BPL Card Controversy | ಯಾವುದೇ ಪಡಿತರ ಚೀಟಿ ರದ್ದು ಮಾಡದಂತೆ ಸಿಎಂ ಸ್ಪಷ್ಟ ಸೂಚನೆ
ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಬಿಟ್ಟು ಉಳಿದ ಯಾವುದೇ ಪಡಿತರ ಚೀಟಿ ರದ್ದಾಗಿದ್ದರೆ ವಾಪಸ್ ನೀಡಬೇಕು ಹಾಗೂ ಬಡ ಕುಟುಂಗಳ ಪಡಿತರ ಚೀಟಿಗಳನ್ನು ರದ್ದು ಮಾಡಿದರೆ ಕಠಿಣ ಕ್ರಮಕ್ಕೂ ಆದೇಶಿಸಲಾಗಿದೆ.
ಅನರ್ಹ ಬಿಪಿಎಲ್ ಪಡಿತರ ಚೀಟಿಗಳ ರದ್ದತಿ ಸಂಬಂಧ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕ್ರಮ ಕೈಗೊಂಡಿರುವುದು ಬಿಜೆಪಿಗೆ ರಾಜಕೀಯ ಅಸ್ತ್ರವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕಾಂಗ್ರೆಸ್ ಸರ್ಕಾರ ಯಾವುದೆ ಪಡಿತರ ಚೀಟಿ ರದ್ದು ಪಡಿಸದಂತೆ ಆದೇಶ ನೀಡಿದೆ
ಗುರುವಾರ ಬೆಳಿಗ್ಗೆ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಸಚಿವಾಲಯ "ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ," ಸ್ಪಷ್ಟ ಸೂಚನೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಡಿನ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
"ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಆದೇಶಿಸಲಾಗಿದೆ. ಬಡ ಕುಟುಂಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ವರಿಕೆ ನೀಡಲಾಗಿದೆ.
ಯಾಕೆ ಗೊಂದಲ?
ಅನರ್ಹ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಪಡಿಸಿ ಅವುಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿತ್ತು. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಹಣಕಾಸಿನ ತೊಂದರೆ ಅನುಭವಿಸುತ್ತಿರುವ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನೂ ರದ್ದುಗೊಳಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಜತೆಗೆ ಮತ ಬ್ಯಾಂಕ್ ರಾಜಕಾರಣ ನಡೆಸಿ ಒಂದು ಸಮೂದಾಯಕ್ಕೆ ಸಹಾಯ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟೀಕೆ ಮಾಡಲಾಗಿತ್ತು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯ ಸರ್ಕಾರ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ ಎಂದು ಆರೋಪಿಸಿದ್ದರು."ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ಅವರೇ ಹಿಂದೂಗಳ ವೋಟು ಬೇಡ ಎಂದಿದ್ದರು. ಅದಕ್ಕಾಗಿಯೇ ಹಿಂದೂಗಳ ರೇಷನ್ ಕಾರ್ಡ್ ರದ್ದುಗೊಳಿಸುತಿದ್ದಾರೆ ಎಂಬ ಮಾಹಿತಿ ," ಎಂದು ದೂರಿದ್ದರು.
ರಾಜ್ಯದಲ್ಲಿ ಎಷ್ಟು ಕಾರ್ಡ್‌ಗಳಿವೆ?
ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಇಲಾಖೆ ಗುರುತಿಸಿದೆ. 13.87 ಲಕ್ಷ ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದು, ಅವುಗಳಲ್ಲಿ 3.64 ಲಕ್ಷ ರದ್ದುಗೊಳಿಸಲಾಗಿದೆ. ಇದರಲ್ಲಿ ಸರ್ಕಾರಿ ನೌಕರರ 2,964 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಚೀಟಿ ಮೂಲಕ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. 6 ತಿಂಗಳವರೆಗೆ ಪಡಿತರ ಪಡೆಯದಿರುವವರು ಒಂದು ವರ್ಷದವರೆಗೆ ಡಿಬಿಟಿ ಪಡೆಯದಿರುವವರು ಮತ್ತು ನಿಗದಿತಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಅನರ್ಹರೆಂದು ಪರಿಗಣಿಸಲ್ಪಟ್ಟಿರುವುದರಿಂದ ಅನರ್ಹ ಪಡಿತರ ಚೀಟಿಗಳ ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿರಬಹುದು ಅಂದಾಜಿಲಾಗಿದೆ.
ಸಿಎಂ ಸ್ಪಷ್ಟನೆ
ವಿವಾದ ಭುಗಿಲೆದ್ದಾಗ ಸ್ವತಃ ಸಿಎಂ ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ಸ್ಪಷ್ಟನೆ ನೀಡಿ, "ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆ ಎನ್ನುವ ಊಹಾಪೂಹ ಪೂರ್ತಿ ತಪ್ಪು. ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಅನರ್ಹರ ಕಾರ್ಡ್‌ಗಳನ್ನು ವಾಪಸ್ ಪಡೆಯಬಹುದು ಎನ್ನುವ ಆಲೋಚನೆ ನಮ್ಮದಾಗಿದೆ. ಇನ್ನೂ ಈ ಕುರಿತು ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ," ಎಂದು ಸ್ಪಷ್ಟಪಡಿಸಿದ್ದರು.
"ಆದಾಯ ತೆರಿಗೆ ಪಾವತಿಸುವವರಿಗೂ, ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ ಎಂದು ಪ್ರಶ್ನಿಸಿದ್ದ ಸಿಎಂ, ಯಾವ ಕಾರ್ಡ್‌ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಾಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು," ಎಂದಿದ್ದರು.
ಈಗ ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ," ಸ್ಪಷ್ಟ ಸೂಚನೆ ನೀಡಿ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.
BPL, APL ಕಾರ್ಡ್ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ ಮುನಿಯಪ್ಪ ಸ್ಪಷ್ಟನೆ
ಅಕ್ರಮ ಬಿಪಿಎಲ್ ಕಾರ್ಡ್ ರದ್ದು ಕುರಿತಂತೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1,50,59,431 ಕಾರ್ಡ್‌ಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸದ್ಯ 1,02,509 ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿದ್ದೇವೆ. ಉಳಿದ ಎಲ್ಲ ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ಮಾನದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿಷ್ಕರಿಸಲಾಗಿದೆ. ಅನರ್ಹ ಎಂಬ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್‌ಗಳನ್ನು ಎಪಿಎಲ್ಗೆ ಸೇರಿಸಲಾಗಿದೆ. ಬಿಪಿಎಲ್ಗೆ ಅರ್ಹರಿದ್ದೂ ಕೂಡ ಎಪಿಎಲ್ಗೆ ಸೇರಿಸಿದ್ದರೆ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ ಎಂದರು ಎಂದು ವಿಧಾನಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.