ವಾರದಲ್ಲಿ ಐದು ದಿನ ಮಾತ್ರ ಕೆಲಸ: ಏಳನೇ ವೇತನ ಆಯೋಗದ ಶಿಫಾರಸು
ಸಿಎಂ ಸಿದ್ದರಾಮಯ್ಯರನ್ನು ಶನಿವಾರ ಭೇಟಿಯಾಗಿರುವ ಆಯೋಗವು 244 ಪುಟಗಳ ತನ್ನ ವರದಿ ಸಲ್ಲಿಸಿದ್ದು, ನೌಕರರ ಆರಂಭಿಕ ಕನಿಷ್ಠ ವೇತನವನ್ನು 27 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ.;
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹು ನಿರೀಕ್ಷಿತ ಏಳನೇ ವೇತನ ಆಯೋಗದ ವರದಿಯು ಶನಿವಾರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಆಯೋಗವು ಶೇ. 31 ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜೊತೆಗೆ, ಮೂಲವೇತನದ ಮೇಲೆ ಶೇ.27.5ರಷ್ಟು ಹೆಚ್ಚಿಸಬೇಕು ಎಂದು ಶಿಫಾರಸು ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿರುವ ಆಯೋಗವು 244 ಪುಟಗಳ ತನ್ನ ವರದಿಯನ್ನು ಸಲ್ಲಿಸಿದ್ದು, ನೌಕರರ ಆರಂಭಿಕ ಕನಿಷ್ಠ ವೇತನವನ್ನು 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಟ ವೇತನವನ್ನು 1,04,600 ರೂ.ಗಳಿಂದ 1,67,200 ರೂ.ಗಳಿಗೆ ಹೆಚ್ಚಿಸಬೇಕು. ಮೂಲ ವೇತನದ ಶೇ. 50 ರಷ್ಟು ತಿಂಗಳ ಪಿಂಚಣಿಯನ್ನೂ, ಕುಟುಂಬದ ಪಿಂಚನಿಯನ್ನು ಶೇ. 30 ರಷ್ಟು ಹೆಚ್ಚಿಸಲು ಮತ್ತು ಕನಿಷ್ಟ ಪಿಂಚಣಿ 13,500 ರೂ.ಗಳಿಂದ ಗರಿಷ್ಟ 1,20,600 ರೂ.ವರೆಗೆ ಪರಿಷ್ಕರಿಸಲು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಸರ್ಕಾರಿ ನೌಕರರ ಕುಟುಂಬದ ಸದಸ್ಯರಿಗೆ ಅನಾರೋಗ್ಯದ ವೇಳೆ ಆರೈಕೆ ಮಾಡಲು ಶೇ. 50 ವೇತನದೊಂದಿಗೆ 180 ದಿನಗಳ ಆರೈಕೆ ರಜೆ ಎಂಬ ಹೊಸ ಯೋಜನೆ ಪರಿಚಯಿಸಲು ಮತ್ತು ಸೇವೆಗೆ ಸೇರುವ ಎರಡು ತಿಂಗಳು ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಆರೈಕೆಗೆ 18 ವಾರಗಳ ಹೆರಿಗೆ ರಜೆ, ಸಂಗಾತಿಯ ಬದಲಿಗೆ ಮಕ್ಕಳನ್ನು ಪಿಂಚಣಿಗೆ ನಾಮ ನಿರ್ದೇಶನ ಮಾಡಲು ಅವಕಾಶ ಮಾಡಿಕೊಡಲು ಆಯೋಗವು ಶಿಫಾರಸು ಮಾಡಿದೆ.
ಕೆಲಸದ ಗುಣಮಟ್ಟ ಹೆಚ್ಚಿಸಲು ಮತ್ತು ಸರ್ಕಾರಿ ನೌಕರರ ಕೆಲಸ, ವಿರಾಮದ ಸಮತೋಲನ ಹಾಗೂ ಕಾರ್ಯಕ್ಷಮತೆಯ ಗುಣಮಟ್ಟ ಕಾಯ್ದುಕೊಳ್ಳಲು ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಮಾಡಲು ಆಯೋಗ ಶಿಫಾರಸು ಮಾಡಿದೆ.
70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಶೇ.100ರಷ್ಟು ಹೆಚ್ಚಳ ಆಗಬೇಕು. ಪಿಂಚಣಿದಾರರಿಗೆ ಸಂಧ್ಯಾ ಕಿರಣ ಎಂಬ ಆರೋಗ್ಯ ಯೋಜನೆ ಜಾರಿ ಮಾಡಬೇಕು, ಅಲ್ಲಿವರೆಗೆ ಮಾಸಿಕ 500 ವೈದ್ಯಕೀಯ ಭತ್ಯೆ ನೀಡಬೇಕು. ಪಿಂಚಣಿದಾರರು ಮರಣ ಹೊಂದಿದ್ದಲ್ಲಿ 10,000 ರೂ.ಗಳನ್ನು ಶವಸಂಸ್ಕಾರ ಮೊತ್ತ ನೀಡಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.