ʻಸರ್ಕಾರವನ್ನು ಅಲ್ಲಾಡಿಸಲಾಗದು; ಉರುಳಿಸುವುದು ಭ್ರಮೆʼ: ಡಿ ಕೆ ಶಿವಕುಮಾರ್‌ ವಾಗ್ದಾಳಿ

Update: 2024-08-03 11:40 GMT

ʻʻನಮ್ಮ‌ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಸರ್ಕಾರ ಉರುಳಿಸುವುದು ನಿಮ್ಮ ಭ್ರಮೆ. ತಿರುಕನ‌ ಕನಸುʼʼ ಎಂದು ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್‌‌ ನಾಯಕ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮುಡಾ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಆರಂಭಿಸಿರುವ ಪಾದಯಾತ್ರೆಗೆ ಟಕ್ಕರ್ ಕೊಡಲು ರಾಮನಗರದಲ್ಲಿ ನಡೆದ ಕಾಂಗ್ರೆಸ್​​​ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʻʻನವೆಂಬರ್​​, ಡಿಸೆಂಬರ್​ಗೆ ಸರ್ಕಾರ ಪಲ್ಟಿ ಮಾಡುತ್ತೇವೆ ಎಂದು ಬಿಜೆಪಿ-ಜೆಡಿಎಸ್‌ ನಾಯಕರು ಹೇಳುತ್ತಾರೆ, ಒಡೆಯೋಕೆ ಅದೇನು ಮಡಕೆನಾ? ಎಂದು ಟಾಂಗ್ ಕೊಟ್ಟಿದ್ದಾರೆ.

2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಪಾದಯಾತ್ರೆ ಸಾಗುವ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ನಿನ್ನೆ ಆ ಭಾಗದಲ್ಲಿ ಜೆಡಿಎಸ್ ಬಾವುಟವೇ ಇರಲಿಲ್ಲ. ನಾವು ನಿನ್ನೆ ಮಾತನಾಡಿದ್ದಕ್ಕೆ ಇಂದು ಜೆಡಿಎಸ್ ಬಾವುಟ ಹಾಕಿದ್ದಾರೆ ಎಂದು ಹೇಳಿದರು.

ʻʻಬಿಜೆಪಿ ಶಾಸಕ ಯತ್ನಾಳ್, ಪತ್ರಿಕಾ ಜಾಹೀರಾತಿಗೆ ಬಿಜೆಪಿ ಉತ್ತರ ಕೊಡಬೇಕು. ಕಾವೇರಿ, ಮೇಕೆದಾಟು ನೀರಿಗೆ ಹೆಜ್ಜೆ ಹಾಕಿಲ್ಲ. ಈಗ ಕುಮಾರಸ್ವಾಮಿ ಮಂತ್ರಿ ಆಗಿದ್ದಾರೆ. ಫ್ಯಾಕ್ಟರಿ ಮಾಡ್ತೀನಿ ಅಂದಿದ್ದೀರಿ. ಉದ್ಯೋಗ ಕೊಡಿ, ಖಾಲಿ‌ ಮಾತನಾಡಬೇಡಿ. ಚನ್ನಪಟ್ಟಣಕ್ಕೆ ಹೋಗಿದ್ದಾಗ 22 ಸಾವಿರ ಜನ ಅರ್ಜಿ ಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರ ಆಮೇಲೆ ಮಾತನಾಡುತ್ತೇನೆʼʼ ಎಂದು ಎಚ್‌ಡಿ ಕುಮಾರಸ್ವಾಮಿಗೆ ಸವಾಲು ಹಾಕಿದರು.

ʻʻನಾನು ಬರುವಾಗ ವಿಪರೀತ ಮಳೆ ಇತ್ತು ಆದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ‌ ಬಂದಿದ್ದೀರಿ. ಪಾದಯಾತ್ರೆ ಮಾಡುವವರಿಗೆ ನೀವು ಪ್ರಶ್ನೆಗಳನ್ನು ಕೇಳಿಬೇಕು. ನುಡಿದಂತೆ ನಡೆದಿದ್ದೇವೆ, ಬದುಕನ್ನು ಬದಲಾವಣೆ ಮಾಡಿದ್ದೇವೆ. ಯಾವುದೇ ಈ ರೀತಿಯ ಕಾರ್ಯಕ್ರಮ ಬಿಜೆಪಿ ಮಾಡಿಲ್ಲ. ನಿಮ್ಮ‌ ಬದುಕು ನಮ್ಮ ಉಸಿರುʼʼ ಎಂದರು.

ʻʻಪೆನ್‌ ಡ್ರೈವ್ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ? ಪ್ರಧಾನಿ ಮೋದಿ ಬಳಿ ಯಾಕೆ ಮಾತನಾಡುತ್ತಿಲ್ಲ? ಬಿಜೆಪಿ ಯಾಕೆ ಬಾಯಿ ಮುಚ್ಚಿಕೊಂಡಿದೆ? ಎಲ್ಲವನ್ನೂ ರಾಜ್ಯದ ಜನತೆಯ ಮುಂದೆ ಬಿಚ್ಚಿಡಬೇಕು. ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಪಿತಾಮಹ ಎಂದಿದ್ದಾರೆ. ನಿಮ್ಮ‌ (ವಿಜಯೇಂದ್ರ) ತಂದೆ ಯಾಕೆ‌ ರಾಜೀನಾಮೆ ಕೊಟ್ಟರು? ಕಣ್ಣೀರು ಹಾಕಿ ಹೋದವರು ಯಾರು? ಯಾಕೆ ರಾಜೀನಾಮೆ ಅಂಗೀಕಾರ ಮಾಡಿದರು? ಯಡಿಯೂರಪ್ಪನವರು ಜೈಲಿಗೆ ಹೋಗಲು ಜೆಡಿಎಸ್​​ನವರು ಕಾರಣ. ಈಗ ಅವರೊಂದಿಗೆ ಪಾದಯಾತ್ರೆ ಮಾಡುತ್ತಿದ್ದೀರಿʼʼ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

Tags:    

Similar News