ನನಗೆ ಬೇರೆ ದಾರಿಯಿಲ್ಲ, ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುತ್ತೇನೆ: ಡಿಕೆಶಿಯ 'ತೂಕ'ದ ಮಾತು

ಡಿಕೆಶಿ ಅವರ ಈ ಹೇಳಿಕೆ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಕಳೆದ ವರ್ಷ ವಿಧಾನಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.;

Update: 2025-07-02 13:52 GMT

"ನಾನು 5 ವರ್ಷ ಸಿಎಂ ಆಗಿರುತ್ತೇನೆ, ಯಾವುದೇ ಅನುಮಾನ ಬೇಡ" ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ 'ತೂಕ'ದ ಮಾತು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ.

ನಂದಿಬೆಟ್ಟದಲ್ಲಿ ಬುಧವಾರ ಮಾತನಾಡಿದ ಡಿಕೆಶಿ, "ನನಗೆ ಬೇರೆ ದಾರಿಯಿಲ್ಲ, ನಾನು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಸಹಕಾರ ನೀಡುತ್ತೇನೆ" ಎಂದು ಹೇಳುವ ಮೂಲಕ, ತಮ್ಮ ಬೆಂಬಲವನ್ನು ಅನಿವಾರ್ಯ ಆಯ್ಕೆಯಾಗಿ ಬಿಂಬಿಸಿದ್ದಾರೆ.

ಡಿಕೆಶಿ ಅವರ ಈ ಹೇಳಿಕೆ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಕಳೆದ ವರ್ಷ ವಿಧಾನಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿ, ಅಧಿಕಾರ ಹಂಚಿಕೆ ಸೂತ್ರವನ್ನು ಅನುಸರಿಸಿದೆ ಎಂದು ಹೇಳಲಾಗುತ್ತಿತ್ತು. ಈ ಸೂತ್ರದ ಪ್ರಕಾರ, ಸಿದ್ದರಾಮಯ್ಯ ಅವರು ಮೊದಲ 2.5 ವರ್ಷ ಮತ್ತು ಡಿಕೆಶಿ ನಂತರದ 2.5 ವರ್ಷಗಳ ಕಾಲ ಮುಖ್ಯಮಂತ್ರಿಯಾಗುವ ಬಗ್ಗೆ ಒಳ ಒಪ್ಪಂದವಿತ್ತು ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಪಕ್ಷದ ವತಿಯಿಂದ ಎಂದಿಗೂ ಅಧಿಕೃತ ದೃಢೀಕರಣ ಹೊರಬಿದ್ದಿರಲಿಲ್ಲ.

ಆದರೆ, ಇತ್ತೀಚಿನ ದಿನಗಳಲ್ಲಿ ಸಿಎಂ ಆಗುವ ಆಕಾಂಕ್ಷೆಯನ್ನು ಬಲವಾಗಿ ವ್ಯಕ್ತಪಡಿಸಿದ್ದರು. ಅದರಲ್ಲೂ ಅವರು ಪ್ರತ್ಯೇಕವಾಗಿ ನಿಂತು ಆಂತರಿಕ ಒತ್ತಡ ಹೇರುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಒತ್ತಡ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಳಿಕ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಬಂದು ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಿದ್ದರು.

ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಕುರಿತು ನೀಡಿದ ಹೇಳಿಕೆ, ಅಧಿಕಾರ ಹಂಚಿಕೆ ಸೂತ್ರದ ಊಹಾಪೋಹಗಳಿಗೆ ತೆರೆ ಎಳೆದಂತಿದೆ. ಇದರ ಬೆನ್ನಲ್ಲೇ ಡಿಕೆಶಿ ಅವರ "ನನಗೆ ಬೇರೆ ದಾರಿಯಿಲ್ಲ" ಎಂಬ ಹೇಳಿಕೆಯು, ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧರಾಗಿರುವುದನ್ನು ಸೂಚಿಸುತ್ತದೆ. ಇದು ಬಲವಂತದ ಒಪ್ಪಿಗೆಯಂತೆ ಕಂಡರೂ, ಪಕ್ಷದ ಶಿಸ್ತು ಮತ್ತು ಹೈಕಮಾಂಡ್‌ನ ಅಂತಿಮ ನಿರ್ಧಾರಕ್ಕೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸುವ ಪ್ರಯತ್ನವೂ ಆಗಿದೆ.

"ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಯಾವಾಗಲೂ ಬದ್ಧನಾಗಿರುತ್ತೇನೆ" ಎಂದು ಹೇಳಿರುವುದನ್ನೂ ಇಲ್ಲಿ ಸ್ಮರಿಸಬಹುದು.

Tags:    

Similar News