ಎಪಿಎಲ್ ಕಾರ್ಡು ರದ್ದತಿಗೆ ನಿರ್ದೇಶನ ನೀಡಿಲ್ಲ: ಆಹಾರ ಇಲಾಖೆ ಸ್ಪಷ್ಟನೆ
ಯಾವುದೇ ಎಪಿಎಲ್ ಪಡಿತರ ಕಾರ್ಡುಗಳ ರದ್ದತಿಗೆ ಯಾವುದೇ ಸೂಚನೆ ನೀಡಿಲ್ಲ ಹಾಗೂ ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಕೆಲವು ದಿನಪತ್ರಿಕೆಗಳಲ್ಲಿ ಇ-ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 2 ರಂದು 25,13,798 ಎಪಿಎಲ್ ಕಾರ್ಡುಗಳಿದ್ದವು. ಇಂದು (ನವೆಂಬರ್ 16 ರಂದು) 25,62,566 ಕಾರ್ಡುಗಳಿವೆ. ಹಾಗಾಗಿ ಕಾರ್ಡ್ ರದ್ದು ಮಾಡಲಾಗಿದೆ ಎಂಬ ವರದಿಗಳು ಕೇವಲ ಊಹಾಪೋಹ ಎಂದು ಇಲಾಖೆ ಹೇಳಿದೆ.
ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಕಾರ್ಯ ಕೈಗೊಂಡ ಪರಿಣಾಮ, ಕೆಲವು ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಪರಿವರ್ತಿಸಿರುವುದರಿಂದ 48,768 ಕಾರ್ಡುಗಳು ಹೆಚ್ಚಳವಾಗಿವೆ. ಆದರೆ, ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಸುದ್ದಿ ಪ್ರಕಟವಾಗಿರುವುದು ಸತ್ಯ ಸಂಗತಿಯಲ್ಲ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಉಚಿತ ಬಸ್ ಯೋಜನೆಯಂತಹ ಮಹತ್ವದ ಯೋಜನೆ ಜಾರಿ ಮಾಡಿದೆ. ಆದರೆ ಮಹಿಳೆಯ ಖಾತೆಗೆ ನೇರವಾಗಿ ತಿಂಗಳಿಗೆ 2 ಸಾವಿರ ರೂ. ಹಣ ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಯಿಂದ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನೇ ಕಡಿತ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಎಪಿಎಲ್‌ನಿಂದ ಬಿಪಿಎಲ್‌ಗೆ ಬದಲಾವಣೆ
ಹಾಸನ, ಕೋಲಾರ ಸೇರಿದಂತೆ ರಾಜ್ಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯ ಎಪಿಎಲ್ ಕಾರ್ಡುಗಳನ್ನು ಬಿಪಿಎಲ್ ಕಾರ್ಡ್ಗಳಾಗಿ ಬದಲಾಯಿಸಲಾಗಿದೆ ಎಂದು ವರದಿಯಾಗಿತ್ತು.
ಹಾಸನ ಜಿಲ್ಲೆಯಲ್ಲಿ ಒಟ್ಟು 3925 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ. ತೆರಿಗೆ ಪಾವತಿದಾರರು ಎಂಬ ಕಾರಣಕ್ಕೆ 3408 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ. ಅಲ್ಲದೆ, 1.20 ಲಕ್ಷಕ್ಕಿಂತ ಅಧಿಕ ಆದಾಯ ಕಾರಣದಿಂದ 415 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ. ಸರ್ಕಾರಿ ನೌಕರರು ಎಂಬ ಕಾರಣಕ್ಕೆ 102 ಕಾರ್ಡ್ಗಳು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಅದೇ ರೀತಿ ಕೋಲಾರ ಜಿಲ್ಲೆಯಲ್ಲಿ 6500 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 3500 ಕಾರ್ಡ್, ಸರ್ಕಾರಿ ನೌಕರರು ಎಂಬ ಕಾರಣಕ್ಕೆ 80 ಕಾರ್ಡುಗಳನ್ನು ಬಿಪಿಎಲ್ನಿಂದ ಎಪಿಎಲ್ಗೆ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.