ನಾಯಿಗಳ ನಿಖರ ಸಂಖ್ಯೆ, ಸ್ಥಳ, ಆರೋಗ್ಯ ಸ್ಥಿತಿಯ ಮಾಹಿತಿಯ ವರದಿ ಸಲ್ಲಿಕೆಗೆ ಸೂಚನೆ
ಶಾಲಾ-ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳ ಮಾಹಿತಿ ನೀಡುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ನಿರ್ದೇಶನ
ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ನಾಯಿಗಳ ನಿಖರ ಸಂಖ್ಯೆ, ಸ್ಥಳ ಮತ್ತು ಅವುಗಳ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಬೀದಿ ನಾಯಿಗಳ ಹಾವಳಿ ಮತ್ತು ಬೀದಿ ನಾಯಿಗಳ ನಿರ್ವಹಣೆ ಸಂಬಂಧ ಸಭೆ ನಡೆಸಿದ ಅವರು, ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಹಾಗೂ ಬೀದಿ ನಾಯಿಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ನಿಯಂತ್ರಣ, ಪ್ರಾಣಿಗಳ ಕಲ್ಯಾಣ ಹಾಗೂ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆದ್ಯತೆಯ ಮೇರೆಗೆ ಶಾಲಾ-ಕಾಲೇಜುಗಳ ಆವರಣ, ಆಸ್ಪತ್ರೆ, ಸರ್ಕಾರಿ ಕಚೇರಿಗಳ ಆವರಣ, ರೈಲ್ವೆ ನಿಲ್ದಾಣ ಹಾಗೂ ಆಟದ ಮೈದಾನಗಳಲ್ಲಿನ ಬೀದಿ ನಾಯಿಗಳ ಮಾಹಿತಿ ಕಲೆ ಹಾಕುವಂತೆ ನಿರ್ದೇಶನ ನೀಡಿದರು.
ಈ ಕಾರ್ಯವನ್ನು ಆರೋಗ್ಯ, ಶಿಕ್ಷಣ, ಸಾರಿಗೆ, ಯೋಜನೆ ಹಾಗೂ ರೈಲ್ವೆ ಇಲಾಖೆಗಳು ಸಮನ್ವಯ ಸಾಧಿಸಿ, ಯಾವುದೇ ಸಮಸ್ಯೆಗಳಾಗದಂತೆ ಗಮನಹರಿಸಬೇಕು. ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮತ್ತು ಆರೈಕೆಗೆ ಸೂಕ್ತವಾದ ಸ್ಥಳವನ್ನು ಗುರುತಿಸಬೇಕು. ಈ ಪ್ರಕ್ರಿಯೆಯನ್ನು ಬೆಂಗಳೂರು ನಗರ ಜಿಲ್ಲಾಡಳಿತದ ಸಹಕಾರದೊಂದಿಗೆ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಪಶುಸಂಗೋಪನೆ ಇಲಾಖೆಯ ಸಹಯೋಗದೊಂದಿಗೆ ಉದ್ದೇಶಿತ ಸ್ಥಳಾಂತರ ಮಾಡಲಾಗುವ ಬೀದಿ ನಾಯಿಗಳ ಆಶ್ರಯ ತಾಣಗಳ ನಿರ್ವಹಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ನಿರ್ವಹಣೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಗಳಲ್ಲಿ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಶಿಕ್ಷಣ ಸಂಸ್ಥೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಆಸ್ಪತ್ರೆಗಳಂತಹ ಹೆಚ್ಚು ಅಪಾಯವಿರುವ ಪ್ರದೇಶಗಳಿಂದ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ಶೆಲ್ಟರ್‌ಗಳಿಗೆ ಸಾಗಿಸಬೇಕು. ಅಲ್ಲಿ ಅವುಗಳಿಗೆ ಲಸಿಕೆ ಹಾಕಬೇಕು ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಯಂತ್ರಿಸಬೇಕು ಎಂದು ತಿಳಿಸಿದೆ.
ಸಹಾಯವಾಣಿ ನೆರವು ಪಡೆಯಲು ಸೂಚನೆ
ನ್ಯಾಯಾಲಯದ ಆದೇಶದ ಬಳಿಕ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡಿದೆ. ಆಕ್ರಮಣಕಾರಿ ನಾಯಿಗಳ ನಿರ್ವಹಣೆಗಾಗಿ ದೂರುಗಳನ್ನು ದಾಖಲಿಸಲು ಉಚಿತ ಸಹಾಯವಾಣಿ ಇದೆ. ನಾಯಿ-ಮಾನವ ಸಂಘರ್ಷವನ್ನು ಕಡಿಮೆ ಮಾಡಲು 400 ನಾಯಿ ಆಹಾರ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. 88,572 ರೇಬಿಸ್ ಲಸಿಕೆ ಹಾಕಲಾಗಿದ್ದು, 2024-25ರಲ್ಲಿ 35,891 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 21 ನಾಯಿ ಹಿಡಿಯುವ ವಾಹನಗಳಿದ್ದು, ಪಶು ಸಂಗೋಪನಾ ಇಲಾಖೆಯಿಂದ ಪ್ರತಿ 5 ವರ್ಷಕ್ಕೊಮ್ಮೆ ಬೀದಿ ನಾಯಿಗಳ ಗಣತಿ ಮಾಡಲಾಗುತ್ತದೆ. 2019ರ ಗಣತಿ ಪ್ರಕಾರ ಪುರಸಭೆಗಳ ವ್ಯಾಪ್ತಿಯಲ್ಲಿ ಅಂದಾಜು 3,03,303 ಬೀದಿ ನಾಯಿಗಳಿದ್ದು,ಅವುಗಳನ್ನು ಹಿಡಿಯಲು ಮತ್ತು ಸಾಗಿಸಲು 197 ವಿಶೇಷ ವಿನ್ಯಾಸದ ವಾಹನಗಳು ಮತ್ತು ಪಂಜರಗಳಿವೆ. ಬೀದಿ ನಾಯಿಗಳ ವಸತಿಗಾಗಿ 91 ಡಾಗ್ ಪೌಂಡ್‌ಗಳನ್ನು ಸ್ಥಾಪಿಸಲಾಗಿದೆ. ಪುರಸಭೆಗಳಾದ್ಯಂತ 301 ನಾಯಿ ಹಿಡಿಯುವ ಸಿಬ್ಬಂದಿ ನಿಯೋಜಿಸಲಾಗಿದ್ದು, ಸಾಮೂಹಿಕ ಬಂಜೆತನ ಅಭಿಯಾನದ ಮೂಲಕ 60,662 ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಾಯಿಗಳ ದಾಳಿ ಕುರಿತು ಎಲ್ಲಾ ಪುರಸಭೆಗಳಲ್ಲಿ ಸಹಾಯವಾಣಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜನವರಿ 2025ರಿಂದ ಇಲ್ಲಿಯವರೆಗೆ 4,026 ದೂರುಗಳನ್ನು ಸ್ವೀಕರಿಸಿ ತಕ್ಷಣವೇ ಪರಿಹರಿಸಲಾಗಿದೆ ಎಂದು ಹೇಳಿದೆ.