ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿಲ್ಲ, ಚಾಲಕರಿಗೆ ತೊಂದರೆ ನೀಡಬೇಡಿ:ಹೈಕೋರ್ಟ್ ಸ್ಪಷ್ಟನೆ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿಷೇಧವಿದ್ದರೂ ಅವುಗಳ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಡ್ವೊಕೇಟ್‌ ಜನರಲ್ ಕೆ. ಶಶಿಕಿರಣ್‌ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದರು.;

Update: 2025-08-22 11:36 GMT

ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡಿ ಹೈಕೋರ್ಟ್ ಯಾವುದೇ ಆದೇಶವನ್ನು ಹೊರಡಿಸಿಲ್ಲ.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ನಾವು ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಈ ಕುರಿತು ಸರ್ಕಾರವು ಸೂಕ್ತ ನೀತಿಯನ್ನು ನಿರೂಪಿಸುವವರೆಗೂ ಬೈಕ್ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಮಹತ್ವದ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠ ಈ ಸ್ಪಷ್ಟನೆ ನೀಡಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧವಿದ್ದರೂ ಅವುಗಳ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ನ್ಯಾಯಾಲಯದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೈಕ್ ಟ್ಯಾಕ್ಸಿಗಳ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿರುವುದರಿಂದ, ಅಲ್ಲಿಯವರೆಗೂ ಚಾಲಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂದು ಈ ಹಿಂದೆಯೇ ನಿರ್ದೇಶಿಸಿರುವುದಾಗಿ ನೆನಪಿಸಿತು.

ಈ ವೇಳೆ, ಬೈಕ್ ಟ್ಯಾಕ್ಸಿ ಚಾಲಕರ ಪರ ವಕೀಲ ಗಿರೀಶ್ ಕುಮಾರ್, "ಪೊಲೀಸರು ಬೈಕ್​​ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ," ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, "ಚಾಲಕರನ್ನು ಬಂಧಿಸಲಾಗುವುದಿಲ್ಲ," ಎಂದು ಭರವಸೆ ನೀಡಿದರು. ಆಗ ಮಧ್ಯಪ್ರವೇಶಿಸಿದ ಹೈಕೋರ್ಟ್, " ಯಾರಿಗೂ ತೊಂದರೆ ಕೊಡಬೇಡಿ," ಎಂದು ಖಡಕ್ ನಿರ್ದೇಶನ ನೀಡಿತು.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಆ್ಯಪ್ ಆಧಾರಿತ ಸೇವಾ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ಸದ್ಯ, ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ಸೂಕ್ತ ನೀತಿ ಚೌಕಟ್ಟನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ. ಅಷ್ಟರೊಳಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

Tags:    

Similar News