ನಮ್ಮ ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ: ವಿಕೃತಿ ಮೆರೆದ ಅಪರಿಚಿತ; ದೂರು ದಾಖಲು

“ಮೆಟ್ರೋ ಕ್ಲಿಕ್ಸ್” ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋದಲ್ಲಿನ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್ಲೋಡ್​ ಮಾಡಲಾಗಿದೆ. 5,538 ಹಿಂಬಾಲಕರನ್ನು ಹೊಂದಿರುವ ಖಾತೆಯಲ್ಲಿ ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತನೋರ್ವ ಹಂಚಿಕೊಂಡಿದ್ದಾನೆ.;

Update: 2025-05-21 05:46 GMT

ನಮ್ಮ ಮೆಟ್ರೋ

'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಪರಿಚಿತನೋರ್ವ ವಿಕೃತಿ ಮೆರೆದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.



"ಮೆಟ್ರೋ ಕ್ಲಿಕ್ಸ್" ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋ ರೈಲಿನ ಒಳಗೆ ಮತ್ತು ನಿಲ್ದಾಣಗಳಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಹಂಚಿಕೊಳ್ಳಲಾಗಿದೆ. ಈ ಖಾತೆಯು 5,538 ಹಿಂಬಾಲಕರನ್ನು ಹೊಂದಿದ್ದು, ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ 2008 ಸೆಕ್ಷನ್ 67 ಮತ್ತು ಬಿಎನ್‌ಎಸ್ 78(2) ರಡಿ ಸ್ವಯಂ ಪ್ರೇರಿತ (ಸುಮೊಟೋ) ಪ್ರಕರಣ ದಾಖಲಾಗಿದೆ.

ಸಂಸದ ಪಿ.ಸಿ. ಮೋಹನ್ ಪ್ರತಿಕ್ರಿಯೆ

ಕೇಂದ್ರ ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರು ಈ ಘಟನೆ ಬಗ್ಗೆ ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ. "ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ಬೆಂಗಳೂರು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು" ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಆತಂಕ

ಈ ಘಟನೆ ಬಗ್ಗೆ ವ್ಯಕ್ತಿಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಅಪರಿಚಿತನೋರ್ವ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತಿದ್ದಾನೆ. ನಾಳೆ ಈ ವಿಡಿಯೋಗಳಲ್ಲಿ ನಮ್ಮ ಅಕ್ಕ, ತಂಗಿಯರು ಇರಬಹುದು, ಹುಷಾರಾಗಿರಿ. ಮೊದಲು ಈ ಖಾತೆಯನ್ನು ರಿಪೋರ್ಟ್ ಮಾಡಿ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ್ ಮಾಡಿ. ಆದಷ್ಟು ಬೇಗ ಈ ಖಾತೆಯನ್ನು ತೆಗೆಸಲೇಬೇಕು" ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.

Tags:    

Similar News