ಸಿಎಂ, ಡಿಸಿಎಂ ಪರ ಘೋಷಣೆ ಕೂಗಿದ್ದಕ್ಕೆ ಹೈಕಮಾಂಡ್ ಗರಂ; ಐವನ್ ಡಿಸೋಜಾ, ಮಿಥುನ್ ರೈಗೆ ಎಐಸಿಸಿ ನೋಟಿಸ್
ಹಿರಿಯ ನಾಯಕ ವೇಣುಗೋಪಾಲ್ ಅವರ ಎದುರೇ ನಡೆದ ಈ 'ಘೋಷಣಾ ಯುದ್ಧ' ಮತ್ತು ಬಣ ರಾಜಕೀಯದ ಪ್ರದರ್ಶನದಿಂದ ಅವರು ತೀವ್ರ ಮುಜುಗರಕ್ಕೀಡಾಗಿದ್ದರು ಎಂದು ವರದಿಯಾಗಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮಂಗಳೂರು ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ಬಹಿರಂಗವಾಗಿ ಘೋಷಣೆ ಕೂಗಿದ ಘಟನೆಯನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದಡಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಶಿಸ್ತು ಸಮಿತಿಯು ನೋಟಿಸ್ ಜಾರಿ ಮಾಡಿದೆ.
ಇತ್ತೀಚೆಗೆ ಕೆ.ಸಿ. ವೇಣುಗೋಪಾಲ್ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಅಲ್ಲಿ ನೆರೆದಿದ್ದ ನಾಯಕರ ಬೆಂಬಲಿಗರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ವೇಳೆ ನಡೆದ ಘೋಷಣೆಗಳ ಅಬ್ಬರ ಪಕ್ಷದ ವರಿಷ್ಠರಿಗೆ ತೀವ್ರ ಮುಜುಗರ ಉಂಟುಮಾಡಿತ್ತು. ಇದೀಗ ಈ ವರ್ತನೆಯನ್ನು 'ಅಶಿಸ್ತು' ಎಂದು ಪರಿಗಣಿಸಿರುವ ಹೈಕಮಾಂಡ್, ಒಂದು ವಾರದೊಳಗೆ ಉತ್ತರಿಸುವಂತೆ ಇಬ್ಬರೂ ನಾಯಕರಿಗೆ ಸೂಚನೆ ನೀಡಿದೆ.
ವಿಮಾನ ನಿಲ್ದಾಣದಲ್ಲಿ ನಡೆದಿದ್ದೇನು?
ಕೆ.ಸಿ. ವೇಣುಗೋಪಾಲ್ ಅವರನ್ನು ಸ್ವಾಗತಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಮುಖಂಡರು ತೆರಳಿದ್ದರು. ಈ ವೇಳೆ ಯುವ ಮುಖಂಡ ಮಿಥುನ್ ರೈ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಿದ್ದರು. ಇದಕ್ಕೆ ಪ್ರತಿಯಾಗಿ ಎಂಬಂತೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು "ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಬೇಕು" ಎಂದು ಘೋಷಣೆ ಕೂಗಿದ್ದರು.
ಹಿರಿಯ ನಾಯಕ ವೇಣುಗೋಪಾಲ್ ಅವರ ಎದುರೇ ನಡೆದ ಈ 'ಘೋಷಣಾ ಯುದ್ಧ' ಮತ್ತು ಬಣ ರಾಜಕೀಯದ ಪ್ರದರ್ಶನದಿಂದ ಅವರು ತೀವ್ರ ಮುಜುಗರಕ್ಕೀಡಾಗಿದ್ದರು ಎಂದು ವರದಿಯಾಗಿದೆ. ಪಕ್ಷದ ಆಂತರಿಕ ವೇದಿಕೆಗಳಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಬೀದಿಯಲ್ಲಿ, ಅದರಲ್ಲೂ ರಾಷ್ಟ್ರೀಯ ನಾಯಕರ ಎದುರು ಪ್ರದರ್ಶಿಸಿದ್ದು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಒಂದು ವಾರದಲ್ಲಿ ಉತ್ತರಕ್ಕೆ ಸೂಚನೆ
ಪಕ್ಷದ ಶಿಸ್ತು ಸಮಿತಿಯು ನೀಡಿರುವ ನೋಟಿಸ್‌ನಲ್ಲಿ, ಸಾರ್ವಜನಿಕವಾಗಿ ಬಣ ರಾಜಕೀಯ ಪ್ರದರ್ಶಿಸಿದ್ದೇಕೆ ಮತ್ತು ನಾಯಕರ ಪರ ಪರಸ್ಪರ ಪೈಪೋಟಿಗೆ ಬಿದ್ದವರಂತೆ ವರ್ತಿಸಿದ್ದೇಕೆ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. "ಪಕ್ಷದ ಶಿಸ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ವರ್ತನೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಿದೆ. ಹೀಗಾಗಿ ನೋಟಿಸ್ ತಲುಪಿದ ಒಂದು ವಾರದೊಳಗೆ ಸಮಜಾಯಿಷಿ ನೀಡಬೇಕು," ಎಂದು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.