳು ನಡು ಸಮುದ್ರದಲ್ಲಿ ನಿಲ್ಲುತ್ತವೆ. ಸಣ್ಣ ದೋಣಿಗಳು ಅಥವಾ ಬಾರ್ಜ್‌ಗಳ ಮೂಲಕ ಅದಿರನ್ನು ಸಾಗಿಸಿ ಹಡಗಿಗೆ ತುಂಬಲಾಗುತ್ತಿತ್ತು. ನಡು ಸಮುದ್ರದಲ್ಲಿ ಎಷ್ಟು ಅದಿರು ತುಂಬಲಾಗುತ್ತಿದೆ ಎಂಬುದನ್ನು ನಿಖರವಾಗಿ ಅಳೆಯುವ ವ್ಯವಸ್ಥೆ ಅಲ್ಲಿರುವುದಿಲ್ಲ. ಕಿರು ಬಂದರುಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳಾಗಲಿ, ಸಿಸಿಟಿವಿ ಕ್ಯಾಮೆರಾಗಳಾಗಲಿ ಸಮರ್ಪಕವಾಗಿರುವುದಿಲ್ಲ. ದಾಖಲೆಗಳೆಲ್ಲವೂ ಕೈಬರಹದ ಪುಸ್ತಕಗಳಲ್ಲಿ ನಿರ್ವಹಿಸಲ್ಪಡುತ್ತವೆ. ಇದು ಅವರಿಗೆ ಬೇಕಾದಂತೆ ತಿದ್ದಲು ಅಥವಾ ಹರಿಯಲು ಅಕ್ರಮಕೋರರಿಗೆ ಸುಲಭವಾಗುತ್ತದೆ.
ಭದ್ರತಾ ಲೋಪ, ದಾಸ್ತಾನು ವಿಲೇವಾರಿ ನೆಪ
ಕಿರು ಬಂದರುಗಳ ಭದ್ರತೆಯನ್ನು ಖಾಸಗಿ ಭದ್ರತೆ ಅಥವಾ ಸ್ಥಳೀಯ ಪೊಲೀಸರು ಕೈಗೊಳ್ಳಲಿದ್ದಾರೆ. ರಾಜಕೀಯ ಒತ್ತಡ ಅಥವಾ ಹಣದ ಆಮಿಷಕ್ಕೆ ಇವರು ಸುಲಭವಾಗಿ ಬಲಿಯಾಗಬಹುದು. ಹಿಂದೆ ಬೇಲೆಕೇರಿಯಲ್ಲಿ ಬಂದರಿನ ಗೋಡೆಗಳನ್ನು ಕೆಡವಿ, ಖಾಸಗಿ ಜಮೀನುಗಳ ಮೂಲಕ ರಾತ್ರೋರಾತ್ರಿ ಅದಿರು ಸಾಗಿಸಿದ್ದು ಇದಕ್ಕೆ ಸಾಕ್ಷಿ. ಅದೇ ವ್ಯವಸ್ಥೆ ಇಂದಿಗೂ ಸುಧಾರಣೆಯಾಗಿಲ್ಲದಿದ್ದರೆ, ಹಳೆಯ ಚಾಳಿ ಮುಂದುವರಿಯಲಿದೆ ಎಂಬ ಆತಂಕ ಇದೆ. ಕಿರು ಬಂದರುಗಳಲ್ಲಿ ಅದಿರು ಪರೀಕ್ಷಿಸುವ ಪ್ರಯೋಗಾಲಯಗಳ ಮೇಲೆ ನಿಯಂತ್ರಣ ಕಡಿಮೆ ಇರಲಿದೆ. ಹೀಗಾಗಿ, ಅತ್ಯುತ್ತಮ ಗುಣಮಟ್ಟದ ಅದಿರನ್ನು "ಮಣ್ಣು ಮಿಶ್ರಿತ ಕಳಪೆ ಅದಿರು" ಎಂದು ಸುಳ್ಳು ಪ್ರಮಾಣಪತ್ರ ನೀಡಿ ರಫ್ತು ಮಾಡುವ ಸಾಧ್ಯತೆಯಿದೆ. ಇದರಿಂದ ದೇಶದ ಸಂಪತ್ತು ಅಗ್ಗದ ಬೆಲೆಗೆ ವಿದೇಶ ಪಾಲಾಗುತ್ತದೆ.
ಒಮ್ಮೆ ಹಳೆಯ ದಾಸ್ತಾನು ರಫ್ತು ಮಾಡಲು ಅನುಮತಿ ಸಿಕ್ಕರೆ, ಅದರ ನೆಪದಲ್ಲಿ ಹೊಸದಾಗಿ ಅಕ್ರಮವಾಗಿ ಅಗೆದ ಅದಿರನ್ನು ಹಳೆಯ ಸ್ಟಾಕ್ ಜತೆ ಸೇರಿಸಿ ರಫ್ತು ಮಾಡಲಾಗುತ್ತದೆ. ಯಾವ ಅದಿರು ಹಳೆಯದು, ಯಾವುದು ಹೊಸದು ಎಂದು ಪತ್ತೆಹಚ್ಚುವುದು ರಾಶಿಯಲ್ಲಿ ಕಷ್ಟದ ಕೆಲಸ. ಕಿರು ಬಂದರುಗಳು ದೂರದ ಊರುಗಳಲ್ಲಿರುವುದರಿಂದ ಅಲ್ಲಿಗೆ ನೇಮಕವಾಗುವ ಕಸ್ಟಮ್ಸ್ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಇರುವ ಒಬ್ಬಿಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಅಥವಾ ಅವರನ್ನು 'ವ್ಯವಸ್ಥೆ'ಯ ಭಾಗವಾಗಿಸಿಕೊಳ್ಳುವುದು ಗಣಿ ಮಾಫಿಯಾಗೆ ಸುಲಭ. ಬೃಹತ್ ಬಂದರುಗಳಲ್ಲಿರುವಂತೆ ಇಲ್ಲಿ 'ಕ್ರಾಸ್ ಚೆಕ್ಕಿಂಗ್' ವ್ಯವಸ್ಥೆ ಇರುವುದಿಲ್ಲ ಎಂದು ಹೇಳಲಾಗಿದೆ.
ಮತ್ತೆ ಮಿತಿಮೀರಿದ ಉತ್ಖನನ?
ರಫ್ತಿಗೆ ಮುಕ್ತ ಅವಕಾಶ ಸಿಕ್ಕಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ತಕ್ಕಂತೆ ಪೂರೈಕೆ ಮಾಡಲು ಗಣಿ ಮಾಲೀಕರು ಮುಗಿಬೀಳುತ್ತಾರೆ. ಇದು ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಅದಿರನ್ನು ತೆಗೆಯಲು ಪ್ರೇರೇಪಿಸುತ್ತದೆ. ಅನುಮತಿ ಒಂದಿದ್ದರೆ, ಅದರ ಹೆಸರಿನಲ್ಲಿ ಹತ್ತು ಲಾರಿಗಳನ್ನು ಕಳುಹಿಸುವ ತಂತ್ರಗಾರಿಕೆ ಮತ್ತೆ ಶುರುವಾಗಬಹುದು. ಕಿರು ಬಂದರುಗಳಲ್ಲಿ ಇಂದಿಗೂ ಸುಧಾರಿತ ತಂತ್ರಜ್ಞಾನದ ಕೊರತೆಯಿದೆ. ಡಿಜಿಟಲ್ ತೂಕದ ಯಂತ್ರಗಳು, ಸ್ಯಾಟಲೈಟ್ ಟ್ರ್ಯಾಕಿಂಗ್ ವ್ಯವಸ್ಥೆ ಅಥವಾ ಕಟ್ಟುನಿಟ್ಟಾದ ಕಸ್ಟಮ್ಸ್ ತಪಾಸಣೆ ಅಲ್ಲಿ ಪರಿಣಾಮಕಾರಿಯಾಗಿ ಜಾರಿಯಲ್ಲಿಲ್ಲ. ಇದು ಕಳ್ಳಸಾಗಣೆಗೆ ಸುಲಭ ದಾರಿ ಮಾಡಿಕೊಡುತ್ತದೆ.ಗಣಿಯಿಂದ ಬಂದರುಗಳವರೆಗೆ ಅದಿರು ಸಾಗಿಸುವಾಗ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದ್ದರೂ, ಅದನ್ನು ತಿರುಚುವ ಅಥವಾ ಬೈಪಾಸ್ ಮಾಡುವ ತಂತ್ರಜ್ಞಾನವೂ ಬೆಳೆದಿದೆ. ಕಿರು ಬಂದರುಗಳ ರಸ್ತೆಗಳು ಮತ್ತು ಚೆಕ್‌ಪೋಸ್ಟ್‌ಗಳು ಭ್ರಷ್ಟಾಚಾರಕ್ಕೆ ಸುಲಭವಾಗಿ ತುತ್ತಾಗುತ್ತವೆ ಎನ್ನಲಾಗಿದೆ.
ಕಿರು ಬಂದರುಗಳ ಮೂಲಕ ರಫ್ತಿಗೆ ಅನುಮತಿ ನೀಡುವುದೆಂದರೆ, ಪರೋಕ್ಷವಾಗಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದಂತೆಯೇ ಸರಿ. ಕಾನೂನುಬದ್ಧವಾಗಿ ಅನುಮತಿ ಪಡೆದ ಪ್ರಮಾಣಕ್ಕಿಂತ ಹೆಚ್ಚು ರಫ್ತು ಮಾಡಲು ಕಿರು ಬಂದರುಗಳು ಸುರಕ್ಷಿತ ಮಾರ್ಗಗಳಾಗಿವೆ. ಹಿಂದೆ ಬೇಲೆಕೇರಿಯಲ್ಲಿ ನಡೆದಂತೆ, ದಾಖಲೆಗಳಿಲ್ಲದ ಅದಿರನ್ನುಸಾಗಿಸಲು ಇದು ಅವಕಾಶ ನೀಡುತ್ತದೆ. ಇದರಿಂದ ಮತ್ತೆ ಬಳ್ಳಾರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಾಫಿಯಾ ಸಂಸ್ಕೃತಿ ತಲೆ ಎತ್ತಬಹುದು. ಹಣದ ಹರಿವು ಹೆಚ್ಚಾದಂತೆ, ಅಪರಾಧ ಕೃತ್ಯಗಳು ಮತ್ತು ರಾಜಕೀಯ ಹಸ್ತಕ್ಷೇಪಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪರಿಸರದ ಮೇಲಾಗುವ ದುಷ್ಪರಿಣಾಮಗಳು
ಬಳ್ಳಾರಿಯ ಗಣಿಗಾರಿಕೆ ಮತ್ತು ಅದನ್ನು ರಫ್ತು ಮಾಡಲು ಬಳಸುವ ಕರಾವಳಿಯ ಕಿರು ಬಂದರುಗಳಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳು ಅಕ್ಷರಶಃ ವಿನಾಶಕಾರಿಯಾಗಿವೆ. ಗಣಿಗಾರಿಕೆ, ಬ್ಲಾಸ್ಟಿಂಗ್ ಮತ್ತು ಸಾವಿರಾರು ಲಾರಿಗಳ ಸಂಚಾರದಿಂದ ಏಳುವ ಸೂಕ್ಷ್ಮವಾದ ಕೆಂಪು ಧೂಳು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಇದು ಶ್ವಾಸಕೋಶ ಸೇರಿ ಅಸ್ತಮಾ, ಸಿಲಿಕೋಸಿಸ್ ಮತ್ತು ಕ್ಷಯದಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಗಾಳಿಯಲ್ಲಿ ಕೆಂಪು ಧೂಳು ಸೇರುವುದರಿಂದ ಅಕ್ಕಪಕ್ಕದ ಹೊಲಗಳಲ್ಲಿ ಬೆಳೆದ ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ ಬೆಳೆಗಳ ಎಲೆಗಳ ಮೇಲೆ ದಪ್ಪವಾಗಿ ಕುಳಿತುಕೊಳ್ಳುತ್ತದೆ. ಇದರಿಂದ ಬೆಳೆಗಳು ಕಮರಿ ಹೋಗುತ್ತವೆ. ಫಲವತ್ತಾದ ಕೃಷಿ ಭೂಮಿ ಬಂಜರು ಭೂಮಿಯಾಗಿ ಬದಲಾಗುತ್ತದೆ. ಇದಲ್ಲದೇ, ಅಳವಾದ ಗಣಿಗಾರಿಕೆಯಿಂದಾಗಿ ಭೂಮಿಯ ಆಳದಲ್ಲಿರುವ ನೀರಿನ ಸೆಲೆಗಳು ಬತ್ತಿ ಹೋಗುತ್ತವೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತದೆ. ನೀರು ಕೂಡ ಅದಿರಿನ ಲವಣಗಳೊಂದಿಗೆ ಸೇರಿ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಕುಡಿಯಲು ಯೋಗ್ಯವಲ್ಲದಂತಾಗುತ್ತದೆ. ತುಂಗಭದ್ರಾ ನದಿಗೆ ಸೇರುವ ತ್ಯಾಜ್ಯದಿಂದ ನದಿ ನೀರು ಕಲುಷಿತಗೊಳ್ಳುತ್ತದೆ.
ಕಿರು ಬಂದರುಗಳಲ್ಲಿ ಬಾರ್ಜ್‌ಗಳಿಂದ (ಚಿಕ್ಕ ಹಡಗು) ದೊಡ್ಡ ಹಡಗುಗಳಿಗೆ ಅದಿರು ತುಂಬುವಾಗ ಅಪಾರ ಪ್ರಮಾಣದ ಅದಿರು ಪುಡಿ ಸಮುದ್ರಕ್ಕೆ ಬೀಳುತ್ತದೆ. ಇದು ಸಮುದ್ರದ ತಳ ಸೇರಿ, ಅಲ್ಲಿನ ಹವಳದ ದಿಬ್ಬಗಳು ಮತ್ತು ಮೀನುಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಮಾಡುತ್ತದೆ. ಇದರಿಂದ ಮೀನುಗಾರಿಕೆ ಕುಸಿಯುತ್ತದೆ. ಕಿರು ಬಂದರುಗಳ ವಿಸ್ತರಣೆಗಾಗಿ ಸಮುದ್ರ ತೀರದ ರಕ್ಷಕನಂತಿರುವ ಕಂಡ್ಲಾ ಕಾಡುಗಳನ್ನು ಕಡಿಯಲಾಗುತ್ತದೆ. ಇದರಿಂದ ಕರಾವಳಿ ಕೊರೆತ ಹೆಚ್ಚಾಗುತ್ತದೆ ಮತ್ತು ಸುನಾಮಿಯಂತಹ ಅಲೆಗಳನ್ನು ತಡೆಯುವ ನೈಸರ್ಗಿಕ ಶಕ್ತಿ ಕುಂದುತ್ತದೆ. ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಗಾಳಿಗೆ ತೂರಿ, ಕಡಲ ತೀರದಲ್ಲಿ ಅದಿರು ರಾಶಿ ಹಾಕಲಾಗುತ್ತದೆ. ಮಳೆಗಾಲದಲ್ಲಿ ಈ ರಾಶಿಯ ಕೆಂಪು ನೀರು ನೇರವಾಗಿ ಸಮುದ್ರ ಸೇರಿ, ಇಡೀ ಕಡಲ ತೀರವನ್ನು ಕಲುಷಿತಗೊಳಿಸುತ್ತದೆ.
ಲೋಕಾಯುಕ್ತ ವರದಿಯಲ್ಲಿ ಹಲವು ಅಂಶಗಳ ಉಲ್ಲೇಖ
ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿದ ಲೋಕಾಯುಕ್ತ ವರದಿಯು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಮಹತ್ವದ ದಾಖಲೆಯಾಗಿದೆ. 16,085 ಕೋಟಿ ರೂ. ನಷ್ಟದ ಅಂದಾಜು ಕೇವಲ ಅಂಕಿ-ಅಂಶವಲ್ಲ, ಅದು ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿಯ ಪ್ರಮಾಣವನ್ನು ತೋರಿಸುವ ಕನ್ನಡಿಯಾಗಿದೆ.ಲೋಕಾಯುಕ್ತ ವರದಿಯ ಆಧಾರದ ಮೇಲೆ, ಆರ್ಥಿಕ ನಷ್ಟವು ಹೇಗೆ ಸಂಭವಿಸಿತು ಮತ್ತು ಬೊಕ್ಕಸಕ್ಕೆ ಸೇರಬೇಕಿದ್ದ ಹಣ ಹೇಗೆ ಖಾಸಗಿ ವ್ಯಕ್ತಿಗಳ ಪಾಲಾಯಿತು ಎಂಬುದನ್ನು ನ್ಯಾ. ಸಂತೋಷ್ ಹೆಗ್ಡೆ ವರದಿಯಲ್ಲಿ ವಿಸ್ತೃತ ಮಾಹಿತಿ ಇದೆ.
ವರದಿಯಲ್ಲಿ ಉಲ್ಲೇಖಿಸಲಾದ ಅತ್ಯಂತ ಆಘಾತಕಾರಿ ಅಂಶ ಶೂನ್ಯ ರಿಸ್ಕ್ ವ್ಯವಸ್ಥೆಯಾಗಿದೆ. ಅಕ್ರಮ ಗಣಿಗಾರಿಕೆ ನಡೆಸುವವರು ಒಂದು ನಿರ್ದಿಷ್ಟ ಮೊತ್ತವನ್ನು (ಲಂಚದ ರೂಪದಲ್ಲಿ) ಒಂದು ಜಾಲಕ್ಕೆ ನೀಡಿದರೆ, ಅವರಿಗೆ ಶೂನ್ಯ ರಿಸ್ಕ್ ಭರವಸೆ ಸಿಗುತ್ತಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆಯ ಯಾವ ಅಧಿಕಾರಿಯೂ ಅವರ ವಾಹನವನ್ನು ತಡೆಯುವಂತಿಲ್ಲ. ಈ ವ್ಯವಸ್ಥೆಯಿಂದಾಗಿ ಯಾವುದೇ ಅಡೆತಡೆಯಿಲ್ಲದೆ ಲಕ್ಷಾಂತರ ಟನ್ ಅದಿರು ಬಂದರುಗಳನ್ನು ತಲುಪಿತು.
16,085 ಕೋಟಿ ನಷ್ಟವಾಗಿರುವ ಬಗ್ಗೆ ಲೆಕ್ಕಾಚಾರ ಮಾಡಲಾಗಿದೆ. ಈ ಮೊತ್ತವು ಕೇವಲ ಪಾವತಿಸದ ತೆರಿಗೆಯಲ್ಲ, ಬದಲಿಗೆ ಕಳ್ಳತನವಾದ ಅದಿರ ಮೌಲ್ಯವೂ ಸೇರಿದೆ. ಸರ್ಕಾರಕ್ಕೆ ಪ್ರತಿ ಟನ್ ಅದಿರಿಗೆ ನಿರ್ದಿಷ್ಟ ಮೊತ್ತದ ರಾಯಧನ ನೀಡಬೇಕು. ಇದನ್ನು ನೀಡದೆ ಕಳ್ಳಸಾಗಣೆ ಮಾಡಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದಾಗ ಅಥವಾ ಅದಿರನ್ನು ಸಾಗಿಸುವಾಗ ಶೇ.12 ರಷ್ಟು ಅರಣ್ಯ ಅಭಿವೃದ್ಧಿ ತೆರಿಗೆ (ಎಫ್‌ಡಿಟಿ) ಪಾವತಿಸಬೇಕು. ಇದನ್ನು ಸಂಪೂರ್ಣವಾಗಿ ವಂಚಿಸಲಾಗಿತ್ತು. ಮಾರಾಟದ ಮೇಲಿನ ತೆರಿಗೆಯನ್ನು ಸಹ ಸರ್ಕಾರಕ್ಕೆ ಕಟ್ಟದೆ ತಪ್ಪಿಸಿಕೊಳ್ಳಲಾಗಿತ್ತು. ಪರವಾನಗಿ ಇಲ್ಲದೆ ಅಗೆದ ಅದಿರು ಸರ್ಕಾರದ ಆಸ್ತಿ. ಅದನ್ನು ಮಾರಿ ಗಳಿಸಿದ ಪೂರ್ಣ ಹಣವೂ ಸರ್ಕಾರಕ್ಕೆ ಆದ ನಷ್ಟವೇ ಆಗಿದೆ. ಇದೀಗ ಮತ್ತೆ ಕಬ್ಬಿಣದ ಅದಿರು ಸಾಗಾಣಿಕೆ ಪ್ರಾರಂಭ ಮಾಡುವುದರಿಂದ ಇದೇ ಅಕ್ರಮಗಳು ನಡೆಯಬಹುದೇ ಎಂಬ ಅನುಮಾನಗಳು ಪರಿಸರವಾದಿಗಳದ್ದಾಗಿದೆ.
ದೇಶೀಯ ಮಾರುಕಟ್ಟೆಗಿಂತ ಚೀನಾ ಮಾರುಕಟ್ಟೆಯಲ್ಲಿ ಅದಿರಿಗೆ ಸಿಗುತ್ತಿದ್ದ ಭಾರೀ ಬೆಲೆ ಈ ಲೂಟಿಗೆ ಪ್ರೇರಣೆಯಾಗಿತ್ತು. 2006-2010ರ ಅವಧಿಯಲ್ಲಿ 128 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಅದಿರು ಅಕ್ರಮವಾಗಿ ರಫ್ತಾಗಿದೆ ಎಂದು ಅಂದಾಜಿಸಲಾಗಿದೆ. ಬಳ್ಳಾರಿಯಿಂದ ಕಾರವಾರ, ಬೇಲೆಕೇರಿ, ಮಂಗಳೂರು, ಚೆನ್ನೈ, ಕೃಷ್ಣಪಟ್ಟಣಂ ಮತ್ತು ಗೋವಾ ಬಂದರುಗಳಿಗೆ ಸಾಗಿಸುವ ದಾರಿಯುದ್ದಕ್ಕೂ ಅಧಿಕಾರಿಗಳ ಕಣ್ಗಾವಲು ಇದ್ದರೂ, ಲಂಚದ ಪ್ರಭಾವದಿಂದ ಲಾರಿಗಳು ಸರಾಗವಾಗಿ ಸಾಗಿದ್ದವು. ಮತ್ತೆ ಇದಕ್ಕೆ ಉತ್ತೇಜನ ನೀಡದಂತಾಗುವ ಸಾಧ್ಯತೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂಬುದು ಅಕ್ರಮ ಗಣಿಗಾರಿಗೆ ವಿರುದ್ಧ ನಡೆಸಿದ ಹೋರಾಟಗಾರರ ಅಭಿಮತವಾಗಿದೆ.
ಗಣಿಯಿಂದ ಹೊರಬರುವ ಲಾರಿಗಳನ್ನು ತೂಕ ಮಾಡುವ ವೇ-ಬ್ರಿಡ್ಜ್‌ಗಳಲ್ಲಿ ತಂತ್ರಾಂಶವನ್ನು ಹ್ಯಾಕ್ ಮಾಡಲಾಗಿತ್ತು. ಒಂದು ಲಾರಿಯಲ್ಲಿ 40 ಟನ್ ಅದಿರು ಇದ್ದರೆ, ರಸೀದಿಯಲ್ಲಿ ಕೇವಲ 15 ಅಥವಾ 20 ಟನ್ ಎಂದು ಮುದ್ರಿಸಲಾಗುತ್ತಿತ್ತು. ಉಳಿದ 20 ಟನ್ ಅದಿರು ಯಾವುದೇ ಲೆಕ್ಕವಿಲ್ಲದೆ ಸಾಗಣೆಯಾಗುತ್ತಿತ್ತು. ಇದಕ್ಕೆ ರಾಯಧನವಾಗಲಿ, ತೆರಿಗೆಯಾಗಲಿ ಜಮೆಯಾಗುತ್ತಿರಲಿಲ್ಲ.
ಕಿರು ಬಂದರುಗಳು ಅಕ್ರಮ ಗಣಿಗಾರಿಕೆಯ ಸರಪಳಿಯ ಅಂತಿಮ ಮತ್ತು ಅತ್ಯಂತ ನಿರ್ಣಾಯಕ ಕೊಂಡಿಯಾಗಿದ್ದವು. ಬಳ್ಳಾರಿಯಿಂದ ಬಂದ ಕಳ್ಳ ಮಾಲು, ಇಲ್ಲಿನ ವ್ಯವಸ್ಥೆಯ ಲೋಪದಿಂದಾಗಿ ಸುಲಭವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಸೇರಿತು. ಈಗ ಮತ್ತೆ ಕಿರು ಬಂದರುಗಳ ಮೂಲಕ ರಫ್ತಿಗೆ ಅನುಮತಿ ನೀಡುವುದು ಅದೇ ಲೋಪದೋಷಗಳನ್ನು ಮತ್ತೆ ದುರ್ಬಳಕೆ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಂತಾಗಲಿದೆ. ಆಧುನಿಕ ಸ್ಕ್ಯಾನರ್‌ಗಳು, ಸ್ಯಾಟಲೈಟ್ ಟ್ರ್ಯಾಕಿಂಗ್, ಮತ್ತು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯನ್ನು ಕಿರು ಬಂದರುಗಳಲ್ಲಿ ಅಳವಡಿಸಬೇಕು. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಅದಿರು ರಫ್ತು ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಸಂಪತ್ತಿನ ಲೂಟಿಗೆ ಮತ್ತೊಮ್ಮೆ ರಹದಾರಿ ನೀಡಿದಂತೆಯೇ ಆಗಲಿದೆ ಎನ್ನಲಾಗಿದೆ.
(
ಈ ಸರಣಿಯ ಮೊದಲ (3/12/2025) ಮತ್ತು ಎರಡನೆ ಭಾಗ (4/12/2025) ಪ್ರಕಟವಾಗಿದೆ. ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ..
Part-1: ಕಿರುಬಂದರುಗಳ ಮೂಲಕ ಮತ್ತೆ ಅದಿರು ರಫ್ತು| 500 ಕೋಟಿ ವಾರ್ಷಿಕ ಆದಾಯ, 10,000 ಉದ್ಯೋಗ ಸೃಷ್ಟಿ?
Part-2| ಬಳ್ಳಾರಿ ಗಣಿ ಧಣಿಗಳಿಗೆ 'ಸಂಜೀವಿನಿ' : ಕಡಿಮೆ ದರ್ಜೆಯ ಅದಿರು ಚೀನಾಕ್ಕೆ ಸಿಂಹಪಾಲು!