ಶಿರೂರು ಭೂಕುಸಿತ | ಹೆದ್ದಾರಿ ಪ್ರಾಧಿಕಾರದ ವಿವರಣೆ ಕೇಳಿದ ಎನ್‌ಜಿಟಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿ ಅವರಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಪ್ರಧಾನ ಪೀಠ ವಿವರಣೆ ಕೇಳಿ ನೋಟಿಸ್‌ ನೀಡಿದೆ.

Update: 2024-08-20 06:58 GMT
ಶಿರೂರು ಭೂಕುಸಿತ
Click the Play button to listen to article

ಉತ್ತರಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿ ಅವರಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಿದೆ.

ಹನ್ನೊಂದು ಜನರನ್ನು ಬಲಿ ತೆಗೆದುಕೊಂಡು ಭೀಕರ ಭೂ ಕುಸಿತ ಘಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೂ ಕಾರಣ ಎಂದು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ಹೀಗಾಗಿ, ಭೂಕುಸಿತದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಪೀಠವು, ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮಹಾನಿರ್ದೇಶಕರಿಗೂ ನೋಟಿಸ್ ನೀಡಿದೆ.

ಮಹಾರಾಷ್ಟ್ರದ ಪನ್ವೇಲ್ ಅನ್ನು ತಮಿಳುನಾಡಿನ ಕನ್ಯಾಕುಮಾರಿಯೊಂದಿಗೆ ಸಂಪರ್ಕಿಸುವ 1,640 ಕಿ.ಮೀ. ಉದ್ದದ ಹೆದ್ದಾರಿಯು ಶಿರೂರು ಮೂಲಕ ಹಾದು ಹೋಗುತ್ತಿದೆ. ಗುಡ್ಡ ಕೊರೆದು ಹೆದ್ದಾರಿ ನಿರ್ಮಾಣ ಮಾಡಿದ್ದ ಜಾಗದಲ್ಲೇ ಕಳೆದ ತಿಂಗಳು ಭಾರೀ ಮಳೆಯ ವೇಳೆ  ಭೂಕುಸಿತದಿಂದ ಎಂಟು ಮಂದಿ ಸತ್ತಿದ್ದಾರೆ. ನಾಪತ್ತೆಯಾದ ಮೂವರು ಇನ್ನೂ ಪತ್ತೆಯಾಗಿಲ್ಲ. ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ಹಾಗೂ ಅಲ್ಪಾವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ' ಎಂದು ನ್ಯಾಯಪೀಠದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ʼಹೆದ್ದಾರಿ ನಿರ್ಮಾಣಕ್ಕೆ ಇಳಿಜಾರು ಪ್ರದೇಶಗಳಲ್ಲಿ ಮಾರ್ಪಾಡು ಮಾಡಿದ್ದರಿಂದ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯಾಯಿತು. ಈ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳ ವಿಸ್ತರಣೆ ಹಾಗೂ ಬೆಟ್ಟಗಳನ್ನು ಲಂಬವಾಗಿ ಕತ್ತರಿಸುವ ಬಗ್ಗೆ ವಿಜ್ಞಾನಿಗಳು ಹಲವು ಸಲ ಎಚ್ಚರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕ 3,500-4000 ಮಿ.ಮೀ ಮಳೆಯಾಗುತ್ತದೆ. ಇಂತಹ ಪ್ರದೇಶದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವುದು ದೊಡ್ಡ ಸವಾಲು. ಸರ್ಕಾರಿ ಇಲಾಖೆಗಳು ರಸ್ತೆ ಯೋಜನೆಗಳನ್ನು ಕಾರ್ಯಗತಗೊಳಿಸುವ ಮೊದಲು ಭೂಪ್ರದೇಶದ ಸಮಗ್ರ ಅಧ್ಯಯನ ನಡೆಸುವುದು ಸೂಕ್ತ. ಈ ಬಗ್ಗೆ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಹ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಪರಿಸರ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆ ಆಗಿರುವುದು ಸ್ಪಷ್ಟ' ಎಂದ ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿಚಾರಣೆಯನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಲಾಗಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 30ರಂದು ನಡೆಯಲಿದೆ.

Tags:    

Similar News