ಬೆಂಗಳೂರು ನಿವಾಸಿಗಳಿಗೆ ದೀಪಾವಳಿ ಕೊಡುಗೆ: ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ
ಜಿಬಿಎ ವ್ಯಾಪ್ತಿಯ ನಿವಾಸಿಗಳಿಗೆ ದೀಪಾವಳಿ ಕೊಡುಗೆ ಸಿಕ್ಕಿದ್ದು, ಬಿ-ಖಾತಾ ನಿವೇಶನಗಳಿಗೆ ಎ-ಖಾತಾ ನೀಡಲು ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ನೀಡಲು ತೀರ್ಮಾನಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಿವಾಸಿಗಳಿಗೆ ರಾಜ್ಯ ಸರ್ಕಾರವು ದೀಪಾವಳಿ ಕೊಡುಗೆ ಪ್ರಕಟಿಸಿದೆ. ಬಿ-ಖಾತಾ ಹೊಂದಿರುವ ನಿವೇಶನದಾರರನ್ನು ಎ-ಖಾತಾಗೆ ಪರಿವರ್ತಿಸಲು ಹಾಗೂ ಹೊಸ ನಿವೇಶನದಾರರಿಗೆ ಎ-ಖಾತಾ ನೀಡಲು ತೀರ್ಮಾನಿಸಿದೆ.
2000 ಚದರ ಮೀಟರ್‌ಗಿಂತ ಕಡಿಮೆ ಅಥವಾ ಸಮಾನವಾದ ವಿಸ್ತೀರ್ಣದ ಖಾಲಿ ನಿವೇಶನ ಅಥವಾ ಕಟ್ಟಡ ಹೊಂದಿರುವ ನಿವೇಶನದ ಆಸ್ತಿಗಳಿಗೆ ಎ-ಖಾತಾ ನೀಡಲು ನಿರ್ಧರಿಸಿದೆ. ಈಗಾಗಲೇ ಬಿ-ಖಾತಾ ಹೊಂದಿರುವ ನಿವೇಶನದಾರರು ಎ-ಖಾತಾ ಪಡೆಯಬಹುದು. ಬಿ-ಖಾತಾ ಹೊಂದಿರುವವರು https://bbmp.karnataka.gov.in/BtoAKhata ಅಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಂತೆಯೇ 2000 ಚದರ ಮೀಟರ್ ಮೇಲ್ಪಟ್ಟ ವಿಸ್ತೀರ್ಣಗಳ ನಿವೇಶನಗಳಿಗೆ https://bpas.bbmp.gov.in ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್‌ಲೈನ್ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು. ನಾಗರಿಕರಿಗೆ ಸುಲಭವಾಗಬೇಕೆಂಬ ಉದ್ದೇಶದಿಂದ ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ವೆಬ್‌ಸೈಟ್ ಸಿದ್ದಪಡಿಸಲಾಗಿದ್ದು, ನಿಮಗೆ ಅನುಕೂಲವಾಗುವ ಭಾಷೆ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
25 ಲಕ್ಷ ಆಸ್ತಿ ಖಾತಾಗಳು
ಬೆಂಗಳೂರು ನಗರದಲ್ಲಿ ಸುಮಾರು 25 ಲಕ್ಷ ಆಸ್ತಿ ಖಾತಾಗಳಿವೆ. ಅದರಲ್ಲಿ ಸುಮಾರು 7.5 ಲಕ್ಷ ಬಿ-ಖಾತಾ ಮತ್ತು 17.5 ಲಕ್ಷ ಎ-ಖಾತಾಗಳಿವೆ. ಅಲ್ಲದೆ. ಅನುಮೋದನೆಗಳಿಲ್ಲದ ಮತ್ತು ಬಿ-ಖಾತಾ ಪಡೆಯಲು ಮುಂದೆ ಬರದ ಸುಮಾರು 7-8 ಲಕ್ಷ ಆಸ್ತಿ ಮತ್ತು ನಿವೇಶನದಾರರು ಇದ್ದಾರೆ. ಅವುಗಳಿಗೆ ಖಾತಾ ಇಲ್ಲ. ಇಂತಹವುಗಳಿಗೆ ಇನ್ನೂ ಮುಂದೆ ಖಾತಾ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.
ಕೆಟಿಸಿಪಿ ಕಾಯ್ದೆ 1961 ರಡಿಯಲ್ಲಿ ಅನುಮೋದನೆಗಳಿಲ್ಲದೆ ಕೃಷಿ ಭೂಮಿಯಲ್ಲಿ ರಚಿಸಲಾದ ಕಂದಾಯ ನಿವೇಶನಗಳಿಗೆ ಬಿ-ಖಾತಾ ನೀಡಲಾಗಿದೆ. ಕೆಟಿಸಿಪಿ ಕಾಯ್ದೆ 1961 ರಡಿಯಲ್ಲಿ ಅನುಮೋದನೆಯಿಲ್ಲದೆ ಕೃಷಿಯೇತರ ಭೂಮಿಯಲ್ಲಿ ಯಾವುದೇ ನಿವೇಶನಗಳಿಗೆ ಬಿ-ಖಾತಾ ನೀಡಲಾಗುತ್ತಿದೆ. ಕಟ್ಟಡ ಯೋಜನೆ ಅನುಮೋದನೆ ಇಲ್ಲದೆ ನಿರ್ಮಿಸಲಾದ ಫ್ಲಾಟ್‌ಗಳು ಮತ್ತು ಬಹುಮಹಡಿ ಘಟಕಗಳಿವೆ ಎಂದು ಹೇಳಲಾಗಿದೆ.
ಬಿ-ಖಾತಾ ಮಾಲೀಕರ ಸಮಸ್ಯೆ ಏನು?
ಬಿ-ಖಾತಾ ನಿವೇಶನ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸಿಗುವುದಿಲ್ಲ. ಬಿ-ಖಾತಾ ಅನಧಿಕೃತ ಆಸ್ತಿಯಾಗಿದ್ದು, ಅದನ್ನು ನಿಯಂತ್ರಿಸಲಾಗುವುದಿಲ್ಲ. ಅನೇಕ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಬಿ-ಖಾತಾವನ್ನು ಸಾಲ ಇತ್ಯಾದಿ ಉದ್ದೇಶಗಳಿಗಾಗಿ ಲೇಔಟ್ ಯೋಜನೆಗಳಾಗಿ ಗುರುತಿಸುವುದಿಲ್ಲ. ಕಟ್ಟಡ ಯೋಜನೆಗಳು ಅಲ್ಲಿರುವುದಿರಲ್ಲ. ಒಂದೆಡೆ ನಾಗರಿಕರು ಬಳಲುತ್ತಿದ್ದಾರೆ, ಮತ್ತೊಂದೆಡೆ ಬೆಂಗಳೂರು ನಗರ ಪಾಲಿಕೆಗಳು ಅನಿಯಂತ್ರಿತ, ಅನಧಿಕೃತ ಮಾರಾಟ ಮತ್ತು ಅಕ್ರಮ ಆಸ್ತಿಗಳ ಸೃಷ್ಟಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಬಿಎ ಮೂಲಗಳು ಹೇಳಿವೆ.
ಹೀಗಾಗಿ ಒಂದು ಬಾರಿ ಇತ್ಯರ್ಥವಾಗಿ ಎಲ್ಲಾ ಬಿ-ಖಾತಾ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಮತ್ತು ಬೆಂಗಳೂರು ನಗರ ಪಾಲಿಕೆಗಳಿಂದ ಸಿಂಗಲ್ ಪ್ಲಾಟ್' ಅನುಮೋದನೆಯನ್ನು ಪಡೆಯಲು ಮತ್ತು ಬಿ-ಖಾತಾವನ್ನು ಸ್ವಯಂಚಾಲಿತವಾಗಿ ಎ-ಖಾತಾ ಆಗಿ ಪರಿವರ್ತಿಸಲು ಅವಕಾಶವನ್ನು ನೀಡಲಾಗುತ್ತಿದೆ.
2000 ಚ.ಮೀ.ವರೆಗಿನ ಎ-ಖಾತಾಗೆ ಅರ್ಜಿ ಸಲ್ಲಿಸುವ ವಿಧಾನ
* ಮೊಬೈಲ್ ಮತ್ತು ಓಟಿಪಿ ಬಳಸಿ : https://bbmp.karnataka.gov.in/BtoAKhata ರಲ್ಲಿ ಲಾಗಿನ್ ಆಗಿ karnataka.gov.inನಲ್ಲಿ ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಬಹುದು.
* ಎ ಖಾತಾ ಆಗಿ ಪರಿವರ್ತಿಸಬೇಕಾದ ಅಂತಿಮ ಬಿ-ಖಾಟಾದ ePID ನಮೂದಿಸಬೇಕು.
* ಎಲ್ಲಾ ಮಾಲೀಕರ ಆಧಾರ್ ದೃಢೀಕರಣ.
* ನಿವೇಶನ ಮುಂಭಾಗದ ರಸ್ತೆ "ಸಾರ್ವಜನಿಕ ರಸ್ತೆ" ಆಗಿರಬೇಕು. "ಖಾಸಗಿ ರಸ್ತೆ" ಆಗಿದ್ದರೆ ನಾಗರಿಕರು "ಸಾರ್ವಜನಿಕ ರಸ್ತೆ' ಗೆ ಪರಿವರ್ತಿಸಲು ಒಪ್ಪಿಗೆ ನೀಡಬೇಕು.
* ಪರಿವರ್ತಿತ ಮತ್ತು ಪರಿವರ್ತಿಸದ ಎರಡೂ ರೀತಿಯ ನಿವೇಶನಗಳು ಅರ್ಜಿ ಸಲ್ಲಿಸಬಹುದು (ಫ್ಲಾಟ್‌ಗಳು ಅರ್ಹವಲ್ಲ).
* ಸ್ಥಳ ಮತ್ತು ಇತರ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
* ಸ್ವೀಕೃತಿಯನ್ನು ಮುದ್ರಿಸಬೇಕು.
* ನಗರ ಪಾಲಿಕೆ ಸ್ಥಳ ಭೇಟಿ ಮತ್ತು ದೃಢೀಕರಣ ಮಾಡಲಿದೆ. ಅಗತ್ಯವಿದ್ದರೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಬಹುದು.
* ಅರ್ಹತೆ ಇದ್ದರೆ ಸೈಟ್‌ನ ಮಾರ್ಗದರ್ಶನ ಮೌಲ್ಯದ ಶೇ. 5 ರಷ್ಟು ಶುಲ್ಕವನ್ನುಆನ್‌ಲೈನ್‌ನಲ್ಲಿ ಪಾವತಿಸುವುದು.
* ಆಯುಕ್ತರ ಅನುಮೋದನೆಯ ನಂತರ ಸಾಫ್ಟ್‌ವೇರ್ ವ್ಯವಸ್ಥೆಯಿಂದ ಸ್ವಯಂಚಾಲಿತ ಅನುಮೋದನೆ ನೀಡಲಾಗುತ್ತದೆ.
* ಬಿ-ಖಾತಾದಿಂದ ಎ-ಖಾತಾಗೆ ಸ್ವಯಂಚಾಲಿತ ಪರಿವರ್ತನೆ.
2000 ಚ.ಮೀ.ಗೂ ಹೆಚ್ಚಿನ ನಿವೇಶನಕ್ಕೆ ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ
* ನೋಂದಾಯಿತ ವಾಸ್ತುಶಿಲ್ಪಿ ಅಥವಾ ಎಂಜಿನಿಯರ್ ಅವರನ್ನು ಸಂಪರ್ಕಿಸಿ https://bpas. bbmpgov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
* ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಅಪ್ ಲೋಡ್ ಮಾಡಬೇಕು.
* ಆರಂಭಿಕ ಪರಿಶೀಲನಾ ಶುಲ್ಕ 500 ರೂ. ಅನ್ನು ಪಾವತಿಸಬೇಕು.
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. (ಫ್ಲಾಟ್ ಗಳಿಗೆ ಅರ್ಹತೆಯಿಲ್ಲ)
* ಪಾಲಿಕೆಯಿಂದ ನಿವೇಶನ ಪರಿಶೀಲನೆ.
* ಅರ್ಹತೆಯ ಪ್ರಕಾರ ಅನುಮೋದನೆ.
* ಅನ್ವಯವಾಗುವ ಶುಲ್ಕಗಳ ಪಾವತಿ.
* ಏಕ ಪ್ಲಾಟ್ ಅನುಮೋದನೆ ಪ್ರಮಾಣಪತ್ರ ಮತ್ತು ಡ್ರಾಯಿಂಗ್ ಬಿಡುಗಡೆ. ಆ ನಂತರ ಬಿ-ಖಾತಾ ಸ್ವಯಂಚಾಲಿತವಾಗಿ ಎ-ಖಾತಾ ಆಗಿ ಪರಿವರ್ತನೆಗೊಳ್ಳುತ್ತದೆ.