ಪೋಷಕರಿಗೆ ಲಕ್ಷಣಗಳಿಲ್ಲದಿದ್ದರೂ 9 ತಿಂಗಳ ಮಗುವಿಗೆ ಕೋವಿಡ್-19 ಸೋಂಕು: ವೈದ್ಯರಿಗೆ ಅಚ್ಚರಿ!
ಮಳೆಗಾಲ ಆರಂಭವಾಗಿದ್ದು ಈ ವೇಳೆ ನವಜಾತ ಶಿಶುಗಳು ಹಾಗೂ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಕೆಮ್ಮು,ನೆಗಡಿ ಹಾಗೂ ಜ್ವರದಂತಹ ಲಕ್ಷಣಗಳಿರುವವರಿಂದ ದೂರವಿರಬೇಕು ಹಾಗೂ ಮಕ್ಕಳಿಗೆ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೆ ವೈದ್ಯರ ಸಲಹೆ ಪಡೆಯಬೇಕು ಎಂದು ತಿಳಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ತಂದೆ-ತಾಯಿಗೆ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಒಂಬತ್ತು ತಿಂಗಳ ಮಗುವಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯರಲ್ಲಿ ಆಶ್ಚರ್ಯ ಮೂಡಿಸಿದೆ.
ಇತ್ತೀಚೆಗೆ ಮಗುವಿಗೆ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮಗುವನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಮಗುವನ್ನು ದಾಖಲಿಸಿದಾಗ. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸದ್ಯ ಮಗುವಿಗೆ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವನ್ನು ಆಟವಾಡಿಸಲು ಬಂದ ಸುತ್ತಮುತ್ತಲಿನ ಮನೆಯವರಿಂದ ಸೋಂಕು ತಗಲಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆಟವಾಡಿಸಲು ಬಂದ ಕೆಲವರಲ್ಲಿ ಶೀತ ಹಾಗೂ ಕೆಮ್ಮಿನ ಲಕ್ಷಣಗಳಿದ್ದವು ಎಂದು ಪೋಷಕರೂ ತಿಳಿಸಿದ್ದಾರೆ.
ಮಳೆಗಾಲ ಆರಂಭವಾಗಿದ್ದು, ಈ ವೇಳೆ ನವಜಾತ ಶಿಶುಗಳು ಹಾಗೂ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಕೆಮ್ಮು, ನೆಗಡಿ ಹಾಗೂ ಜ್ವರದಂತಹ ಲಕ್ಷಣಗಳಿರುವವರಿಂದ ಮಕ್ಕಳನ್ನು ದೂರವಿಡಬೇಕು. ಮಕ್ಕಳಿಗೆ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.