ಬಿಜೆಪಿ ಭದ್ರಕೋಟೆಯಿಂದ ನಿರ್ಮಲಾ ಸೀತಾರಾಮನ್‌ ಸ್ಪರ್ಧೆಗೆ ಅಪಸ್ವರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಲ್ಲ ಎನ್ನುವ ಆರೋಪ ಕಾಂಗ್ರೆಸ್‌ನದು. ನಿರ್ಮಲಾ ಅವರು ಒಂದುವೇಳೆ ಬಿಜೆಪಿ ಭದ್ರಕೋಟೆಗಳಾದ ಬೆಂಗಳೂರು ದಕ್ಷಿಣ ಅಥವಾ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ ಆರೋಪಗಳು ಪಕ್ಷಕ್ಕೆ ಮುಳುವಾಗಬಹುದು ಎಂಬ ಆತಂಕ ರಾಜ್ಯದ ಬಿಜೆಪಿ ನಾಯಕರದು.

Update: 2024-03-12 13:01 GMT

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕರ್ನಾಟಕದಿಂದ ಕಣಕ್ಕಿಳಿಸುವ ಯೋಚನೆಗೆ ರಾಜ್ಯದ ಬಿಜೆಪಿ ನಾಯಕರೇ ಅಪಸ್ವರ ಎತ್ತಿದ್ದಾರೆ.

ಬಿಜೆಪಿಯ ಭದ್ರಕೋಟೆ ಎನ್ನಲಾದ ಬೆಂಗಳೂರು ದಕ್ಷಿಣ ಅಥವಾ ಮಂಗಳೂರು ಲೋಕಸಭಾ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್‌ ಅವರನ್ನು ಕಣಕ್ಕಿಳಿಸುವ ಇರಾದೆಯನ್ನು ಬಿಜೆಪಿ ವರಿಸ್ಠರು ಹೊಂದಿದ್ದಾರೆ. ಈ ಎರಡೂ ಕ್ಷೇತ್ರಗಳು ಅನೇಕ ವರ್ಷಗಳಿಂದ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುತ್ತಿದ್ದು ಪಕ್ಷದ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆಲ್ಲಬಹುದು ಎನ್ನುವ ಮಾತು ಬಿಜೆಪಿ ವಲಯದಲ್ಲಿದೆ. ಹಾಗಾಗಿ ರಾಷ್ಟ್ರಮಟ್ಟದ ನಾಯಕರಾದ ನಿರ್ಮಲಾ ಅವರನ್ನು ಈ ಹಿಂದೆ ರಾಜ್ಯಸಭೆ ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ನೇಮಕ ಮಾಡಿತ್ತಾದರೂ, ಈ ಬಾರಿ ಲೋಕಸಭೆಗೆ ಸ್ಪರ್ಧೆಗೆ ಅನುವು ಮಾಡಿಕೊಡಲು ಚಿಂತಿಸಲಾಗಿದ್ದು ಬೆಂಗಳೂರು ದಕ್ಷಿಣ ಅಥವಾ ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಒಂದನ್ನು ಅವರಿಗಾಗಿ ಬಿಟ್ಟುಕೊಡುವುದು ಬಿಜೆಪಿ ವರಿಷ್ಠರ ಇಂಗಿತವಾಗಿದೆ ಎನ್ನಲಾಗಿದೆ. 

ಆದರೆ, ಸೋಮವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ರಾಜ್ಯ ಘಟಕದ ನಾಯಕರ ಜತೆ ಮಾತುಕತೆ ನಡೆಸಿದ್ದು, ನಿರ್ಮಲಾ ಅವರ ಸ್ಪರ್ಧೆಗೆ ಬಿಜೆಪಿಯ ಪಾರ್ಲಿಮೆಂಟ್ ಬೋರ್ಡ್ ಸಮಿತಿ ಸದಸ್ಯರೂ ಆಗಿರುವ ಬಿ.ಎಸ್.‌ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಅಷ್ಟೇನೂ ಒಲವು ವ್ಯಕ್ತಪಡಿಸುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ನಾಯಕರೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದಾರೆ. ರಾಜ್ಯದ ನಾಯಕರ ಒಟ್ಡಾರೆ ಅಭಿಪ್ರಾಯಗಳನ್ನು ಯಡಿಯೂರಪ್ಪ ತಂಡ ವರಿಷ್ಠರ ಮುಂದಿಟ್ಟಿದೆ ಎನ್ನಲಾಗಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜಿ.ವಿ.ರಾಜೇಶ್ ಸೇರಿದಂತೆ ಇತರರು ರಾಜ್ಯದ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಆಯ್ಕೆ ಕಸರತ್ತು ನಡೆಯುತ್ತಿದ್ದು ಅಂತಿಮ ಸುತ್ತಿನ ಮಾತುಕತೆಗಳು ನಡೆದಿವೆ.

ಪಕ್ಷದ ಆಂತರಿಕ ಮೂಲಗಳ ಪ್ರಕಾರ, ನಿರ್ಮಲಾ ಅವರನ್ನು ಬೆಂಗಳೂರು ದಕ್ಷಿಣ ಅಥವಾ ಮಂಗಳೂರಿನಿಂದ ಕ್ರಮವಾಗಿ ತೇಜಸ್ವಿ ಸೂರ್ಯ ಅಥವಾ ನಳಿನ್ ಕುಮಾರ್ ಕಟೀಲ್ ಅವರ ಸ್ಥಾನದಲ್ಲಿ ಅವರನ್ನು ಕಣಕ್ಕಿಳಿಸಲು ಬಹುತೇಕ ನಿರ್ಧರಿಸಲಾಗಿತ್ತು. ಆದರೆ, ಬಿಎಸ್ ವೈ ಅವರು ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ನಿರ್ಮಲಾ ಸೀತಾರಾಮನ್‌ ಅವರನ್ನು ಕಣಕ್ಕಿಳಿಸುವ ವಿಚಾರವನ್ನು ಬೆಂಬಲಿಸುತ್ತಿಲ್ಲ ಎನ್ನಲಾಗಿದೆ. ಅದಕ್ಕೆ ಪ್ರಮುಖ ಕಾರಣವಾಗಿರುವುದು ನಿರ್ಮಲಾ ಸೀತಾರಾಮನ್ ಅವರ ತಮಿಳುನಾಡು ಮೂಲ ಎಂದು ಮೂಲಗಳು ತಿಳಿಸಿವೆ.

ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರಿನ ಬಿಕ್ಕಟ್ಟು ಮತ್ತು ಇತರ ಸಮಸ್ಯೆಗಳ ಸಂದರ್ಭದಲ್ಲಿ ಕರ್ನಾಟಕದ ಪರ ನಿಲುವು ತಳೆದಿಲ್ಲ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. “ಸಿದ್ದರಾಮಯ್ಯ ಸರ್ಕಾರವು ತೆರಿಗೆ ಹಂಚಿಕೆ ಸಮಸ್ಯೆಗಳು ಮತ್ತು ಕರ್ನಾಟಕಕ್ಕೆ ಬಜೆಟ್ ಅನುದಾನ ಮತ್ತು ಇತರ ಆರ್ಥಿಕ ಅಸಮಾನತೆ ಬಗ್ಗೆ ನಿರ್ಮಲಾ ಸೀತಾರಾಮನ್‌ ಅವರ ಬಗ್ಗೆ ಸದಾ ಟೀಕೆ ಮಾಡುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿಮಂಡಲ ದೆಹಲಿಯಲ್ಲಿ ‘ಚಲೋ ದೆಹಲಿ’ ಅಭಿಯಾನವನ್ನು ನಡೆಸಿ ಕೇಂದ್ರ ಸರ್ಕಾರವನ್ನು ಖಂಡಿಸಿದಾಗಲೂ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರೀಕರಿಸಿ ಟೀಕಾ ಪ್ರಹಾರ ನಡೆಸಿತು ಎಂಬಿತ್ಯಾದಿ ಅಂಶಗಳನ್ನು ಕರ್ನಾಟಕದ ನಾಯಕರು ಕೇಂದ್ರ ನಾಯಕತ್ವದ ಮುಂದೆ ತಂದಿದ್ದಾರೆ. ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ, ಕಾಂಗ್ರೆಸ್ ಆಕೆಯ ತಮಿಳು ಮೂಲದ ವಿಷಯವನ್ನು ಪ್ರಸ್ತಾಪಿಸಬಹುದು ಮತ್ತು ಅದು ಹಳೇ ಮೈಸೂರು ಭಾಗದ ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ'' ಎಂದು ಬಿಜೆಪಿ ಮಾಜಿ ಮಂತ್ರಿಯೊಬ್ಬರು ತಿಳಿಸಿದ್ದಾರೆ.

ಅದೇ ರೀತಿ, ಮಂಗಳೂರಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬಿಲ್ಲವ ಸಮುದಾಯದವರಿಂದ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ (ಬಂಟ ಸಮೂದಾಯದ ಮುಖಂಡ) ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ಇನ್ನೊಬ್ಬ ಅಭ್ಯರ್ಥಿಯ ತಲಾಶೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಬಿಜೆಪಿ ಯುವ ನಾಯಕ ಹಾಗೂ ಬಿಲ್ಲವ ಸಮೂದಾಯಕ್ಕೆ ಸೇರಿದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಂತರ (ಜುಲೈ 2022), ಬಿಲ್ಲವರು ತಮ್ಮ ಸಮುದಾಯದ ʼತ್ಯಾಗ, ಬಲಿದಾನʼಕ್ಕೆ ಪಕ್ಷ ಆದ್ಯತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಮಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಟಿಕೆಟ್ ಪಡೆಯಲು ಬಿಲ್ಲವರು ಮತ್ತು ಬಂಟರ ನಡುವೆ ಆಂತರಿಕ ಒತ್ತಾಸೆಯಿದ್ದರೂ ಕಟ್ಟಾ ಹಿಂದುತ್ವವಾದಿ, ಬ್ರಾಹ್ಮಣ ಮುಖಂಡ ಅರುಣ್ ಪುತ್ತಿಲ ಅವರು ಅಲ್ಲಿಂದ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಆದರೆ ಬಿಜೆಪಿಯನ್ನು ಬೆಂಬಲಿಸುತ್ತಿರುವ ಬಂಟ ಮತ್ತು ಬಿಲ್ಲವರ ನಡುವಿನ ʼತಳಮಳʼವನ್ನು ನಿವಾರಿಸಲು, ಅ ಪ್ರದೇಶದ ʼರಾಷ್ಟ್ರೀಯವಾದಿʼ ನಿಲುವಿನ ಸುಭದ್ರ ಮತಗಳನ್ನು ಪಡೆಯಲು ರಾಷ್ಟ್ರೀಯ ನಾಯಕರೊಬ್ಬರನ್ನು ಅಲ್ಲಿಂದ ಅಭ್ಯರ್ಥಿಯಾಗಿಸಿದರೆ ಹೇಗೆ ಎಂಬ ಚರ್ಚೆಯನ್ನು ಬಿಜೆಪಿ ವರಿಷ್ಠರು ನಡೆಸಿದ್ದಾರೆ. ಹಾಗಾಗಿ ನಿರ್ಮಲಾ ಅವರ ಹೆಸರನ್ನೂ ನಾಯಕರು ತೇಲಿಬಿಟ್ಟಿದೆ. ಆದರೆ, ಇದಕ್ಕೆ ರಾಜ್ಯ ಬಿಜೆಪಿ ಪ್ರಮುಖರಿಂದ ವಿರೋಧ ವ್ಯಕ್ತವಾಗಿದ್ದು, ಒಂದುವೇಳೆ ಬಂಟರು ಮತ್ತು ಬಿಲ್ಲವರು ತಟಸ್ಥರಾಗುವ ಸಾಧ್ಯತೆಯ ಬಗ್ಗೆ ಪ್ರತಿಪಾದಿಸಲಾಗಿದೆ.

ಬಿಲ್ಲವ ಮುಖಂಡ ಹಾಗೂ ಕರಾವಳಿ ಜಿಲ್ಲೆಯ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ತಮ್ಮ ಸಮುದಾಯದ ಯಾವುದೇ ಪಕ್ಷದ ನಾಯಕರನ್ನು ಬೆಂಬಲಿಸುವಂತೆ ಬಹಿರಂಗವಾಗಿ ಸಲಹೆ ನೀಡಿದ್ದಾರೆ. "ದಕ್ಷಿಣ ಕನ್ನಡ ಜಿಲ್ಲೆಯ ಸಮೂದಾಯದಗಳ ಪೈಕಿ ಬಿಲ್ಲವರದ್ದೇ ಗರಿಷ್ಠ ಸಂಖ್ಯೆಯಾಗಿದೆ. ಆದರೆ ರಕ್ಷಿತ್ ಶಿವರಾಮ್ (ಕಾಂಗ್ರೆಸ್) ಮತ್ತು ಸತೀಶ್ ಕುಂಪಲ (ಬಿಜೆಪಿ) ರಂತಹ ನಾಯಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ" ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಸಮುದಾಯದ ಕುದಿಯುತ್ತಿರುವ ಭಾವನೆಗಳಿಗೆ ಉದಾಹರಣೆಯಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಸ್ಥಳೀಯ ಸಮೂದಾಯಗಳಿಗೆ ಸೇರದ ಯಾವುದೇ ವ್ಯಕ್ತಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿದರೆ ಚುನಾವಣಾ ಫಲಿತಾಂಶದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿದೆ ಎಂದು ಮಂಗಳೂರು ಭಾಗದ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಇನ್ನೊಂದು ದೃಷ್ಟಿಕೋನ

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳ ಮೂಲದವರಾಗಿದ್ದರೂ, ಬೆಂಗಳೂರಿನಲ್ಲಿ ಪ್ರಬಲ ನೆಲೆಯನ್ನು ಹೊಂದಿದ್ದಾರೆ. ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಲು ಅವರಿಗೆ ಕರ್ನಾಟಕ ವಿಧಾನಸಭೆಯಿಂದ ಸ್ಪರ್ಧಿಸಲು ಕರ್ನಾಟಕ ಈ ಬಾರಿ ಟಿಕೆಟ್ ನೀಡಲಿಲ್ಲ ಮತ್ತು ಕಾಂಗ್ರೆಸ್‌ನ ಪ್ರಭಾವಿ ಮುಖಂಢ ಶಶಿ ತರೂರ್ ವಿರುದ್ಧ ಹೋರಾಡಲು ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಮೊದಲು ಅವರ ಹೆಸರನ್ನು ಬೆಂಗಳೂರು ದಕ್ಷಿಣ ಅಥವಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಪರಿಗಣಿಸಲಾಗಿತ್ತು. ಆದರೆ ಅವರ ಸ್ಥಳೀಯ ಕೇರಳಕ್ಕೆ ಬದಲಾಯಿಸಲಾಯಿತು. ಹೀಗಿರುವಾಗ ಕರ್ನಾಟಕದಲ್ಲಿ ಭದ್ರ ನೆಲೆಗಟ್ಟನ್ನು ಹೊಂದದ ಮತ್ತು ಭಾವನಾತ್ಮಕ ಸಂಬಂಧ ಇರಿಸಿಕೊಳ್ಳದ ನಿರ್ಮಲಾ ಅವರನ್ನು ಬೆಂಗಳೂರು ಮತ್ತು ಮಂಗಳೂರಿನಿಂದ ಏಕೆ ಸ್ಪರ್ಧೆಗೆ ಇಳಿಸಬೇಕೆಂಬ ಪ್ರಶ್ನೆ ರಾಜಕೀಯ ನಾಯಕರದು. ಅದರ ಬದಲಿಗೆ ಅವರ ತವರು ರಾಜ್ಯ ಸ್ಪರ್ಧಿಸುವಂತೆ ಸೂಚಿಸಿಲಾಗಿದೆ ಎಂದು ಹೇಳಲಾಗಿದೆ.

ಕನ್ಯಾಕುಮಾರಿಯಿಂದ?

ಎಐಎಡಿಎಂಕೆ ಬೆಂಬಲದೊಂದಿಗೆ ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್ ಸ್ಪರ್ಧಿಸಲು ಕೇಂದ್ರ ನಾಯಕತ್ವವು ಈಗ ಯೋಚಿಸುತ್ತಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಕ್ಷೇತ್ರದಲ್ಲಿ ಸಾಕಷ್ಟು ಬಿಜೆಪಿ ಬೆಂಬಲಿಗರು ಇರುವುದರಿಂದ 2014ರಲ್ಲಿ ಪಕ್ಷ ಗೆದ್ದಿತ್ತು. ಇದೇ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ರಾಷ್ಟ್ರೀಯ ನಾಯಕರನ್ನು ಕಣಕ್ಕಿಳಿಸದಿದ್ದರೆ ತೇಜಸ್ವಿ ಸೂರ್ಯ ಅವರಿಗೆ ಮತ್ತೆ ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಭದ್ರಕೋಟೆಯಾದ ಮಂಗಳೂರು ಹೊಸ ಮುಖವನ್ನು ಕಾಣಲಿದೆ ಎಂದು ಹೇಳಲಾಗುತ್ತಿದೆ.

Tags:    

Similar News