ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ

ಕಚೇರಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುವ ಬೆಳಗಿನ ಅವಸರದ ಸಮಯದಲ್ಲೇ ಈ ಘಟನೆ ನಡೆದಿದ್ದರಿಂದ ನೂರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಪರದಾಡುವಂತಾಯಿತು. ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ಕಡೆಯಿಂದ ಬರುವ ರೈಲುಗಳು ಪ್ರಸ್ತುತ ಮೈಸೂರು ರಸ್ತೆ ನಿಲ್ದಾಣದವರೆಗೆ ಮಾತ್ರ ಕಾರ್ಯಾಚರಿಸುತ್ತಿವೆ.

Update: 2025-12-05 04:20 GMT

ನಮ್ಮ ಮೆಟ್ರೋ

Click the Play button to listen to article

ವಾರಾಂತ್ಯದ ಶುಕ್ರವಾರದ ಬೆಳಿಗ್ಗೆಯೇ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ರೈಲು ಹಳಿಗಳ ಮೇಲೆ ಹಾರಿದ ಘಟನೆ ನಡೆದಿದ್ದು, ಈ ಕಾರಣದಿಂದಾಗಿ ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಚೇರಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುವ ಬೆಳಗಿನ ಅವಸರದ ಸಮಯದಲ್ಲೇ ಈ ಘಟನೆ ನಡೆದಿದ್ದರಿಂದ ನೂರಾರು ಪ್ರಯಾಣಿಕರು ನಿಲ್ದಾಣಗಳಲ್ಲಿ ಪರದಾಡುವಂತಾಯಿತು. ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ಕಡೆಯಿಂದ ಬರುವ ರೈಲುಗಳು ಪ್ರಸ್ತುತ ಮೈಸೂರು ರಸ್ತೆ ನಿಲ್ದಾಣದವರೆಗೆ ಮಾತ್ರ ಕಾರ್ಯಾಚರಿಸುತ್ತಿವೆ. ಅಲ್ಲಿಂದ ಮುಂದೆ ಕೆಂಗೇರಿ ಮತ್ತು ಚಲ್ಲಘಟ್ಟ ಕಡೆಗೆ ತೆರಳಬೇಕಿದ್ದ ಪ್ರಯಾಣಿಕರನ್ನು ಮೈಸೂರು ರಸ್ತೆ ನಿಲ್ದಾಣದಲ್ಲೇ ಇಳಿಸಲಾಗುತ್ತಿದೆ.‌

ಘಟನೆ ನಡೆದ ಕೂಡಲೇ ಸುರಕ್ಷತಾ ದೃಷ್ಟಿಯಿಂದ ಮೆಟ್ರೋ ಹಳಿಗಳಿಗೆ ಸರಬರಾಜಾಗುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸ್ಥಳಕ್ಕೆ ಮೆಟ್ರೋ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹಳಿಗೆ ಹಾರಿದ ವ್ಯಕ್ತಿಯ ರಕ್ಷಣೆ ಮತ್ತು ಹಳಿಗಳ ಪರಿಶೀಲನೆಯ ನಂತರವಷ್ಟೇ ಪೂರ್ಣ ಪ್ರಮಾಣದ ಸಂಚಾರ ಆರಂಭವಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್, ತಾಂತ್ರಿಕ ಮತ್ತು ಸುರಕ್ಷತಾ ಕಾರಣಗಳಿಂದ ಚಲ್ಲಘಟ್ಟದವರೆಗಿನ ಸೇವೆ ಸ್ಥಗಿತಗೊಂಡಿದ್ದು, ಮೈಸೂರು ರಸ್ತೆಯಿಂದ ವೈಟ್‌ಫೀಲ್ಡ್‌ವರೆಗಿನ ರೈಲು ಸಂಚಾರ ಎಂದಿನಂತೆ ಇದೆ ಎಂದು ಸ್ಪಷ್ಟಪಡಿಸಿದೆ. ಸೇವೆ ಸ್ಥಗಿತದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ನಿಗಮವು ವಿಷಾದ ವ್ಯಕ್ತಪಡಿಸಿದೆ.

Tags:    

Similar News