ಜಾತಿಗಣತಿ : ಆನ್‌ಲೈನ್ ಮಾಹಿತಿ ನೋಂದಣಿ ಅವಧಿ ನ.30 ರವರೆಗೆ ವಿಸ್ತರಣೆ

ಜಾತಿ ಗಣತಿಯಲ್ಲಿಭಾಗವಹಿಸಲು ಸಾಧ್ಯವಾಗದಿದ್ದ ಸಾರ್ವಜನಿಕರಿಗೆ ಕೊನೆಯ ಅವಕಾಶ ನೀಡಿದ್ದು, ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸುವ ಅವಧಿಯನ್ನು ನ.30 ರವರೆಗೆ ವಿಸ್ತರಣೆ ಮಾಡಿದ ಆಯೋಗ

Update: 2025-11-11 14:53 GMT

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಗಣತಿ) ಈ ಹಿಂದೆ ಭಾಗವಹಿಸಲು ಸಾಧ್ಯವಾಗದಿದ್ದ ಸಾರ್ವಜನಿಕರಿಗೆ ಸರ್ಕಾರವು ಕೊನೆಯ ಅವಕಾಶವನ್ನು ನೀಡಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣಾ ರೂಪದಲ್ಲಿ ಮಾಹಿತಿ ಸಲ್ಲಿಸಲು ಅಂತಿಮ ಗಡುವನ್ನು ನ.30 ರವರೆಗೆ ವಿಸ್ತರಿಸಿ ಆಯೋಗವು ಅಧಿಕೃತವಾಗಿ ಪ್ರಕಟಿಸಿದೆ.

ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಎಸ್‌ಸಿ/ಎಸ್‌ಟಿ ಮತ್ತು ಇತರೆ ಎಲ್ಲಾ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯಲು ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ವಿವಿಧ ಕಾರಣಗಳಿಂದಾಗಿ ಅನೇಕರು ಈ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅಂತಹವರಿಗಾಗಿಯೇ ಆನ್‌ಲೈನ್ ಮೂಲಕ ಮಾಹಿತಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಈ ಹಿಂದೆ ನ.10ರವರೆಗೆ ಗಡುವು ನೀಡಲಾಗಿತ್ತು. ಇದೀಗ, ಎಲ್ಲರಿಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ದೃಷ್ಟಿಯಿಂದ, ಗಡುವನ್ನು ನ. 30 ಕ್ಕೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಆಯೋಗವು ತಿಳಿಸಿದೆ. 

ಸಮೀಕ್ಷೆಯಿಂದ ಹೊರಗುಳಿದಿರುವ ನಾಗರಿಕರು https://kscbcselfdeclaration.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ನಿಖರ ಮಾಹಿತಿಯನ್ನು ನಮೂದಿಸಬಹುದಾಗಿದೆ. ಇದು ಮಾಹಿತಿ ನೀಡಲು ಇರುವ ಕೊನೆಯ ಅವಕಾಶವಾಗಿರುವುದರಿಂದ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಗ ಮನವಿ ಮಾಡಿದೆ.

ರಾಜ್ಯದಲ್ಲಿ ಸೆ.22ರಿಂದ ಆರಂಭವಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮನೆ ಮನೆ ಗಣತಿ ಕಾರ್ಯಕ್ಕೆ ತೆರೆಬಿದ್ದಿದೆ. ಗಣತಿಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವವರಿಗಾಗಿ ನ.10ರ ವರೆಗೆ ಆನ್‌ಲೈನ್‌ ಸಮೀಕ್ಷೆ ಅವಧಿ ವಿಸ್ತರಣೆ ಮಾಡಲಾಗಿತ್ತು. 

Tags:    

Similar News