ಇಂಗ್ಲಿಷ್ ಶಿಕ್ಷಣದಿಂದ ಮಾತ್ರ ಶೂದ್ರ-ದಲಿತರ ವಿಮೋಚನೆ: ಕಾಂಚಾ ಐಲಯ್ಯ

ಬೌದ್ಧ ಧರ್ಮವು ತನ್ನ ತತ್ವಗಳನ್ನು ಮತ್ತು ಆಚರಣೆಗಳನ್ನು ಪಾಳಿ-ಪ್ರಾಕೃತ ಭಾಷೆಗಳಿಗೆ ಸೀಮಿತಗೊಳಿಸದೆ, ಇಂಗ್ಲಿಷ್‌ನಲ್ಲಿಯೇ ಜಗತ್ತಿಗೆ ಪಸರಿಸಬೇಕು ಎಂದು ಅವರು ಸಲಹೆ ನೀಡಿದರು.

Update: 2025-10-14 14:52 GMT
Click the Play button to listen to article

ಶ್ರೇಣಿಕೃತ ಹಿಂದೂ ಸಾಮಾಜಿಕ ವ್ಯವಸ್ಥೆಯಿಂದ ವಿಮೋಚನೆ ಹೊಂದಲು ಶೂದ್ರರು ಮತ್ತು ದಲಿತರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಬೇಕು ಎಂದು ಖ್ಯಾತ ಚಿಂತಕ ಕಾಂಚಾ ಐಲಯ್ಯ ಪ್ರತಿಪಾದಿಸಿದ್ದಾರೆ. ನಗರದಲ್ಲಿ ಮಂಗಳವಾರ ಆರಂಭವಾದ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಶಿಕ್ಷಣವು ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರವನ್ನು ತಂದುಕೊಡುವ ಪ್ರಬಲ ಅಸ್ತ್ರವಾಗಿದೆ ಎಂದರು.

ಲೇಖಕರಾದ ಯು.ಆರ್. ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರು ಮಾತೃಭಾಷಾ ಶಿಕ್ಷಣದ ಪರವಾಗಿದ್ದನ್ನು ತಾವು ವಿರೋಧಿಸಿದ್ದನ್ನು ಸ್ಮರಿಸಿದ ಐಲಯ್ಯ, "ಅದು ಶೋಷಿತರನ್ನು ಸೇವಕರಾಗಿಯೇ ಇರಿಸುವ ಹುನ್ನಾರವೆಂದು ನಾನು ಅಂದೇ ಹೇಳಿದ್ದೆ. ಶೋಷಿತ ಸಮುದಾಯಗಳಿಗೆ ಇಂಗ್ಲಿಷ್ ಶಿಕ್ಷಣ ದೊರೆತರೆ, ಅವರು ಖಂಡಿತವಾಗಿಯೂ ರಾಜಕೀಯ ಅಧಿಕಾರಕ್ಕೆ ಬಂದೇ ಬರುತ್ತಾರೆ" ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಬೌದ್ಧ ಧರ್ಮವು ತನ್ನ ತತ್ವಗಳನ್ನು ಮತ್ತು ಆಚರಣೆಗಳನ್ನು ಪಾಳಿ-ಪ್ರಾಕೃತ ಭಾಷೆಗಳಿಗೆ ಸೀಮಿತಗೊಳಿಸದೆ, ಇಂಗ್ಲಿಷ್‌ನಲ್ಲಿಯೇ ಜಗತ್ತಿಗೆ ಪಸರಿಸಬೇಕು ಎಂದು ಅವರು ಸಲಹೆ ನೀಡಿದರು. "ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದದ್ದೇ ಇಂಗ್ಲಿಷ್‌ನಲ್ಲಿ. ಹಾಗಾಗಿ, ಬೌದ್ಧ ವಿಹಾರಗಳಲ್ಲಿ ಇಂಗ್ಲಿಷ್ ಕಲಿಕೆ ಮತ್ತು ಅಂಬೇಡ್ಕರ್ ಅವರ ಚಿಂತನೆಗಳ ಅಧ್ಯಯನ ನಿರಂತರವಾಗಿ ನಡೆಯಬೇಕು," ಎಂದು ಅವರು ಕರೆ ನೀಡಿದರು.

"ಭಾರತದಲ್ಲಿ ಬೌದ್ಧ ಧರ್ಮ ಪ್ರಬಲವಾಗಿದ್ದರೆ, ಆರ್‌ಎಸ್‌ಎಸ್‌-ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಮತ್ತು ಶೂದ್ರರು, ಶೋಷಿತರು ಬಡವರಾಗಿ ಉಳಿಯುತ್ತಿರಲಿಲ್ಲ," ಎಂದು ಐಲಯ್ಯ ಹೇಳಿದರು. "ಬುದ್ಧ ಯುದ್ಧಗಳನ್ನು ತಪ್ಪಿಸಿ, ಕೃಷಿ ಕ್ರಾಂತಿ ಮಾಡಿದ ಮತ್ತು ಮಹಿಳೆಯರಿಗೂ ಸಮಾನತೆ ನೀಡಿದ. ಆತನ ಕ್ರಾಂತಿಕಾರಿ ಹೆಜ್ಜೆಗಳಿಂದ ಪ್ರಾಚೀನ ಭಾರತದ ಅರ್ಥವ್ಯವಸ್ಥೆ ಶ್ರೀಮಂತವಾಗಿತ್ತು," ಎಂದು ಅವರು ಬುದ್ಧನ ಕೊಡುಗೆಯನ್ನು ಸ್ಮರಿಸಿದರು.

ಹತ್ಯೆಯಾದವರೇ ಮಹಾತ್ಮರು

ಆರ್‌ಎಸ್‌ಎಸ್‌ ಅನ್ನು ಟೀಕಿಸುತ್ತಿರುವುದರಿಂದ ತಮಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ ಅವರು, "ಇತಿಹಾಸದಲ್ಲಿ ಕೊಂದವರ ಹೆಸರು ಉಳಿಯುವುದಿಲ್ಲ, ಕೊಲೆಯಾದವರೇ ಮಹಾತ್ಮರಾಗುತ್ತಾರೆ," ಎಂದು ದಿಟ್ಟ ಉತ್ತರ ನೀಡಿದರು. ಇದೇ ಸಂದರ್ಭದಲ್ಲಿ, "ಬ್ರಾಹ್ಮಣರಿಗಿಂತಲೂ ಹೆಚ್ಚಾಗಿ ಶೂದ್ರ ಸಮುದಾಯಗಳು ದಲಿತರನ್ನು ಗೌರವದಿಂದ ಕಾಣಬೇಕು, ಆಗ ಮಾತ್ರ ಸಾಂಸ್ಕೃತಿಕ ಯಜಮಾನಿಕೆ ಕೊನೆಗೊಳ್ಳಲು ಸಾಧ್ಯ," ಎಂದು ಅವರು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ತಮ್ಮತ್ತ ಶೂ ತೂರಿದ ವ್ಯಕ್ತಿಯನ್ನು ಕ್ಷಮಿಸಿದ್ದನ್ನು ಉಲ್ಲೇಖಿಸಿದ ಐಲಯ್ಯ, "ಇದೇ ನಿಜವಾದ ಬುದ್ಧ ಹಾಗೂ ಅಂಬೇಡ್ಕರ್ ಮಾರ್ಗ," ಎಂದು ಶ್ಲಾಘಿಸಿದರು. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಪ್ರಶಂಸಿಸಿದ ಅವರು, ರಾಹುಲ್ ಗಾಂಧಿ ಸಂವಿಧಾನದ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಮತ್ತು ಖರ್ಗೆಯವರ ಇಂಗ್ಲಿಷ್ ಹಾಗೂ ಹಿಂದಿ ಭಾಷಾ ಪ್ರಾವೀಣ್ಯತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗಿಂತ ಉತ್ತಮವಾಗಿದೆ ಎಂದು ಹೇಳಿದರು.

Tags:    

Similar News