ಪ್ರತಿ ಡ್ರಗ್ಸ್ ವ್ಯಸನಿಗೂ ಒಬ್ಬ ಪೊಲೀಸ್ ನಿಗಾ, 8,500 ಸಿಬ್ಬಂದಿ ನೇಮಕ: ಪರಮೇಶ್ವರ್
ಮಾದಕ ವಸ್ತುಗಳು ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಇದನ್ನು ಮಟ್ಟಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರ ನಿಯಂತ್ರಣಕ್ಕಾಗಿ ವಿಶೇಷ 'ಮಾದಕ ದ್ರವ್ಯ ವಿರೋಧಿ ಪಡೆ' ರಚಿಸಲಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದ್ದು, ಈ ವಾರದಲ್ಲೇ 8,500 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದ್ದಾರೆ. ಇದೇ ವೇಳೆ, ಮಾದಕ ವ್ಯಸನಿಗಳ ಮೇಲೆ ನಿಗಾ ಇಡಲು 'ಪ್ರತಿ ವ್ಯಸನಿಗೆ ಒಬ್ಬ ಪೊಲೀಸ್' ಎಂಬ ವಿನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಪೊಲೀಸ್ ಸಿಬ್ಬಂದಿಗೆ 'ಪೀಕ್ ಕ್ಯಾಪ್' ವಿತರಣೆ ಹಾಗೂ 'ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ'ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಪ್ರತಿ ವ್ಯಸನಿಗೂ ಒಬ್ಬ ಪೊಲೀಸ್
ಮಾದಕ ವಸ್ತುಗಳು ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಇದನ್ನು ಮಟ್ಟಹಾಕಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. "ಕಳೆದ ಎರಡು ವರ್ಷಗಳಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರ ನಿಯಂತ್ರಣಕ್ಕಾಗಿ ವಿಶೇಷ 'ಮಾದಕ ದ್ರವ್ಯ ವಿರೋಧಿ ಪಡೆ' ರಚಿಸಲಾಗಿದೆ. ವಿಶೇಷವಾಗಿ, ಯಶಸ್ವಿಯಾಗಿ ನಡೆಯುತ್ತಿರುವ 'ಮನೆ ಮನೆಗೆ ಪೊಲೀಸ್' ವ್ಯವಸ್ಥೆಯಡಿ, ಪ್ರತಿ ಡ್ರಗ್ ವ್ಯಸನಿಯ ಮೇಲೆ ನಿಗಾ ಇಡಲು ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ," ಎಂದು ಅವರು ವಿವರಿಸಿದರು.
ಪೊಲೀಸ್ ಇಲಾಖೆಗೆ ಶ್ಲಾಘನೆ
ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ಅತ್ಯುತ್ತಮ ಇಲಾಖೆಯಾಗಿದೆ ಎಂದು ಶ್ಲಾಘಿಸಿದ ಸಚಿವರು, "ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಕೋಮುಗಲಭೆ ಅಥವಾ ಅಹಿತಕರ ಘಟನೆಗಳು ನಡೆದಿಲ್ಲ. ಇದಕ್ಕೆ ಪೊಲೀಸರ ದಕ್ಷ ಕಾರ್ಯವೈಖರಿಯೇ ಮುಖ್ಯ ಕಾರಣ. ಪೊಲೀಸರು ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು," ಎಂದರು. ಪೊಲೀಸ್ ಸಿಬ್ಬಂದಿಯ ದಕ್ಷತೆ ಹೆಚ್ಚಿಸಲು ಎರಡು ವರ್ಷಗಳ ಕಾಲ ವರ್ಗಾವಣೆ ಮಾಡಬಾರದು ಎಂಬ ಕಾನೂನು ಜಾರಿಗೆ ತರಲಾಗಿದೆ ಎಂದೂ ಅವರು ಇದೇ ವೇಳೆ ಸ್ಮರಿಸಿದರು.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ, 8,500 ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಅನುಮತಿ ದೊರೆತಿದ್ದು, ಈ ವಾರದಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.