TUSK TRIMMING | ಗುಂಡ್ರೆ ಅರಣ್ಯದಲ್ಲಿ ನಡೆಯಿತು 'ಆಪರೇಷನ್ ದಂತಮೋಚನ'!
ನೆಲಕ್ಕೆ ತಾಗುತ್ತಿದ್ದ ಎರಡೂ ದಂತಗಳನ್ನು ಸುಮಾರು ಅರ್ಧದಷ್ಟು ತುಂಡು ಮಾಡಿದ ಬಳಿಕ ಆನೆ ಸರಾಗವಾಗಿ ನೆಲದ ಮೇಲಿನ ಹುಲ್ಲು, ಸೊಪ್ಪು, ಸದೆ ತಿನ್ನುವಂತಾಯಿತು. ಆ ಮೂಲಕ ಆನೆಯ ದಂತ ಮೋಚನ ಆಪರೇಷನ್ ಸಕ್ಸಸ್ ಆಗಿದಂತಾಗಿದೆ.;
ಇದೊಂದು ಆಪರೇಷನ್ ದಂತಮೋಚನ ಸ್ಟೋರಿ. ಹುಲುಸಾಗಿ ಉದ್ದುದ್ದ ಬೆಳೆದು ಹೆಣೆದುಕೊಂಡಿದ್ದ ದಂತಗಳು, ಹೊಟ್ಟೆ ತುಂಬಿಸಿಕೊಳ್ಳಲು ಅಡ್ಡಿಯಾಗಿ ಹಸಿವು ನೀಗಿಸಿಕೊಳ್ಳಲು ಕಂಡವರ ತೋಟ- ಜಮೀನಿಗೆ ನುಗ್ಗಿ ಕದ್ದು ಮೇಯುತ್ತಿದ್ದ ಮದ್ದಾನೆಗೂ, ಆನೆಯ ಉಪಟಳದಿಂದ ರೋಸಿಹೋಗಿದ್ದ ಕಾಡಂಚಿನ ಜನರಿಗೂ ಬಿಡುಗಡೆ ಕೊಟ್ಟ ಆಪರೇಷನ್ ದಂತಮೋಚನದ ಪಾಸಿಟಿವ್ ಸುದ್ದಿ ಇದು.
ಹೌದು, ದಂತಗಳು ಉದ್ದುದ್ದ ಬೆಳೆದು ಹೆಣೆದುಕೊಂಡು, ನೆಲಕ್ಕೆ ತಾಕುತ್ತಿದ್ದರಿಂದ ಬೃಹತ್ ಗಾತ್ರದ ಕಾಡಾನೆಗೆ ಸೊಂಡಿಲು ಆಡಿಸಲು ಮತ್ತು ಆ ಮೂಲಕ ನೆಲದ ಮೇಲಿನ ಮೇವು ತಿನ್ನುವುದೇ ದುಸ್ತರವಾಗಿತ್ತು. ಅದರಲ್ಲೂ ಈ ಬಿರುಬೇಸಿಗೆಯಲ್ಲಿ ಕಾಡಿನ ಗಿಡಗಂಟೆಗಳೆಲ್ಲಾ ಎಲೆಯುದುರಿ ಬಣಗುಡುವಾಗ ಕೆರೆಕಟ್ಟೆ, ಹೊಳೆ-ನದಿ ತಟದ ನೆಲಮಟ್ಟದ ಹುಲ್ಲೇ ಕಾಡು ಪ್ರಾಣಿಗಳಿಗೆ ಆಸರೆ. ಆದರೆ, ಈ ಆನೆಗೆ ನೆಲಮಟ್ಟದ ಹುಲ್ಲು ಮೇಯ್ದು ಬದುಕುವುದು ಕೂಡ ಆ ಉದ್ದುದ್ದ ದಂತಗಳಿಂದಾಗಿ ಸವಾಲಾಗಿತ್ತು.
ಹಾಗಾಗಿ ಅದು, ಎತ್ತರದ ಗಿಡ ಮರ ಬೆಳೆ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಅದರಲ್ಲೂ ರೈತರ ಹೊಲಗಳಿಗೆ ನುಗ್ಗಿ ಬಾಳೆ, ತೆಂಗು, ಹಲಸು ಮುಂತಾದ ಮರಗಳನ್ನು ಸೊಂಡಿಲಿನಲ್ಲಿ ಬಗ್ಗಿಸಿ ತಿನ್ನುವ ಅಭ್ಯಾಸ ಬೆಳೆಸಿಕೊಂಡಿತ್ತು. ಆನೆಯ ಈ ದಂತ ಸಮಸ್ಯೆ, ಕಾಡಿನ ಸುತ್ತಮುತ್ತಲ ಪ್ರದೇಶದ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿತ್ತು. ಈ ಆನೆಯ ಉಪಟಳದಿಂದ ಬೇಸತ್ತ ಕಾಡಂಚಿನ ರೈತರು ಅರಣ್ಯ ಇಲಾಖೆಯ ಮೊರೆಹೋಗಿದ್ದರು.
ಎಚ್ ಡಿ ಕೋಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತಲ ಹಳ್ಳಿಗಳಲ್ಲಿ ಈ ಆನೆಯ ʼದಂತಕತೆʼ ಕುಖ್ಯಾತಿ ಗಳಿಸಿತ್ತು. ಗುಂಡ್ರೆ ವನ್ಯಜೀವಿ ವಲಯ ವ್ಯಾಪ್ತಿಯ ನಾಯಿಹಳ್ಳ, ಗೆಂಡತ್ತೂರು ಮತ್ತಿತರ ಗ್ರಾಮಗಳಲ್ಲಿ ಆನೆಯ ಉಪಟಳವನ್ನು ಗಮನಿಸಿದ ಅರಣ್ಯ ಇಲಾಖೆ, ಏಕ ಕಾಲಕ್ಕೆ ಆನೆಯ ದಂತ ಸಮಸ್ಯೆಯನ್ನೂ, ಅದರಿಂದಾಗಿ ರೈತರಿಗೆ ಆಗುತ್ತಿರುವ ಉಪಟಳವನ್ನೂ ನಿವಾರಿಸುವ ಕಾರ್ಯಕ್ಕೆ ಮುಂದಾಗಿತ್ತು.
ಆನೆ ಸೆರೆ ಹಿಡಿದು ದಂತಮೋಚನ
ಅಂತಹ ಕಾರ್ಯತಂತ್ರದ ಭಾಗವಾಗಿ, ಮೊದಲು ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟದ ಬಳಿ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸೆರೆ ಕಾರ್ಯಾಚರಣೆಯಲ್ಲಿ ಸಾಕಾನೆಗಳಾದ ಭೀಮ ಮತ್ತು ಅಭಿಮನ್ಯುವನ್ನು ಬಳಸಿಕೊಳ್ಳಲಾಗಿತ್ತು.
ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಇಲಾಖೆ, ತಜ್ಞ ವನ್ಯಜೀವಿ ವೈದ್ಯರು ಮತ್ತಿತರರ ನೆರವಿನೊಂದಿಗೆ ಆನೆಯ ಎರಡೂ ದಂತಗಳನ್ನು ತುಂಡರಿಸಿದೆ. ನೆಲಕ್ಕೆ ತಾಗುತ್ತಿದ್ದ ಎರಡೂ ದಂತಗಳನ್ನು ಸುಮಾರು ಅರ್ಧದಷ್ಟು ತುಂಡು ಮಾಡಲಾಗಿದೆ. ಬಳಿಕ ಆನೆ ಸರಾಗವಾಗಿ ನೆಲದ ಮೇಲಿನ ಹುಲ್ಲು, ಸೊಪ್ಪುಸದೆ ತಿನ್ನುವಂತಾಯಿತು. ಆ ಮೂಲಕ ಆನೆಯ ದಂತ ಮೋಚನ ಆಪರೇಷನ್ ಸಕ್ಸಸ್ ಆಗಿದಂತಾಗಿದೆ.
ದಂತ ಮೋಕ್ಷ ಕಾರ್ಯಾಚರಣೆ ಮುಗಿದ ಬಳಿಕ ಆನೆಯ ಆರೈಕೆ ಮಾಡಿ, ಕೆಲವು ದಿನಗಳ ಬಳಿಕ ಗುಂಡ್ರೆ ವನ್ಯಜೀವಿ ವಲಯದ ನಾಯಿಹಳ್ಳ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕಾಡಿಗೆ ಬಿಡಲಾಗಿದೆ. ದಂತ ಕತ್ತರಿಸಿರುವುದರಿಂದ ಅದು ಇನ್ನು ಮೇವು ತಿನ್ನಲು ಸಮಸ್ಯೆಯಾಗುವುದಿಲ್ಲ. ಹಾಗಾಗಿ ಎತ್ತರದ ಆಹಾರ ಹುಡುಕಿಕೊಂಡು ರೈತರ ಜಮೀನಿಗೆ ಬರಲಾರದು. ಸದ್ಯ ಆನೆಯ ಚಲನವಲನದ ಮೇಲೆ ನಿಗಾ ಇರಿಸಿದ್ದು, ಈವರೆಗೆ ಅದು ಜಮೀನುಗಳಿಗೆ ಬಂದಿಲ್ಲ. ಹಾಗಾಗಿ ರೈತರು ಆತಂಕಪಡಬೇಕಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟಾರೆ, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಕಾಲಿಕ ಕ್ರಮದಿಂದಾಗಿ ಅತ್ತ ಆನೆಯ ದಂತ ಸಮಸ್ಯೆಯೂ ಬಗೆಹರಿದಿದೆ. ಇತ್ತ ರೈತರ ಬೆಳೆ ನಷ್ಟದ ಆತಂಕವೂ ದೂರವಾಗಿದೆ.
ಕಾರ್ಯಾಚರಣೆಯ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ವನ್ಯಜೀವಿ ಸಂರಕ್ಷಕ, ಹಿರಿಯ ಪತ್ರಕರ್ತ ಜೋಸೆಫ್ ಹೂವರ್, "ಆನೆಗಳಿಗೆ ದಂತಗಳು ಉದ್ದ ಬೆಳೆದು ಎರಡು ಹೆಣೆದುಕೊಂಡಾಗ ಅವುಗಳ ಸೊಂಡಿಲನ್ನು ಬಳಸಲು ಅಡಚಣೆಯಾಗುತ್ತದೆ. ಅಲ್ಲದೆ ಓಡಾಟಕ್ಕೂ ಅದು ತೊಂದರೆ ಕೊಡುತ್ತದೆ. ಆನೆಗಳ ಆಹಾರ ಸಂಗ್ರಹ ಸೇರಿದಂತೆ ಹಲವು ಚಟುವಟಿಕೆಗೆ ಸೊಂಡಿಲೇ ಮುಖ್ಯ. ಹಾಗಾಗಿ ಹೆಣೆದುಕೊಂಡ ದಂತಗಳಿಂದಾಗಿ ಕೆಲವೊಮ್ಮೆ ಆನೆಗಳ ಜೀವಕ್ಕೇ ಅಪಾಯ ಉಂಟಾಗುತ್ತದೆ. ಹಾಗಾಗಿ ಅದನ್ನು ವೈಜ್ಞಾನಿಕವಾಗಿ ವನ್ಯಜೀವಿ ವೈದ್ಯರ ಸಲಹೆ ಮೇರೆಗೆ ತುಂಡರಿಸಲಾಗುತ್ತದೆ. ವನ್ಯಜೀವಿ ಕಾಯ್ದೆಯಡಿ ಅದು ಮಾನ್ಯ ಕೂಡ" ಎಂದು ಮಾಹಿತಿ ನೀಡಿದರು.
ಅಲ್ಲದೆ, "ವಾಸ್ತವವಾಗಿ ಆನೆಯನ್ನು ಸೆರೆ ಹಿಡಿದದ್ದು ಅದು ರೈತರ ಜಮೀನಿಗೆ ನುಗ್ಗಿ ಉಪಟಳ ಕೊಡುತ್ತಿದೆ ಎಂಬ ಕಾರಣಕ್ಕೆ. ಆದರೆ, ಅದನ್ನು ಸೆರೆ ಹಿಡಿದ ಬಳಿಕ ಅದಕ್ಕೆ ಇರುವ ಈ ದಂತ ಸಮಸ್ಯೆಯಿಂದಾಗಿ ಅದು ನೆಲಮಟ್ಟದ ಆಹಾರ ಸೇವಿಸಲಾಗದೆ ಅನಿವಾರ್ಯವಾಗಿ ರೈತರ ಜಮೀನಿಗೆ ನುಗ್ಗಿ ಉಪಟಳ ಕೊಡುತ್ತಿದೆ ಎಂಬ ಸಂಗತಿ ಗೊತ್ತಾಯಿತು. ಹಾಗಾಗಿ ಅದರ ದಂತ ಮೋಚನ ಅಥವಾ ಟಸ್ಕ್ ಟ್ರಿಮ್ಮಿಂಗ್‌ಗೆ ನಿರ್ಧರಿಸಲಾಯಿತು" ಎಂಬ ಸಂಗತಿಯನ್ನೂ ಹೋವರ್ ಅವರು ತಿಳಿಸಿದರು.
ಏನಿದು ದಂತಮೋಚನ ಆಪರೇಷನ್?
ವಯಸ್ಕ ಗಂಡಾನೆಗಳಿಗೆ ದಂತಗಳು ತೀರಾ ಉದ್ದ ಬೆಳೆದು ಒಂದಕ್ಕೊಂದು ಹೆಣೆದುಕೊಳ್ಳುತ್ತವೆ. ಆಗ ಅವುಗಳ ಬಹಳ ಮುಖ್ಯ ಅಂಗವಾದ ಸೊಂಡಿಲನ್ನು ಸರಾಗಿ ಬಳಸಲು ಆಗುವುದಿಲ್ಲ. ಹಾಗಾಗಿ ಅವುಗಳಿಗೆ ನೆಲದ ಮೇಲಿನ ಹಸಿರು, ಹಣ್ಣುಕಾಯಿ ತಿನ್ನಲು ತೊಡಕಾಗುತ್ತದೆ ಮತ್ತು ಅವುಗಳ ಸರಾಗ ಓಡಾಟಕ್ಕೂ ಈ ಹೆಣೆದ ದಂತಗಳು ಬಹಳಷ್ಟು ಅಡ್ಡಿಪಡಿಸುತ್ತವೆ. ಹಾಗಾಗಿ ಅವುಗಳ ದಂತಗಳನ್ನು ಕತ್ತರಿಸಿ ಅವುಗಳ ಆಹಾರ ಸೇವನೆಗೆ ಮುಕ್ತ ಅವಕಾಶ ಸಿಗುವಂತೆ ಮಾಡಲಾಗುತ್ತದೆ.
ದಂತಗಳ ಉದ್ದ, ದಪ್ಪ ಮತ್ತು ಆನೆಯ ಅಂದಾಜು ವಯಸ್ಸಿನ ಆಧಾರದ ಮೇಲೆ ದಂತ ಕಡಿತದ ಪ್ರಮಾಣ ಮತ್ತು ಗಾತ್ರವನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿ ತಜ್ಞ ವೈದ್ಯರು, ವನ್ಯಜೀವಿ ತಜ್ಞರ ಸಲಹೆ ಪಡೆಯಲಾಗುತ್ತದೆ. ಹಾಗೇ ವೈಜ್ಞಾನಿಕವಾಗಿ ದಂತ ಮೋಚನ(ದಂತ ಕಟಾವು)ವನ್ನು ನಿರ್ಧರಿಸಲಾಗುತ್ತದೆ. ಇದನ್ನೇ ಇಂಗ್ಲಿಷಿನಲ್ಲಿ tusk trimming (ಟಸ್ಕ್ ಟ್ರಿಮ್ಮಿಂಗ್) ಎಂದು ಕರೆಯಲಾಗುತ್ತದೆ.