
14 ವರ್ಷ ವನವಾಸಕ್ಕೆ ಮುಕ್ತಿ: 10 ಕಿರು ಬಂದರುಗಳಿಂದ ಅದಿರು ರಫ್ತಿಗೆ ಸಚಿವ ಸಂಪುಟ ಒಪ್ಪಿಗೆ
ಕಳೆದ ಒಂದೂವರೆ ದಶಕದಿಂದ ಸ್ಥಗಿತಗೊಂಡಿದ್ದ ಕಬ್ಬಿಣದ ಅದಿರು ರಫ್ತು ಮತ್ತು ಆಮದು ವಹಿವಾಟಿಗೆ ಮರುಚಾಲನೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ ಅನುಮೋದನೆ ನೀಡಿದೆ.
ರಾಜ್ಯದ ಕರಾವಳಿ ತೀರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಮರುಜೀವ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಕಳೆದ ಒಂದೂವರೆ ದಶಕದಿಂದ ಸ್ಥಗಿತಗೊಂಡಿದ್ದ ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರು ರಫ್ತು ಮತ್ತು ಆಮದು ವಹಿವಾಟಿಗೆ ಮರುಚಾಲನೆ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಸಂಬಂಧ ರಾಜ್ಯ ಜಲಸಾರಿಗೆ ಮಂಡಳಿಯು ರೂಪಿಸಿರುವ "ಕರ್ನಾಟಕ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ-2025" ಎಂಬ ಹೊಸ ಕರಡು ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಾಜ್ಯದ 10 ಕಿರು ಬಂದರುಗಳಿಂದ ಅದಿರು ರಫ್ತಿಗೆ ಒಪ್ಪಿಗೆ ನೀಡುವ ಮೂಲಕ ರಾಜ್ಯ ಸರ್ಕಾರವು 14 ವರ್ಷಗಳ ನಿಷೇಧಕ್ಕೆ ಮುಕ್ತಿ ನೀಡಿದಂತಾಗಿದೆ. 'ಹೊಸ ಅದಿರು ನಿರ್ವಹಣಾ ನೀತಿ-2025' ಜಾರಿಗೆ ಒಪ್ಪಿಗೆ ನೀಡಲಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುವ ಸಾಧ್ಯತೆ ಇದೆ.
ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ರಾಜ್ಯದಲ್ಲಿ 2010ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ಮಿತಿಮೀರಿತ್ತು. ಈ ಪಿಡುಗನ್ನು ನಿಯಂತ್ರಿಸುವ ಉದ್ದೇಶದಿಂದ, ಅಂದಿನ ರಾಜ್ಯ ಸರ್ಕಾರವು 2010ರ ಜುಲೈ 26ರಂದು ಮಹತ್ವದ ಆದೇಶವೊಂದನ್ನು ಹೊರಡಿಸಿ, ರಾಜ್ಯದ ಎಲ್ಲ 10 ಕಿರು ಬಂದರುಗಳಿಂದ ಅದಿರು ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅಂದಿನಿಂದ ಕಾರವಾರ, ಬೇಲೆಕೇರಿ ಸೇರಿದಂತೆ ಪ್ರಮುಖ ಕಿರು ಬಂದರುಗಳಲ್ಲಿ ಅದಿರು ವಹಿವಾಟು ಸ್ತಬ್ಧವಾಗಿತ್ತು.
ಈ ಸಂಬಂಧ ನಡೆದ ಸುದೀರ್ಘ ಕಾನೂನು ಹೋರಾಟದ ಫಲವಾಗಿ, ಸುಪ್ರೀಂಕೋರ್ಟ್ 2022ರ ಮೇ 20ರಂದು ಮಹತ್ವದ ತೀರ್ಪು ನೀಡಿತು. ಕೇಂದ್ರ ಸರ್ಕಾರದ ರಫ್ತು ನೀತಿ ನಿಯಮಗಳಿಗೆ ಒಳಪಟ್ಟು, ಕರ್ನಾಟಕದ ಗಣಿಗಳಲ್ಲಿ ಉತ್ಪತ್ತಿಯಾಗುವ ಕಬ್ಬಿಣದ ಅದಿರು ಮತ್ತು ಪೆಲೆಟ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ಅದೇಶ ನೀಡಿತ್ತು. ಈ ತೀರ್ಪಿನ ಅನ್ವಯ, ರಾಜ್ಯ ಜಲಸಾರಿಗೆ ಮಂಡಳಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ರೂಪಿಸಿದೆ ಎಂದು ಹೇಳಿದರು.
ರಫ್ತಿಗೆ ತೆರೆದುಕೊಳ್ಳಲಿರುವ 10 ಬಂದರುಗಳು
ಹೊಸ ನೀತಿಯ ಅನ್ವಯ ಈ ಕೆಳಗಿನ 10 ಕಿರು ಬಂದರುಗಳಲ್ಲಿ ಅದಿರು ರಫ್ತಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳ, ಕುಂದಾಪುರ, ಮಲ್ಪೆ, ಹಂಗಾರಕಟ್ಟಾ, ಹಳೆ ಮಂಗಳೂರು, ಪಡುಬಿದ್ರಿ ಬಂದರುಗಳಲ್ಲಿ ರಫ್ತು ಮಾಡಲು ಅವಕಾಶ ಕಲ್ಪಿಸಲು ಸರ್ಕಾರ ನಿರ್ಣಯಿಸಿದೆ. ಹಿಂದಿನ ಕಹಿ ಘಟನೆಗಳಿಂದ ಪಾಠ ಕಲಿತಿರುವ ಸರ್ಕಾರ, ಈ ಬಾರಿ ಅಕ್ರಮಕ್ಕೆ ಕಿಂಚಿತ್ತೂ ಅವಕಾಶ ನೀಡದಂತೆ ಕಟ್ಟುನಿಟ್ಟಿನ "ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ" ರೂಪಿಸಿದೆ.
ಪ್ರತಿ ಬಂದರಿನ ಪ್ರವೇಶ ದ್ವಾರದಲ್ಲಿ 'ಜಂಟಿ ತಪಾಸಣಾ ಕೇಂದ್ರ'ವನ್ನು ಸ್ಥಾಪಿಸಲಾಗುವುದು. ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್, ಅರಣ್ಯ, ಸಾರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಲಾರಿಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು.
ಅದಿರು ಸಾಗಿಸುವ ವಾಹನಗಳಿಗೆ ಜಿಪಿಎಸ್ ಮತ್ತು ಆರ್‌ಎಫ್‌ಐಡಿ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಗಣಿ ಇಲಾಖೆಯ 'ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆ' ತಂತ್ರಾಂಶದ ಮೂಲಕವಷ್ಟೇ ರಫ್ತು ಪರವಾನಗಿ ನೀಡಲಾಗುತ್ತದೆ. ಅದಿರು ಶೇಖರಣೆ ಮತ್ತು ಸಾಗಾಟದಿಂದ ಕರಾವಳಿ ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಕಡ್ಡಾಯವಾಗಿರುತ್ತದೆ. ಬಂದರುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಮತ್ತು ರಾತ್ರಿ ವೇಳೆ ಡ್ರೋನ್ ಮೂಲಕ ನಿಗಾ ಇರಿಸಲಾಗುವುದು. ಪ್ರತಿ ಟನ್ ಅದಿರಿಗೆ 13 ರೂ.ಗಳ ಪರಿಸರ ನಿರ್ವಹಣಾ, ಸುರಕ್ಷತೆ ಮತ್ತು ಮೇಲ್ವಿಚಾರಣಾ ಶುಲ್ಕವನ್ನು ವಿಧಿಸಲು ನಿರ್ಣಯಿಸಲಾಗಿದೆ ಎಂದರು.
ಸಚಿವ ಸಂಪುಟದ ತೀರ್ಮಾನದಿಂದ ಕರಾವಳಿ ಜಿಲ್ಲೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಲಿವೆ. ಜತೆಗೆ ಸರ್ಕಾರದ ಬೊಕ್ಕಸಕ್ಕೆ ನೋಂದಣಿ ಶುಲ್ಕ, ರಫ್ತು ಪರವಾನಗಿ ಶುಲ್ಕ, ವಾರ್ಫೇಜ್ ಶುಲ್ಕ ಮತ್ತು ರಾಯಲ್ಟಿ ರೂಪದಲ್ಲಿ ಬೃಹತ್ ಮೊತ್ತದ ಆದಾಯ ಹರಿದುಬರುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

